ಟೆಲ್ ಅವೀವ್ : ಹಮಾಸ್ ಮತ್ತು ಇಸ್ರೇಲ್ ಮಧ್ಯೆ ನಡೆಯುತ್ತಿರುವ ಯುದ್ಧದಲ್ಲಿ ಅಮೆರಿಕ, ಈಜಿಪ್ಟ್ ಮತ್ತು ಕತಾರ್ ಪ್ರಸ್ತಾಪಿಸಿದ ಕದನ ವಿರಾಮ ಪ್ರಸ್ತಾವನೆಗಳು ಮುಂದುವರಿಯದ ಕಾರಣದಿಂದ ಈ ಬಗ್ಗೆ ಮತ್ತೊಂದು ಹಂತದ ಪ್ರಯತ್ನವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಉನ್ನತ ಸಲಹೆಗಾರ ಬುಧವಾರ ಇಸ್ರೇಲ್ ಮತ್ತು ಈಜಿಪ್ಟ್ಗೆ ಭೇಟಿ ನೀಡಲಿದ್ದಾರೆ.
ಅಮೆರಿಕ ಅಧ್ಯಕ್ಷರ ಹಿರಿಯ ಸಲಹೆಗಾರ ಬ್ರೆಟ್ ಮೆಕ್ಗುರ್ಕ್ ಈಜಿಪ್ಟ್ ತಲುಪಲಿದ್ದು, ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆಗಾಗಿ ನಡೆಯುತ್ತಿರುವ ಶಾಂತಿ ಮಾತುಕತೆಗಳನ್ನು ವೇಗಗೊಳಿಸಲಿದ್ದಾರೆ.
ಬ್ರೆಟ್ ಮೆಕ್ಗುರ್ಕ್ ಅವರು ಈಜಿಪ್ಟ್ ಗುಪ್ತಚರ ಮುಖ್ಯಸ್ಥ ಅಬ್ಬಾಸ್ ಕಮಲ್ ಅವರನ್ನು ಭೇಟಿಯಾಗಲಿದ್ದು, ಇತರ ಹಿರಿಯ ಈಜಿಪ್ಟ್ ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಲಿದ್ದಾರೆ. ಈಜಿಪ್ಟ್ನೊಂದಿಗೆ ಗಡಿ ಹಂಚಿಕೊಂಡಿರುವ ಗಾಜಾ ಪಟ್ಟಿಯ ರಫಾ ಮೇಲೆ ಇಸ್ರೇಲ್ ಆರಂಭಿಸಿರುವ ನೆಲದ ದಾಳಿಯು ಅಮೆರಿಕ ಅಧಿಕಾರಿ ಮತ್ತು ಈಜಿಪ್ಟ್ ಅಧಿಕಾರಿಗಳ ಮಧ್ಯೆ ಪ್ರಮುಖವಾಗಿ ಚರ್ಚೆಯಾಗಲಿದೆ.
ಈಜಿಪ್ಟ್ ಭೇಟಿಯ ನಂತರ ಮೆಕ್ಗುರ್ಕ್ ಟೆಲ್ ಅವೀವ್ ಗೆ ತೆರಳಲಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರೊಂದಿಗೆ ಸಭೆ ನಡೆಸಲಿದ್ದಾರೆ. ಇಸ್ರೇಲ್ ಯುದ್ಧ ಕ್ಯಾಬಿನೆಟ್ ಸದಸ್ಯ ಮತ್ತು ಖಾತೆಯಿಲ್ಲದ ಸಚಿವ ಬೆನ್ನಿ ಗಾಂಟ್ಜ್ ಅವರು ಮೆಕ್ಗುರ್ಕ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಎರಡನೇ ಕದನ ವಿರಾಮಕ್ಕಾಗಿ ಯುರೋಪ್, ಕೈರೋ ಮತ್ತು ದೋಹಾದಲ್ಲಿ ನಡೆದ ಸರಣಿ ಮಧ್ಯಸ್ಥಿಕೆ ಮಾತುಕತೆಗಳು ಈವರೆಗೆ ಫಲ ನೀಡಿಲ್ಲ.
ಶಾಶ್ವತ ಕದನ ವಿರಾಮ ಮತ್ತು ಗಾಜಾದಿಂದ ಐಡಿಎಫ್ ಸಂಪೂರ್ಣವಾಗಿ ಹಿಂದೆ ಸರಿಯಬೇಕು ಎಂದು ಹಮಾಸ್ ಷರತ್ತು ಹಾಕಿದೆ. ಆದರೆ ನಾಲ್ಕು ವಾರಗಳ ತಾತ್ಕಾಲಿಕ ಕದನ ವಿರಾಮಕ್ಕೆ ಪ್ರತಿಯಾಗಿ ಹಮಾಸ್ ತನ್ನ ಬಳಿ ಇರುವ 35 ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕೆಂದು ಇಸ್ರೇಲ್ ಹೇಳಿದೆ. ಅಲ್ಲದೆ ಹಮಾಸ್ ಬಿಡುಗಡೆ ಮಾಡುವ ಒತ್ತೆಯಾಳುಗಳಿಗಿಂತ ಮೂರು ಪಟ್ಟು ಹೆಚ್ಚಿನ ಸಂಖ್ಯೆ ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಇಸ್ರೇಲ್ ತಿಳಿಸಿದೆ.
ಅಕ್ಟೋಬರ್ 7, 2023 ರಂದು ಯುದ್ಧ ಪ್ರಾರಂಭವಾದಾಗಿನಿಂದ ನವೆಂಬರ್ 24 ಮತ್ತು ಡಿಸೆಂಬರ್ 1 ರ ನಡುವಿನ ಒಂದು ವಾರದ ಕದನ ವಿರಾಮದ ಸಮಯದಲ್ಲಿ ಇಸ್ರೇಲಿ ಜೈಲುಗಳಲ್ಲಿದ್ದ 324 ಪ್ಯಾಲೆಸ್ಟೈನಿಯರಿಗೆ ಬದಲಾಗಿ 105 ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿತ್ತು. ಏತನ್ಮಧ್ಯೆ ಆದಷ್ಟು ಬೇಗ ಕದನವಿರಾಮ ಸ್ಥಾಪಿಸಿ ಹಮಾಸ್ ವಶದಲ್ಲಿರುವ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಬೇಕೆಂದು ಒತ್ತೆಯಾಳುಗಳ ಕುಟುಂಬಸ್ಥರು ಇಸ್ರೇಲ್ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ : ಆರ್ಥಿಕ ಕುಸಿತ: ಚೀನಾದಲ್ಲಿ ಕಾರ್ಮಿಕರ ಪ್ರತಿಭಟನೆ ತೀವ್ರ ಹೆಚ್ಚಳ