ನೌಶಾಹ್ರೋ ಫಿರೋಜ್(ಪಾಕಿಸ್ತಾನ): 15 ದಿನಗಳ ಪುಟ್ಟ ಕಂದಮ್ಮನನ್ನು ಜನ್ಮ ನೀಡಿದ ತಂದೆಯೇ ಜೀವಂತ ಸಮಾಧಿ ಮಾಡಿರುವ ಅಮಾನವೀಯ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ತರುಷಾ ಎಂಬಲ್ಲಿ ನಡೆದಿದೆ. ಆರೋಪಿ ತಂದೆಯನ್ನು ತಯ್ಯಬ್ ಎಂದು ಗುರುತಿಸಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ತಯ್ಯಬ್ ತನ್ನ ದುಷ್ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಆರ್ಥಿಕ ಸಮಸ್ಯೆಯಿಂದಾಗಿ ಮಗಳಿಗೆ ಚಿಕಿತ್ಸೆ ಕೊಡಿಸಲು ಆಗಲಿಲ್ಲ. ಹಾಗಾಗಿ ಜೀವಂತ ಸಮಾಧಿ ಮಾಡಿದೆ. ಮಗುವನ್ನು ಹೂಳುವ ಮೊದಲು ಗೋಣಿಚೀಲದಲ್ಲಿ ಇರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಲಯದ ಆದೇಶದ ನಂತರ ಮಗುವನ್ನು ಸಮಾಧಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಮನೆಕೆಲಸದಾಕೆಯನ್ನು ವಿವಸ್ತ್ರಗೊಳಿಸಿ, ಕಿರುಕುಳ: ಪ್ರತ್ಯೇಕ ಘಟನೆಯೊಂದರಲ್ಲಿ ಪತಿ ಹಾಗೂ ಪತ್ನಿ ಸೇರಿ 13 ವರ್ಷದ ಮನೆಕೆಲಸದಾಕೆಯನ್ನು ವಿವಸ್ತ್ರಗೊಳಿಸಿ, ಚಿತ್ರಹಿಂಸೆ ನೀಡಿರುವುದು ಮಾತ್ರವಲ್ಲದೆ ನಿಂದಿಸಿರುವ ಘಟನೆ ಲಾಹೋರ್ನ ಡಿಫೆನ್ಸ್ ಬಿ ಪ್ರದೇಶದಲ್ಲಿ ನಡೆದಿದೆ.
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಾಸನ್ ಎಂಬಾತನನ್ನು ಬಂಧಿಸಲಾಗಿದ್ದು, ಆತನ ಪತ್ನಿಯನ್ನೂ ಬಂಧಿಸುವ ಪ್ರಯತ್ನದಲ್ಲಿದ್ದಾರೆ ಎಂದು ವರದಿಯಾಗಿದೆ.
ತಾಯಿ ನೀಡಿರುವ ದೂರಿನಲ್ಲಿ, ಸಂತ್ರಸ್ತೆಯನ್ನು ಕಳ್ಳತನದ ಅನುಮಾನದ ಮೇಲೆ ಬೆತ್ತಲೆಗೊಳಿಸಿರುವುದಲ್ಲದೆ, ದೈಹಿಕ ಕಿರುಕುಳ ನೀಡಿದ್ದಾರೆ. ಮಗಳ ಕೈ ಹಾಗೂ ಮೂಗಿಗೆ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.
ವೈದ್ಯಕೀಯ ಪರೀಕ್ಷೆಯ ಬಳಿಕ ಸಂಸತ್ರಸ್ತೆಯನ್ನು ತಾಯಿಯ ವಶಕ್ಕೆ ನೀಡಲಾಗಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಎಸ್ಪಿ ಕ್ಯಾಂಟ್ ತಿಳಿಸಿದ್ದಾರೆ.
ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಮೃತದೇಹ ಪತ್ತೆ: ವರದಕ್ಷಿಣೆ ಕಿರುಕುಳ ಆರೋಪ