ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಕನಿಷ್ಠ 49 ಶಿಕ್ಷಕರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಬಲವಂತದಿಂದ ಇವರು ರಾಜೀನಾಮೆ ಕೊಡುವಂತೆ ಮಾಡಲಾಗಿದೆ ಎಂದು ವರದಿಗಳು ಹೇಳಿವೆ.
ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಒಕ್ಯ ಪರಿಷತ್ನ ವಿದ್ಯಾರ್ಥಿ ವಿಭಾಗವಾದ ಬಾಂಗ್ಲಾದೇಶ ಛಾತ್ರ ಒಕ್ಯ ಪರಿಷತ್ ಶನಿವಾರ ಜತಿಯಾ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.
ಹಸೀನಾ ನೇತೃತ್ವದ ಸರ್ಕಾರದ ಪತನದ ನಂತರ, ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರು ಹಿಂಸಾಚಾರಕ್ಕೆ ಬಲಿಯಾಗುತ್ತಿದ್ದಾರೆ ಎಂದು ಸಂಘಟನೆಯ ಸಂಯೋಜಕ ಸಜೀಬ್ ಸರ್ಕಾರ್ ಹೇಳಿದ್ದಾರೆ. ಇದರಲ್ಲಿ ದಾಳಿಗಳು, ಲೂಟಿ, ಮಹಿಳೆಯರ ಮೇಲಿನ ಹಲ್ಲೆಗಳು, ದೇವಾಲಯಗಳ ವಿಧ್ವಂಸಕ ಕೃತ್ಯಗಳು, ಮನೆಗಳು ಮತ್ತು ವ್ಯಾಪಾರಗಳಿಗೆ ಬೆಂಕಿ ಹಚ್ಚುವ ಕೃತ್ಯಗಳು ಮತ್ತು ಕೊಲೆಗಳು ಸೇರಿವೆ ಎಂದು ಅವರು ಹೇಳಿದರು.
ದೇಶಾದ್ಯಂತ ಅಲ್ಪಸಂಖ್ಯಾತ ಶಿಕ್ಷಕರ ಮೇಲೆ ದೈಹಿಕ ಹಲ್ಲೆಗಳು ನಡೆದಿವೆ. ಆಗಸ್ಟ್ 30ರ ಹೊತ್ತಿಗೆ ಕನಿಷ್ಠ 49 ಶಿಕ್ಷಕರಿಂದ ಬಲವಂತದಿಂದ ರಾಜೀನಾಮೆ ಕೊಡಿಸಲಾಗಿದೆ ಎಂದು ಸರ್ಕಾರ್ ಬಹಿರಂಗಪಡಿಸಿದರು. ಆದಾಗ್ಯೂ, ಅದರಲ್ಲಿನ 19 ಶಿಕ್ಷಕರನ್ನು ಪುನಃ ನೇಮಿಸಲಾಗಿದೆ ಎಂದು ಅವರು ಹೇಳಿದರು.
ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ನೇತೃತ್ವದ ಹಿಂಸಾತ್ಮಕ ಮೀಸಲಾತಿ ವಿರೋಧಿ ಪ್ರತಿಭಟನೆಗಳಲ್ಲಿ 400 ಕ್ಕೂ ಹೆಚ್ಚು ಜನ ಸಾವಿಗೀಡಾದ ನಂತರ ಶೇಖ್ ಹಸೀನಾ ಅವರ ಸರ್ಕಾರ ಕಳೆದ ತಿಂಗಳು ಅಧಿಕಾರದಿಂದ ಕೆಳಗಿಳಿಯಬೇಕಾಯಿತು.
ಕಳೆದ ತಿಂಗಳು, ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಮುಹಮ್ಮದ್ ಯೂನುಸ್ ಅವರು ಪ್ರಮಾಣವಚನ ಸ್ವೀಕರಿಸಿದ ನಂತರ ಸಂವಿಧಾನವನ್ನು ಎತ್ತಿಹಿಡಿಯುವುದಾಗಿ ಅವರು ಹೇಳಿದ್ದಾರೆ.
ಆಗಸ್ಟ್ 5 ರಿಂದ ಈವರೆಗೆ ದೇಶದ 48 ಜಿಲ್ಲೆಗಳಲ್ಲಿನ 278 ಸ್ಥಳಗಳಲ್ಲಿ ಹಿಂದೂ ಕುಟುಂಬಗಳ ಮೇಲೆ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳು ನಡೆದಿವೆ ಎಂದು ದೇಶದ 23 ಧಾರ್ಮಿಕ ಸಂಘಟನೆಗಳ ಮಹಾ ರಾಷ್ಟ್ರೀಯ ಒಕ್ಕೂಟವಾದ ಬಾಂಗ್ಲಾದೇಶ್ ಜಾತೀಯ ಹಿಂದೂ ಮೊಹಾಜೋತ್ (ಬಿಜೆಎಚ್ಎಂ) ಹೇಳಿದೆ.
ಏತನ್ಮಧ್ಯೆ ಬಾಂಗ್ಲಾದೇಶದ ಸ್ಥಿರತೆ ಮತ್ತು ಅಭಿವೃದ್ಧಿಗೆ ಭಾರತ ಸದಾ ಬೆಂಬಲ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ. ಮುಂಬರುವ ದಿನಗಳಲ್ಲಿ, ಯಾವಾಗಲೂ ಬಾಂಗ್ಲಾದೇಶದ ಅಭಿವೃದ್ಧಿಯ ಪ್ರಯಾಣಕ್ಕೆ ಒಳ್ಳೆಯದನ್ನು ಬಯಸುತ್ತೇವೆ. ನಾವು ಮಾನವಕುಲದ ಹಿತೈಷಿಗಳು ಎಂದು ಅವರು ಹೇಳಿದರು.
ಇದನ್ನೂ ಓದಿ : ಕೇಂದ್ರ ವಾಯು ಕಮಾಂಡ್ನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ದೀಕ್ಷಿತ್ ಅಧಿಕಾರ ಸ್ವೀಕಾರ - AIR MARSHAL DIXIT