ಇಸ್ಲಾಮಾಬಾದ್ (ಪಾಕಿಸ್ತಾನ): ಕಳೆದ ವಾರದಿಂದ ಪಾಕಿಸ್ತಾನದಲ್ಲಿ ಭಾರಿ ಮಳೆ ಮುಂದುವರಿದಿದ್ದು, ಇದರ ಪರಿಣಾಮ ದೇಶದ ಕೆಲವು ಭಾಗಗಳಲ್ಲಿ ತೀವ್ರ ಹಾನಿ ಉಂಟಾಗಿದೆ. ಪಾಕಿಸ್ತಾನದ ವಿವಿಧೆಡೆ ಮಳೆ ಅಬ್ಬರಕ್ಕೆ ಕನಿಷ್ಠ 87 ಜನರು ಸಾವನ್ನಪ್ಪಿದ್ದು, 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ತಿಳಿಸಿದೆ.
ಪಾಕ್ನಲ್ಲಿ 2,715 ಮನೆಗಳು ಸಂಪೂರ್ಣ ಹಾನಿ: ಮಳೆಯಿಂದಾಗಿ ದೇಶಾದ್ಯಂತ 2,715 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಭೂ ಕುಸಿತ, ಸಿಡಿಲು ಬಡಿದು ಮತ್ತು ಹಠಾತ್ ಪ್ರವಾಹಕ್ಕೆ ಸಂಬಂಧಿಸಿದ ಘಟನೆಗಳಲ್ಲಿ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ದೇಶದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಿಂದ ಹೆಚ್ಚಿನ ಹಾನಿ ಮತ್ತು ಸಾವು, ನೋವುಗಳು ವರದಿಯಾಗಿವೆ. ಈ ಭಾಗದಲ್ಲಿ ಧಾರಾಕಾರ ಮಳೆಯಿಂದಾಗಿ 36 ಜನರು ಸಾವನ್ನಪ್ಪಿದ್ದಾರೆ ಮತ್ತು 53 ಜನರು ಗಾಯಗೊಂಡಿದ್ದಾರೆ. ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ 25 ಜನರು ಸಾವನ್ನಪ್ಪಿದ್ದಾರೆ. 8 ಜನರು ಗಾಯಗೊಂಡಿದ್ದಾರೆ ಎಂದು NDMA ಹೇಳಿದೆ.
ನೈಋತ್ಯ ಬಲೂಚಿಸ್ತಾನ್ದಲ್ಲಿ 15 ಜನ ಸಾವು: ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಒಟ್ಟು 15 ಜನರು ಸಾವನ್ನಪ್ಪಿದ್ದಾರೆ ಮತ್ತು 10 ಮಂದಿ ಗಾಯಗೊಂಡಿದ್ದಾರೆ. ಆದರೆ, ಈ ಅವಧಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರಿ ಮಳೆಯಿಂದಾಗಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು 11 ಮಂದಿ ಗಾಯಗೊಂಡಿದ್ದಾರೆ ಎಂದು ಎನ್‌ಡಿಎಂಎ ತಿಳಿಸಿದೆ.
ದುಃಖ ವ್ಯಕ್ತಪಡಿಸಿದ ಪಾಕ್ ಪ್ರಧಾನಿ: ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರಿ ಮಳೆಯಿಂದ ಆಗಿರುವ ಜೀವ ಹಾನಿ ಮತ್ತು ಆಸ್ತಿ ನಷ್ಟದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತ ಪ್ರದೇಶಗಳಲ್ಲಿ ಪರಿಹಾರ ಚಟುವಟಿಕೆಗಳನ್ನು ವೇಗಗೊಳಿಸಲು ಮತ್ತು ಮಳೆ, ಭೂಕುಸಿತದಿಂದ ಬಂದ್ ಆಗಿರುವ ರಸ್ತೆಗಳನ್ನು ಪುನರ್ ಆರಂಭಿಸುವ ಕೆಲಸವನ್ನು ತ್ವರಿತಗೊಳಿಸಲು ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ.
ಏಪ್ರಿಲ್ 22ರವರೆಗೆ ಮಳೆ ಮುಂದುವರಿಯಲಿದೆ: ಶುಕ್ರವಾರದ ತನ್ನ ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ಏಪ್ರಿಲ್ 22 ರವರೆಗೆ ಮಳೆ ಮುಂದುವರಿಯುತ್ತದೆ. ನಿರೀಕ್ಷಿತ ಮಳೆಯು ದೇಶದ ಹಲವಾರು ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಉಂಟಾಗಲು ಕಾರಣವಾಗಿದೆ ಎಂದು NDMA ಹೇಳಿದೆ.
ಇದನ್ನೂ ಓದಿ: ಪಾಕಿಸ್ತಾನದ ಕರಾಚಿಯಲ್ಲಿ ಜಪಾನಿಗರ ವಾಹನದ ಮೇಲೆ ಆತ್ಮಾಹುತಿ ದಾಳಿ: ಇಬ್ಬರ ಸಾವು - suicide bombing attempt in Pakistan