ನ್ಯೂಯಾರ್ಕ್(ಅಮೆರಿಕ): ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 'ಹಶ್ ಮನಿ' ಪ್ರಕರಣದಲ್ಲಿ 'ದೋಷಿ' ಎಂದು ಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಟಿ ಸ್ಟಾರ್ಮಿ ಡೇನಿಯಲ್ ಎಂಬವರ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ ಪ್ರಕರಣದಲ್ಲಿ ಟ್ರಂಪ್ ವಿರುದ್ಧ ದಾಖಲಾದ ಎಲ್ಲಾ ಆರೋಪಗಳು ಸಾಬೀತಾಗಿವೆ ಎಂದು ನ್ಯೂಯಾರ್ಕ್ ಕೋರ್ಟ್ ತೀರ್ಪಿತ್ತಿದೆ.
ಟ್ರಂಪ್ ಒಟ್ಟು 34 ಆರೋಪಗಳಲ್ಲಿ ತಪ್ಪಿತಸ್ಥರು ಎಂದು ಕೋರ್ಟ್ ತಿಳಿಸಿದೆ. ಇಂತಹ ಪ್ರಕರಣಗಳಲ್ಲಿ ದೋಷ ಸಾಬೀತಾದ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಯೂ ಟ್ರಂಪ್ ಹೆಸರಿನಲ್ಲಿ ದಾಖಲಾಗಿದೆ.
ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್, ಬೈಡನ್ ಅವರನ್ನು ಎದುರಿಸಲಿದ್ದಾರೆ. ಐದು ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಈ ತೀರ್ಪು ಮಹತ್ವ ಪಡೆದುಕೊಂಡಿದೆ.
ಟ್ರಂಪ್ ವಿರುದ್ಧದ ಆರೋಪಗಳು: ಡೊನಾಲ್ಡ್ ಟ್ರಂಪ್ ಈ ಹಿಂದೆ ಸ್ಟಾರ್ಮಿ ಡೇನಿಯಲ್ ಅವರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. 2016ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಟ್ರಂಪ್, ಈ ವಿಚಾರವನ್ನು ಬಹಿರಂಗಪಡಿಸದಂತೆ ದೊಡ್ಡ ಮೊತ್ತದ ಹಣವನ್ನು (ಹಶ್ ಮನಿ) ಆಕೆಗೆ ಪಾವತಿಸಿದ್ದರು. ಈ ಕುರಿತಂತೆ ಹಲವು ಆರೋಪಗಳು ದಾಖಲಾಗಿದ್ದವು. ಇದೀಗ ಸುದೀರ್ಘ ವಿಚಾರಣೆಯ ನಂತರ, ನ್ಯಾಯಾಲಯ ಆರೋಪಗಳೆಲ್ಲವೂ ನಿಜ ಎಂದು ತೀರ್ಪು ನೀಡಿದೆ. ಟ್ರಂಪ್ ಜೊತೆಗಿನ ಅಕ್ರಮ ಸಂಬಂಧ ನಿಜವೆಂದು ಸ್ವತಃ ಸ್ಟಾರ್ಮಿ ಡೇನಿಯಲ್ಸ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು.
ಟ್ರಂಪ್‌ಗೆ ಜೈಲು ಶಿಕ್ಷೆಯಾಗುತ್ತಾ?: ಟ್ರಂಪ್ ತಪ್ಪಿತಸ್ಥ ಎಂದು ಸಾಬೀತಾಗಿದ್ದು ಇದೀಗ ಜೈಲು ಶಿಕ್ಷೆಯ ಕುರಿತು ಚರ್ಚೆಯಾಗುತ್ತಿದೆ. ಆದರೆ, ಇದಕ್ಕೆ ನಿಖರ ಉತ್ತರ ನೀಡಲು ಸಾಧ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಜುಲೈ 11ರಂದು ನ್ಯಾಯಾಲಯ ಶಿಕ್ಷೆ ವಿಧಿಸಲಿದೆ. ಸುಳ್ಳು ವ್ಯಾಪಾರ ದಾಖಲೆಗಳು ಪ್ರಕರಣಗಳು ನ್ಯೂಯಾರ್ಕ್‌ನಲ್ಲಿ ಕಡಿಮೆ ಗಂಭೀರ ಸ್ವರೂಪದ ಅಪರಾಧವಾಗಿದೆ. ಇದಕ್ಕೆ ಗರಿಷ್ಠ ನಾಲ್ಕು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಆದರೆ ಜೈಲು ಶಿಕ್ಷೆ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.
