ಢಾಕಾ(ಬಾಂಗ್ಲಾದೇಶ): ವಿದ್ಯಾರ್ಥಿಗಳ ಬಂಡಾಯದಿಂದಾಗಿ ಶೇಕ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶ ತೊರೆದಿದ್ದಾರೆ. ಸದ್ಯ ಬಾಂಗ್ಲಾದೇಶದಲ್ಲಿ ಸೇನಾಡಳಿತ ಹೇರಲಾಗಿದೆ. ಮುಂದಿನ ಮಧ್ಯಂತರ ಸರ್ಕಾರ ರಚನೆಗೆ ದಾರಿ ಮಾಡಿಕೊಡಲು ರಾಷ್ಟ್ರಪತಿ ಮೊಹಮ್ಮದ್ ಶಹಾಬುದ್ದೀನ್ ಸಂಸತ್ತನ್ನು ವಿಸರ್ಜಿಸಿ ಮಂಗಳವಾರ ಆದೇಶಿಸಿದ್ದಾರೆ.
ಪ್ರಧಾನಿ ಶೇಕ್ ಹಸೀನಾ ರಾಜೀನಾಮೆ ನೀಡಿದ ಒಂದು ದಿನದ ಮೂರು ಸಶಸ್ತ್ರ ಪಡೆಗಳು ಮುಖ್ಯಸ್ಥರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಮಾಜದ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿ ಚಳವಳಿಯ ನಾಯಕರೊಂದಿಗೆ ಸಭೆ ನಡೆಸಿದ ಬಳಿಕ ರಾಷ್ಟ್ರಪತಿ ಮೊಹಮ್ಮದ್ ಶಹಾಬುದ್ದೀನ್ ಈ ನಿರ್ಧಾರ ಪ್ರಕಟಿಸಿದ್ದಾರೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಸಂಸತ್ತನ್ನು ವಿಸರ್ಜನೆ ಮಾಡಲಾಗಿದೆ. ಹೊಸ ಮಧ್ಯಂತರ ಸರ್ಕಾರವನ್ನು ರಚನೆ ಮಾಡಲಾಗುವುದು ಎಂದು ರಾಷ್ಟ್ರಪತಿಗಳ ಕಚೇರಿ ತಿಳಿಸಿದೆ.
ಮಾಜಿ ಪ್ರಧಾನಿ ಖಲೀದಾ ಜಿಯಾ, ವಿದ್ಯಾರ್ಥಿಗಳ ಬಿಡುಗಡೆ: ಸಂಸತ್ತು ವಿಸರ್ಜನೆ ಜೊತೆಗೆ ಮಹತ್ವದ ನಿರ್ಧಾರ ಕೈಗೊಂಡಿರುವ ರಾಷ್ಟ್ರಪತಿಗಳು, ಮಾಜಿ ಪ್ರಧಾನಿ, ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಅಧ್ಯಕ್ಷೆ ಖಲೀದಾ ಜಿಯಾ ಅವರನ್ನು ಜೈಲಿನಿಂದ ಬಿಡುಗಡೆಗೂ ಸೂಚಿಸಿದ್ದಾರೆ. ಜೊತೆಗೆ, ಜುಲೈ 1ರಿಂದ ಆಗಸ್ಟ್ 5ರ ವರೆಗೆ ನಡೆದ ಚಳವಳಿಯಲ್ಲಿ ಬಂಧಿತರಾಗಿರುವ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಲೂ ಆದೇಶಿಸಲಾಗಿದೆ.
