ನೈರೋಬಿ (ಕೀನ್ಯಾ): ಕೀನ್ಯಾದ ಶಾಲಾ ವಸತಿ ನಿಲಯದಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದು, 17 ವಿದ್ಯಾರ್ಥಿಗಳು ಬೆಂಕಿಗಾಹುತಿಯಾಗಿದ್ದಾರೆ. 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ರಾತ್ರಿ ನೈರಿ ಕೌಂಟಿಯ ಹಿಲ್‌ಸೈಡ್ ಎಂಡರಾಶಾ ಪ್ರಾಥಮಿಕ ವಸತಿ ನಿಲಯದಲ್ಲಿ ಇದ್ದಕ್ಕಿದ್ದಂತೆ ಈ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬ ತನಿಖೆ ನಡೆಸಲಾಗುತ್ತದೆ. ಬೆಂಕಿಗೆ ಆಹುತಿಯಾದ ವಸತಿ ನಿಲಯದಲ್ಲಿ 10 ರಿಂದ 14 ವರ್ಷ ವಯಸ್ಸಿನ 150ಕ್ಕೂ ಹೆಚ್ಚು ಮಕ್ಕಳು ವಾಸಿಸುತ್ತಿದ್ದರು. ಕಟ್ಟಡಗಳನ್ನು ಮರದ ಹಲಗೆಗಳಿಂದ ನಿರ್ಮಿಸಲಾಗಿದ್ದರಿಂದ, ಬೆಂಕಿ ವೇಗವಾಗಿ ಹರಡಿದೆ. ಗಂಭೀರವಾಗಿ ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಆದರೆ, ಬೆಂಕಿಯ ಕೆನ್ನಾಲಿಗೆ ಕಟ್ಟಡ ಭಾಗಶಃ ಸುಟ್ಟು ಹೋಗಿದ್ದು, ಸಾವಿನ ಸಂಖ್ಯೆ ಕೂಡ ಹೆಚ್ಚಾಗುವ ಸಾಧ್ಯತೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಕ್ಕಳ ಗುರುತು ಪತ್ತೆ ಹಚ್ಚಲಾಗದೇ ಪೋಷಕರು ಪರಿತಪಿಸುತ್ತಿದ್ದಾರೆ. ಆಸ್ಪತ್ರೆ ಎದುರು ಜಮಾವಣೆಗೊಂಡಿದ್ದು ಅವರ ಆಕ್ರಂದನ ಮುಗಿಲು ಮುಟ್ಟಿದೆ. ಅಧ್ಯಕ್ಷ ವಿಲಿಯಂ ರುಟೊ ಸುದ್ದಿ ಕೇಳಿ ಬೇಸರ ವ್ಯಕ್ತಪಡಿಸಿದ್ದಾರೆ.
''ಈ ಭೀಕರ ಘಟನೆಯನ್ನು ಕೂಲಂಕಷವಾಗಿ ತನಿಖೆ ಮಾಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಲಾಗಿದೆ. ಘಟನೆಗೆ ಕಾರಣರಾದವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ಕೊಡಲಾಗುತ್ತದೆ. ಅಲ್ಲದೇ ಮುಂದಿನ ದಿನಗಳಲ್ಲಿ ಈ ಘಟನೆ ಪುನಾವರ್ತನೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ'' ಎಂದು ವಿಲಿಯಂ ರುಟೊ ಅವರು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಸುರತ್ಕಲ್ ಎನ್ಐಟಿಕೆ ಬಳಿ ಸಂಚರಿಸುತ್ತಿದ್ದ ಕಾರಿಗೆ ಬೆಂಕಿ: ಸುಟ್ಟು ಕರಕಲಾದ ವಾಹನ - A moving car caught fire