ಟ್ರಂಪ್ ಇನ್ನೂ ಮೂರು ಗಂಭೀರ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿದ್ದಾರೆ ಎಂಬುದು ಗಮನಾರ್ಹ. ಇವುಗಳಲ್ಲಿ ಯಾವುದೂ ಚುನಾವಣೆಗೆ ಮುನ್ನ ವಿಚಾರಣೆಗೆ ಬರುವ ಸಾಧ್ಯತೆ ಇಲ್ಲ ಎಂದು ಅವರ ಕಾನೂನು ತಂಡ ಹೇಳಿದೆ.
ಅಧ್ಯಕ್ಷೀಯ ಚುನಾವಣೆ ಮೇಲೇನು ಪರಿಣಾಮ?: ನ್ಯಾಯಾಲಯದ ತೀರ್ಪು ಟ್ರಂಪ್ ಅವರ ಅಧ್ಯಕ್ಷೀಯ ಉಮೇದುವಾರಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಎಂದಿನಂತೆ ಅವರು ಪ್ರಚಾರ ಮುಂದುವರಿಸಬಹುದಾಗಿದೆ. ಟ್ರಂಪ್ ಸೊಸೆ, ರಿಪಬ್ಲಿಕನ್ ರಾಷ್ಟ್ರೀಯ ಸಮಿತಿಯ ಸಹ-ಅಧ್ಯಕ್ಷೆ ಲಾರಾ ಮಾತನಾಡುತ್ತಾ, ಟ್ರಂಪ್ ಅಪರಾಧಿ ಎಂದು ಸಾಬೀತಾದರೆ ಮತ್ತು ಗೃಹಬಂಧನಕ್ಕೆ ಸೀಮಿತವಾದರೂ ಪ್ರಚಾರ ಮಾಡುತ್ತಾರೆ ಎಂದರು.
ಪ್ರಮುಖ ರಾಜಕೀಯ ತಂತ್ರಜ್ಞರು, ಬೈಡನ್ ಅವರನ್ನು ಸೋಲಿಸುವ ಶಕ್ತಿ ಟ್ರಂಪ್‌ಗೆ ಇನ್ನೂ ಇದೆ ಎಂದಿದ್ದಾರೆ. ಇದಲ್ಲದೆ, ಈ ತೀರ್ಪಿನಿಂದ ರಿಪಬ್ಲಿಕನ್ ಗುಂಪುಗಳು ಒಗ್ಗೂಡುತ್ತವೆ ಎಂದು ನಿರೀಕ್ಷಿಸಲಾಗಿದೆ. ಟ್ರಂಪ್ ಬೆಂಬಲಿಸಲು ದೊಡ್ಡ ಪ್ರಮಾಣದಲ್ಲಿ ದೇಣಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಶಿಕ್ಷೆ ಅಂತಿಮಗೊಳಿಸಿದ ನಂತರ ನ್ಯಾಯಾಲಯ ನೀಡಿರುವ ತೀರ್ಪಿನ ವಿರುದ್ಧ ಟ್ರಂಪ್ ಮೇಲ್ಮನವಿ ಸಲ್ಲಿಸಬಹುದು. ಅದಕ್ಕಾಗಿ ಅವರ ಕಾನೂನು ತಂಡ ಈಗಾಗಲೇ ಕೆಲಸ ಆರಂಭಿಸಿದೆ.
"ನಾನು ನಿರಪರಾಧಿ": ಈ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್, ಭ್ರಷ್ಟ, ವಿವಾದಿತ ನ್ಯಾಯಾಧೀಶರು ನಡೆಸಿದ ವಿಚಾರಣೆ ಇದು ಎಂದು ಆರೋಪಿಸಿದ್ದಾರೆ. ನವೆಂಬರ್ 5ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜನತೆ ನಿಜವಾದ ತೀರ್ಪು ನೀಡಲಿದ್ದಾರೆ. ನಾನು ನಿರಪರಾಧಿ ಎಂಬುದು ಎಲ್ಲರಿಗೂ ಗೊತ್ತು. ದೇಶಕ್ಕಾಗಿ ಮತ್ತು ನ್ಯಾಯಕ್ಕಾಗಿ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.
ಮತ್ತೊಂದೆಡೆ, ಬೈಡನ್ ಮತ್ತು ಹ್ಯಾರಿಸ್ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ. ಕಾನೂನಿಗಿಂತ ಯಾರೂ ಮೇಲಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಟ್ರಂಪ್ ತಮಗೆ ಯಾವುದೇ ಕಾನೂನು ಅನ್ವಯಿಸದು ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಅಧ್ಯಕ್ಷ ರೈಸಿ ಇದ್ದ ಹೆಲಿಕಾಪ್ಟರ್ ಪತನ ಘಟನೆ: ವಿಧ್ವಂಸಕ ಕೃತ್ಯವಲ್ಲ ಎಂದ 2ನೇ ವರದಿ - Raisi helicopter crash