ಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಯ ವಿಷಯವನ್ನು ಉತ್ಪ್ರೇಕ್ಷೆಯಾಗಿ ಬಿಂಬಿಸಲಾಗಿದೆ ಎಂದಿರುವ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್, ಭಾರತವು ಅದನ್ನು ಪ್ರಚಾರ ಮಾಡಿದ ರೀತಿಯನ್ನು ಪ್ರಶ್ನಿಸಿದ್ದಾರೆ.
ತಮ್ಮ ಅಧಿಕೃತ ನಿವಾಸದಲ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಯೂನುಸ್, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಕೋಮುವಾದಕ್ಕಿಂತ ಹೆಚ್ಚು ರಾಜಕೀಯ ಕಾರಣಗಳಿಗಾಗಿ ನಡೆದಿವೆ ಎಂದು ಹೇಳಿದರು. ಬಹುತೇಕ ಹಿಂದೂಗಳು ಈಗ ಪದಚ್ಯುತಗೊಂಡ ಅವಾಮಿ ಲೀಗ್ ಆಡಳಿತದ ಬೆಂಬಲಿಗರಾಗಿದ್ದರು. ರಾಜಕೀಯ ಕಾರಣಗಳಿಗಾಗಿ ಅವರ ಮೇಲೆ ನಡೆದ ದಾಳಿಗಳನ್ನು ಧಾರ್ಮಿಕ ದಾಳಿಗಳೆಂದು ಗ್ರಹಿಸಲಾಗುತ್ತಿದೆ. ಆದರೆ ಈ ದಾಳಿಗಳು ಕೋಮುವಾದಿ ದಾಳಿಗಳಲ್ಲ ಎಂದು ಅವರು ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಉತ್ಪ್ರೇಕ್ಷೆಯಾಗಿ ಬಿಂಬಿಸಲಾಗುತ್ತಿದೆ ಎಂದು ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಹೇಳಿದ್ದೇನೆ. ಈ ವಿಷಯವು ಹಲವಾರು ಆಯಾಮಗಳನ್ನು ಹೊಂದಿದೆ. ಶೇಖ್ ಹಸೀನಾ ಮತ್ತು ಅವಾಮಿ ಲೀಗ್ನ ದೌರ್ಜನ್ಯದ ನಂತರ ದೇಶವು ವಿಪ್ಲವವನ್ನು ಎದುರಿಸಿದಾಗ, ಅವಾಮಿ ಲೀಗ್ ಬೆಂಬಲಿಗರ ಮೇಲೆಯೂ ದಾಳಿಗಳು ನಡೆದಿವೆ ಎಂದು ನೊಬೆಲ್ ಪ್ರಶಸ್ತಿ ವಿಜೇತ ಯೂನುಸ್ ಪಿಟಿಐಗೆ ತಿಳಿಸಿದ್ದಾರೆ.
ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಗೊಳಿಸಿದ ನಂತರ ಭುಗಿಲೆದ್ದ ವಿದ್ಯಾರ್ಥಿ ನೇತೃತ್ವದ ಹಿಂಸಾಚಾರದ ಸಮಯದಲ್ಲಿ ಅಲ್ಪಸಂಖ್ಯಾತ ಹಿಂದೂ ಜನಸಮುದಾಯ ವ್ಯವಹಾರಗಳು, ಆಸ್ತಿಗಳು ಮತ್ತು ಹಿಂದೂ ದೇವಾಲಯಗಳ ಮೇಲೆ ವ್ಯಾಪಕ ದಾಳಿಗಳು ನಡೆದಿವೆ.
"ಆಗಸ್ಟ್ 5 ರಂದು ಉತ್ತುಂಗಕ್ಕೇರಿದ ಸರ್ಕಾರಿ ವಿರೋಧಿ ಪ್ರತಿಭಟನೆಗಳ ನಂತರ, ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದರು. ಆವಾಗ ಅವಾಮಿ ಲೀಗ್ ಕಾರ್ಯಕರ್ತರನ್ನು ಥಳಿಸುವಾಗ, ಬಾಂಗ್ಲಾದೇಶದಲ್ಲಿ ಹಿಂದೂಗಳು ಎಂದರೆ ಅವಾಮಿ ಲೀಗ್ ಬೆಂಬಲಿಗರು ಎಂಬ ಗ್ರಹಿಕೆ ಇರುವುದರಿಂದ ಹಿಂದೂಗಳನ್ನು ಥಳಿಸಲಾಗಿತ್ತು. ಆದರೆ, ಈ ದಾಳಿಗಳನ್ನು ನಾನು ಸಮರ್ಥಿಸುತ್ತಿಲ್ಲ. ಆದರೆ ಕೆಲವರು ಆಸ್ತಿಯನ್ನು ವಶಪಡಿಸಿಕೊಳ್ಳಲು ಇದನ್ನು ನೆಪವಾಗಿ ಬಳಸುತ್ತಿದ್ದಾರೆ. ಒಟ್ಟಾರೆಯಾಗಿ ಅವಾಮಿ ಲೀಗ್ ಬೆಂಬಲಿಗರು ಮತ್ತು ಹಿಂದೂಗಳ ನಡುವೆ ಗುರುತಿಸಬಹುದಾದ ವ್ಯತ್ಯಾಸವಿಲ್ಲ" ಎಂದು ಅವರು ಹೇಳಿದರು.
ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾದ ಸ್ವಲ್ಪ ಸಮಯದ ನಂತರ ಕಳೆದ ತಿಂಗಳು ಭಾರತದೊಂದಿಗಿನ ತಮ್ಮ ಮೊದಲ ನೇರ ಸಂಪರ್ಕದಲ್ಲಿ, ಬಾಂಗ್ಲಾದೇಶದ ನೂತನ ಸರ್ಕಾರವು ಹಿಂದೂಗಳು ಮತ್ತು ಇತರ ಎಲ್ಲಾ ಅಲ್ಪಸಂಖ್ಯಾತ ಗುಂಪುಗಳ ರಕ್ಷಣೆ ಮತ್ತು ಸುರಕ್ಷತೆಗೆ ಆದ್ಯತೆ ನೀಡುತ್ತದೆ ಎಂದು ಯೂನುಸ್ ಪ್ರಧಾನಿ ಮೋದಿಯವರಿಗೆ ತಿಳಿಸಿದ್ದರು.
1971 ರ ವಿಮೋಚನಾ ಯುದ್ಧದ ಸಮಯದಲ್ಲಿ ಬಾಂಗ್ಲಾದೇಶದ ಜನಸಂಖ್ಯೆಯ ಶೇಕಡಾ 22 ರಷ್ಟಿದ್ದ ಹಿಂದೂಗಳು ಈಗ 170 ಮಿಲಿಯನ್ ಜನಸಂಖ್ಯೆಯ ಕೇವಲ ಶೇಕಡಾ 8 ರಷ್ಟಿದ್ದಾರೆ ಮತ್ತು ಜಾತ್ಯತೀತ ನಿಲುವಿಗೆ ಹೆಸರುವಾಸಿಯಾದ ಅವಾಮಿ ಲೀಗ್ ಅನ್ನು ಪ್ರಧಾನವಾಗಿ ಬೆಂಬಲಿಸಿದ್ದಾರೆ.
ಇದನ್ನೂ ಓದಿ : '3ನೇ ಮಹಾಯುದ್ಧ ನಾನು ಮಾತ್ರ ತಡೆಯಬಲ್ಲೆ': ಜಂಭ ಕೊಚ್ಚಿಕೊಂಡ ಟ್ರಂಪ್ - Donald Trump