ರಾವಲ್ಪಿಂಡಿ: ಪಾಕಿಸ್ತಾನದಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಕ್ರಮಗಳು ನಡೆದಿರುವ ಕಾರಣದಿಂದ ಪಾಕಿಸ್ತಾನಕ್ಕೆ ನೀಡುತ್ತಿರುವ ಧನಸಹಾಯವನ್ನು ನಿಲ್ಲಿಸುವಂತೆ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸ್ಥಾಪಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ (ಐಎಂಎಫ್) ಪತ್ರ ಬರೆಯಲಿದ್ದಾರೆ ಎಂದು ಪಕ್ಷದ ಮುಖಂಡ ಅಲಿ ಜಾಫರ್ ಗುರುವಾರ ತಿಳಿಸಿದ್ದಾರೆ.
"ಉತ್ತಮ ಆಡಳಿತವಿರುವ ದೇಶಗಳಿಗೆ ಮಾತ್ರ ಸಾಲ ನೀಡಬೇಕೆಂಬುದು ಐಎಂಎಫ್, ಇಯು ಮತ್ತು ಇತರ ಸಂಸ್ಥೆಗಳ ಚಾರ್ಟರ್ ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಇಂದು ಐಎಂಎಫ್ಗೆ ಪತ್ರ ರವಾನಿಸಲಿದ್ದಾರೆ" ಎಂದು ಜಾಫರ್ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಖಾನ್ ಅವರನ್ನು ಭೇಟಿಯಾದ ನಂತರ ಸುದ್ದಿಗಾರರಿಗೆ ತಿಳಿಸಿದರು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಸಾಲ ಪಡೆಯಬೇಕಾದರೆ ಆ ದೇಶವು ಪ್ರಜಾಸತ್ತಾತ್ಮಕವಾಗಿರಬೇಕು ಎಂಬುದು ಅವರ ಚಾರ್ಟರ್ನಲ್ಲಿನ ಪ್ರಮುಖ ನಿಬಂಧನೆಯಾಗಿದೆ ಎಂದು ಜಾಫರ್ ಹೇಳಿದ್ದಾರೆ.
"ಪ್ರಜಾಪ್ರಭುತ್ವವಿಲ್ಲದ ದೇಶಗಳಲ್ಲಿ ಐಎಂಎಫ್, ಇಯು ಮತ್ತು ಇತರ ಸಂಸ್ಥೆಗಳು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಹಾಗೂ ಅಂಥ ದೇಶಗಳಲ್ಲಿ ಅವು ಕಾರ್ಯನಿರ್ವಹಿಸಬಾರದು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಪ್ರಜಾಪ್ರಭುತ್ವದ ಮೂಲಧಾರವಾಗಿವೆ. ಆದಾಗ್ಯೂ, ರಾಷ್ಟ್ರದ ಜನಾದೇಶವನ್ನು ಹೇಗೆ ಕದಿಯಲಾಗಿದೆ ಎಂಬುದನ್ನು ಇಡೀ ಜಗತ್ತು ನೋಡಿದೆ. ಚುನಾವಣಾ ಪೂರ್ವ ಅಕ್ರಮಗಳ ಬಗ್ಗೆ ಬಿಡಿ, ಚುನಾವಣೋತ್ತರ ಅಕ್ರಮಗಳಲ್ಲಿ ವಿಜೇತ ಪಿಟಿಐ ಅಭ್ಯರ್ಥಿಗಳನ್ನು ಸೋಲಿಸಲಾಗಿದೆ" ಎಂದು ಅಲಿ ಜಾಫರ್ ಹೇಳಿದರು.
ಪಾಕಿಸ್ತಾನವು ಕಳೆದ ವರ್ಷ ಐಎಂಎಫ್ನಿಂದ 3 ಬಿಲಿಯನ್ ಡಾಲರ್ ಅಲ್ಪಾವಧಿಯ ಸಾಲ ಪಡೆದುಕೊಂಡಿದೆ. ಈ ಸಾಲದಿಂದ ದೇಶವು ಸಾರ್ವಭೌಮ ಸಾಲ ಸುಸ್ತಿದಾರ ಪಟ್ಟದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿತು. ಈ ಸಾಲದ ಅವಧಿ ಮುಂದಿನ ತಿಂಗಳು ಮುಗಿಯಲಿದ್ದು, ದೊಡ್ಡ ಮೊತ್ತದ ಹೊಸ ಸಾಲ ಪಡೆಯುವುದು ಹೊಸದಾಗಿ ರಚನೆಯಾಗಲಿರುವ ಸರ್ಕಾರದ ಮುಖ್ಯ ಆದ್ಯತೆಯಾಗಲಿದೆ.
ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್ ಎನ್), ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಮತ್ತು ಅವುಗಳ ಮಿತ್ರಪಕ್ಷಗಳು ಸಮ್ಮಿಶ್ರ ಸರ್ಕಾರ ರಚಿಸಲು ಒಪ್ಪಂದ ಮಾಡಿಕೊಂಡಿರುವುದರಿಂದ, ಪಿಟಿಐ ಮತ್ತು ಇತರ ಕೆಲವು ರಾಜಕೀಯ ಪಕ್ಷಗಳು ಚುನಾವಣೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿವೆ ಮತ್ತು ದೇಶಾದ್ಯಂತ ಪ್ರತಿಭಟನೆಗಳನ್ನು ಘೋಷಿಸಿವೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಇದನ್ನೂ ಓದಿ : ಒತ್ತೆಯಾಳು ವಿನಿಮಯ ಒಪ್ಪಂದವಾಗದಿದ್ದರೆ ರಂಜಾನ್ ತಿಂಗಳಲ್ಲೂ ಯುದ್ಧ ಮುಂದುವರಿಕೆ: ಇಸ್ರೇಲ್