ನವದೆಹಲಿ: ಕೆನಡಾದ ಹಿಂದಿನ ಎರಡು ಚುನಾವಣೆಗಳಲ್ಲಿ ಚೀನಾ ರಹಸ್ಯವಾಗಿ ಮೋಸದಿಂದ ಹಸ್ತಕ್ಷೇಪ ಮಾಡಿತ್ತು ಎಂದು ಕೆನಡಾದ ಭದ್ರತಾ ಗುಪ್ತಚರ ಸಂಸ್ಥೆ (ಸಿಎಸ್ಐಎಸ್) ಹೇಳಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
"ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (ಪಿಆರ್ಸಿ) 2019 ಮತ್ತು 2021 ರ ಚುನಾವಣೆಗಳಲ್ಲಿ ರಹಸ್ಯವಾಗಿ ಮತ್ತು ಮೋಸದಿಂದ ಹಸ್ತಕ್ಷೇಪ ಮಾಡಿದೆ ಎಂಬುದು ನಮಗೆ ತಿಳಿದಿದೆ" ಎಂದು ಸಿಎಸ್ಐಎಸ್ ಸಂಸ್ಥೆಯು ಪ್ರಧಾನಿ ಜಸ್ಟಿನ್ ಟ್ರುಡೊ ರಚಿಸಿದ ಆಯೋಗಕ್ಕೆ ತಿಳಿಸಿದೆ. ಕೆನಡಾದ ಚುನಾವಣೆಗಳಲ್ಲಿ ಚೀನಾದ ಸಂಭಾವ್ಯ ಹಸ್ತಕ್ಷೇಪದ ಬಗ್ಗೆ ತನಿಖೆ ನಡೆಸುವಂತೆ ವಿರೋಧ ಪಕ್ಷದ ಶಾಸಕರ ಒತ್ತಾಯದ ಮೇರೆಗೆ ಪ್ರಧಾನಿ ಜಸ್ಟಿನ್ ಟ್ರುಡೊ ಇದಕ್ಕಾಗಿ ತನಿಖಾ ಆಯೋಗ ರಚಿಸಿದ್ದರು.
ಜಸ್ಟಿನ್ ಟ್ರುಡೋ ಅವರ ಲಿಬರಲ್ ಪಾರ್ಟಿ 2019 ಮತ್ತು 2021 ರಲ್ಲಿ ನಡೆದ ಎರಡೂ ಚುನಾವಣೆಗಳಲ್ಲಿ ಜಯಗಳಿಸಿದೆ. ಎರಡೂ ಸಂದರ್ಭಗಳಲ್ಲಿ ವಿದೇಶಿ ಹಸ್ತಕ್ಷೇಪ (ಎಫ್ಐ)ದ ಚಟುವಟಿಕೆಗಳು ಪ್ರಾಯೋಗಿಕ ಸ್ವರೂಪದ್ದಾಗಿವೆ ಮತ್ತು ಪ್ರಾಥಮಿಕವಾಗಿ ಚೀನಾ ಸರ್ಕಾರದ ಆಸಕ್ತಿಯ ವಿಷಯಗಳ ಬಗ್ಗೆ 'ಪಿಆರ್ಸಿ ಪರ' ಅಥವಾ 'ತಟಸ್ಥ' ಎಂದು ಪರಿಗಣಿಸಲ್ಪಟ್ಟವರನ್ನು ಬೆಂಬಲಿಸುವತ್ತ ಕೇಂದ್ರೀಕರಿಸಿದ್ದವು ಎಂದು ಸಿಎಸ್ಐಎಸ್ ಹೇಳಿದೆ.
ಅನೇಕ ರಾಜಕೀಯ ಪಕ್ಷಗಳು, ಕನಿಷ್ಠ 11 ಅಭ್ಯರ್ಥಿಗಳು ಮತ್ತು 13 ಸಿಬ್ಬಂದಿ ಸದಸ್ಯರು ಚೀನಾ ಸರ್ಕಾರದ 'ವಿದೇಶಿ ಹಸ್ತಕ್ಷೇಪ'ದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಎಸ್ಐಎಸ್ ದಾಖಲೆ ಆರೋಪಿಸಿದೆ. ಏತನ್ಮಧ್ಯೆ ವಿಚಾರಣೆಯಲ್ಲಿ ಈ ಹಿಂದೆ ಮಂಡಿಸಲಾದ ಮತ್ತೊಂದು ಸಿಎಸ್ಐಎಸ್ ದಾಖಲೆಯು ಏಳು ಲಿಬರಲ್ ಅಭ್ಯರ್ಥಿಗಳು ಮತ್ತು ಕೆನಡಾದ ಕನ್ಸರ್ವೇಟಿವ್ ಪಕ್ಷದ ನಾಲ್ವರನ್ನು ಹೆಸರಿಸಿದೆ.
"ಯಾವುದೇ ಕಾನೂನು ಅಥವಾ ರಾಜಕೀಯ ತೊಡಕುಗಳಿಲ್ಲದ ಕಾರಣದಿಂದ ಹೊರಗಿನ ವ್ಯಕ್ತಿಗಳು ಕೆನಡಾದಲ್ಲಿ ಯಶಸ್ವಿಯಾಗಿ ವಿದೇಶಿ ಹಸ್ತಕ್ಷೇಪ ನಡೆಸಲು ಸಾಧ್ಯವಾಗುತ್ತಿದೆ. ಹೀಗಾಗಿ ವಿದೇಶಿ ಹಸ್ತಕ್ಷೇಪವು ಕಡಿಮೆ ಅಪಾಯದ ಅತಿ ಹೆಚ್ಚು ಪ್ರತಿಫಲ ನೀಡುವ ಚಟುವಟಿಕೆಯಾಗಿದೆ" ಎಂದು ಸಿಎಸ್ಐಎಸ್ ಹೇಳಿದೆ.
ಚೀನಾದ ಹಸ್ತಕ್ಷೇಪದ ಕಾರಣದಿಂದ 2021 ರ ಚುನಾವಣೆಯ ಸಮಯದಲ್ಲಿ ತಮ್ಮ ಪಕ್ಷಕ್ಕೆ ಒಂಬತ್ತು ಸ್ಥಾನಗಳಲ್ಲಿ ಸೋಲುಂಟಾಗಿದೆ ಎಂದು ಕನ್ಸರ್ವೇಟಿವ್ ಪಕ್ಷದ ಪ್ರಮುಖ ಪ್ರಚಾರಕ ಎರಿನ್ ಒ'ಟೂಲ್ ಹೇಳಿದ್ದಾರೆ. ಕೆನಡಾದ 2021 ರ ಜನಗಣತಿಯ ಪ್ರಕಾರ, ಕೆನಡಾದಲ್ಲಿ ಚೀನೀ ಮೂಲದ ಸುಮಾರು 1.7 ಮಿಲಿಯನ್ ಜನ ವಾಸಿಸುತ್ತಿಧ್ದಾರೆ. ಇದು ಒಟ್ಟು ಜನಸಂಖ್ಯೆಯ ಶೇಕಡಾ 5ಕ್ಕಿಂತ ಕಡಿಮೆಯಾಗಿದೆ.
ಇದನ್ನೂ ಓದಿ : 40 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ನಕಾರ: ಕದನ ವಿರಾಮ ಮಾತುಕತೆ ಮತ್ತೆ ವಿಫಲ - Israel Hamas war