ಸಭೆಯಲ್ಲಿ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ಅವರನ್ನು ತಕ್ಷಣಕ್ಕೆ ಬಿಡುಗಡೆ ಮಾಡುವಂತೆ ಸರ್ವಾನುಮತದಿಂದ ನಿರ್ಧರಿಸಲಾಯಿತು. 78 ವರ್ಷದ ಜಿಯಾ ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಜೈಲಿನಿಂದ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜಕೀಯ ದ್ವೇಷದ ಆರೋಪ: ಮಾಜಿ ಪ್ರಧಾನಿ ಜಿಯಾ ವಿರುದ್ಧ ಶೇಕ್ ಹಸೀನಾ ಅವರ ರಾಜಕೀಯ ಬದ್ಧವೈರಿಯಾಗಿದ್ದಾರೆ. 2018ರಲ್ಲಿ ಅವರ ಮೇಲೆ ಭ್ರಷ್ಟಾಚಾರ ಆರೋಪ ಮಾಡಿ ಹಲವು ಪ್ರಕರಣಗಳಲ್ಲಿ 17 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅನಾಥ ಆಶ್ರಮದ ಟ್ರಸ್ಟ್ವೊಂದಕ್ಕೆ ಬಂದ ದೇಣಿಗೆಯಲ್ಲಿ 250,000 ಅಮೆರಿಕನ್ ಡಾಲರ್ ಗುಳುಂ ಮಾಡಿದ ಆರೋಪ ಈಕೆಯ ಮೇಲಿದ್ದು, ಇದು ಸಾಬೀತಾಗಿತ್ತು.
ರಾಜಕೀಯ ಕಾರಣಕ್ಕಾಗಿ ಜಿಯಾ ಅವರ ಮೇಲೆ ಗಂಭೀರ ಆರೋಪ ಮಾಡಿ, ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷ ಆರೋಪ ಮಾಡಿತ್ತು. ಇದನ್ನು ಶೇಕ್ ಹಸೀನಾ ಅವರ ಸರ್ಕಾರವು ನಿರಾಕರಿಸಿತ್ತು. 2018 ರಿಂದ ಜಿಯಾ ಅವರು ಜೈಲಿನಲ್ಲಿ ಇದ್ದರು.
ದೇಶ ತೊರೆದ ಹಸೀನಾ: ಮೀಸಲಾತಿ ವಿರೋಧ ಹಿಂಸಾತ್ಮಕ ಹೋರಾಟಕ್ಕೆ ಮಣಿದ ಶೇಕ್ ಹಸೀನಾ ಅವರ ಆಗಸ್ಟ್ 5ರಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶ ಬಿಟ್ಟು ಪರಾರಿಯಾಗಿದ್ದರು. ಸದ್ಯ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಅನುಮತಿ ಸಿಕ್ಕ ಬಳಿಕ ಇಲ್ಲಿಂದ ಅವರು ಲಂಡನ್ಗೆ ತೆರಳುವ ಸಾಧ್ಯತೆ ಇದೆ.
ಪ್ರತಿಭಟನಾಕಾರರ ಪುಂಡಾಟಿಕೆ: ಸಾವಿರಾರು ಸಂಖ್ಯೆಯಲ್ಲಿದ್ದ ಉದ್ರಿಕ್ತ ಪ್ರತಿಭಟನಾಕಾರರು, ಸೋಮವಾರ ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಿ ಸಿಕ್ಕ ಸಿಕ್ಕ ವಸ್ತುಗಳನ್ನು ನಾಶ ಮಾಡಿ ಕೆಲವನ್ನು ಕದ್ದೊಯ್ದಿದ್ದಾರೆ. ಸಂಸತ್ತಿನ ಸೀಟುಗಳಲ್ಲಿ ಕುಳಿತು ಸಿಗರೇಟ್ ಸೇದಿದ್ದಾರೆ. ಹಸೀನಾ ಅವರು ಬಳಸುತ್ತಿದ್ದ ಬೆಡ್ ಮೇಲೆ ಮಲಗಿ, ತುಳಿದಾಡಿದ್ದಾರೆ. ಅವರ ಸೀರೆ, ವಸ್ತುಗಳನ್ನು ಜನರು ತೆಗೆದುಕೊಂಡು ಹೋಗಿದ್ದಾರೆ. ಪ್ರಧಾನಿ ನಿವಾಸದಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಪ್ರತಿಭಟನಾಕಾರರು ಕಳುವು ಮಾಡಿದ್ದಾರೆ. ಇದರ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.