ಗಾಜಾ: ಗಾಜಾದಲ್ಲಿ ಆಹಾರಕ್ಕಾಗಿ ಕಾಯುತ್ತಿದ್ದವರ ಮೇಲೆ ಗುರುವಾರ ಶೆಲ್ ದಾಳಿ ನಡೆಸಿದ ಪರಿಣಾಮ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ. 155 ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ತಿನ್ ಆರೋಗ್ಯ ಸಚಿವಾಲಯ ಮಾಹಿತಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ.
''ಗಾಯಾಳುಗಳನ್ನು ಇನ್ನೂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಜೊತೆಗೆ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ'' ಎಂದು ಅಲ್ ಶಿಫಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ವೈದ್ಯ ಮೊಹಮ್ಮದ್ ಘ್ರಾಬ್ ತಿಳಿಸಿದ್ದಾರೆ.
ವರದಿಯ ಪ್ರಕಾರ, ಕ್ಷಿಪಣಿ ದಾಳಿಯಿಂದ ಹಲವು ಜನರು ಮೃತಪಟ್ಟಿದ್ದಾರೆ ಎಂದು ಘಟನಾ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಸ್ಥಳದಲ್ಲಿ ಮೃತದೇಹಗಳು ಬಿದ್ದಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಗಾಜಾದ ಕುವೈತ್ ವೃತ್ತದಲ್ಲಿ ಹಸಿವಿನಿಂದ ಬಳಲುತ್ತಿದ್ದ ಜನರು ಮಾನವೀಯ ನೆರವಿಗಾಗಿ ಕಾಯುತ್ತಿದ್ದರು. ಈ ನಾಗರಿಕರ ಮೇಲೆ ಇಸ್ರೇಲ್ ಪಡೆ ಕ್ಷಿಪಣಿ ದಾಳಿ ನಡೆಸಿದೆ ಎಂದು ಪ್ಯಾಲೇಸ್ತಿನ್ ಆರೋಗ್ಯ ಸಚಿವಾಲಯವು ಈ ಘಟನೆಯನ್ನು ವಿವರಿಸಿದೆ.
ಕ್ಷಿಪಣಿ ದಾಳಿಗೆ ಇಸ್ರೇಲ್ ನೇರ ಹೊಣೆ- ಮಹಮೂದ್ ಬಸಲ್ ಆರೋಪ: ಗಾಜಾದಲ್ಲಿ ನಾಗರಿಕರ ಮೇಲೆ ನಡೆದ ಕ್ಷಿಪಣಿ ದಾಳಿಗೆ ಇಸ್ರೇಲ್ ನೇರ ಹೊಣೆಯಾಗಿದೆ. ಉತ್ತರ ಗಾಜಾ ಪಟ್ಟಿಯಲ್ಲಿ ಕ್ಷಾಮ ಎದುರಾಗಿರುವ ಪರಿಣಾಮವಾಗಿ ಪರಿಹಾರದ ನೆರವಿಗಾಗಿ ಕಾಯುತ್ತಿರುವ ಮುಗ್ಧ ನಾಗರಿಕರನ್ನು ಕೊಲ್ಲುವ ನೀತಿಯನ್ನು ಇಸ್ರೇಲ್ ಪಡೆಗಳು ಅಭ್ಯಾಸವಾಗಿ ಮಾಡುಕೊಂಡಿವೆ" ಎಂದು ಎಂದು ಗಾಜಾ ನಾಗರಿಕ ರಕ್ಷಣಾ ವಕ್ತಾರ ಮಹಮೂದ್ ಬಸಲ್ ಆರೋಪಿಸಿದ್ದಾರೆ.
ಗಾಜಾ ಪಟ್ಟಿಯಲ್ಲಿ ಸಾವಿನ ಸಂಖ್ಯೆ 31,341ಕ್ಕೆ ಏರಿಕೆ-ಪ್ಯಾಲೇಸ್ತಿನ್ ಸಚಿವಾಲಯ: ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನಾ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ 31,341 ಕ್ಕೆ ಏರಿದೆ ಎಂದು ಪ್ಯಾಲೇಸ್ತಿನ್ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಕ್ಸಿನ್ಹುವಾ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಕರಾವಳಿ ಪ್ರದೇಶದಲ್ಲಿ 69 ಪ್ಯಾಲೇಸ್ತಿನಿಯನ್ನರು ಸಾವನ್ನಪ್ಪಿದ್ದಾರೆ. ಮತ್ತು 110 ಮಂದಿ ಗಾಯಗೊಂಡಿದ್ದಾರೆ. ಅಕ್ಟೋಬರ್ 7, 2023 ರಂದು ಇಸ್ರೇಲ್-ಹಮಾಸ್ ಸಂಘರ್ಷ ಪ್ರಾರಂಭವಾದಾಗಿನಿಂದ ಒಟ್ಟು ಸಾವಿನ ಸಂಖ್ಯೆ 31,341ಕ್ಕೆ ಏರಿದೆ ಮತ್ತು 73,134 ಗಾಯಗೊಂಡಿದ್ದಾರೆ. ಸಚಿವಾಲಯದ ಪ್ರಕಾರ, ಆಂಬ್ಯುಲೆನ್ಸ್ ಸಿಬ್ಬಂದಿ ಕೊರತೆಯಿದೆ, ಇದರಿಂದಾಗಿ ಕೆಲವು ಮೃತದೇಹಗಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ಇದನ್ನೂ ಓದಿ: 5 ದಿನಗಳ ಭಾರತ ಭೇಟಿಗೆ ಆಗಮಿಸಿದ ಭೂತಾನ್ ಪ್ರಧಾನಿ: ದ್ವಿಪಕ್ಷೀಯ ಸಂಬಂಧ ವೃದ್ಧಿ ಬಗ್ಗೆ ಚರ್ಚೆ