ಜುಬಾ(ದಕ್ಷಿಣ ಸುಡಾನ್): ಸುಡಾನ್ ಮತ್ತು ದಕ್ಷಿಣ ಸುಡಾನ್ ಎರಡರಿಂದಲೂ ಹಕ್ಕು ಸಾಧಿಸಿರುವ ತೈಲ ಸಮೃದ್ಧ ಪ್ರದೇಶ ಅಬೈ ಎಂಬಲ್ಲಿ ದುಷ್ಕರ್ಮಿಗಳು ಗ್ರಾಮಸ್ಥರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ವಿಶ್ವಸಂಸ್ಥೆ ಶಾಂತಿಪಾಲಕ ಸೇರಿದಂತೆ ಕನಿಷ್ಠ 52 ಜನರು ಸಾವನ್ನಪ್ಪಿದ್ದು, ಸುಮಾರು 64ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಶನಿವಾರ ಸಂಜೆ ಈ ದಾಳಿ ನಡೆದಿದೆ. ಇದರ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲ. ಆದರೆ ಭೂ ವಿವಾದಕ್ಕೆ ಸಂಬಂಧಿಸಿದ ಘಟನೆ ಎಂದು ಅಬೈಯ ಮಾಹಿತಿ ಸಚಿವ ಬೌಲಿಸ್ ಕೋಚ್ ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಪ್ರದೇಶದಲ್ಲಿ ಮಾರಣಾಂತಿಕ ಜನಾಂಗೀಯ ಹಿಂಸಾಚಾರ ಸಾಮಾನ್ಯವಾಗಿದೆ. ನೆರೆಯ ವಾರ್ರಾಪ್ ರಾಜ್ಯದ ಟ್ವಿಕ್ ಡಿಂಕಾ ಬುಡಕಟ್ಟು ಸದಸ್ಯರು ಗಡಿಯುದ್ದಕ್ಕೂ ಅನೈಟ್ ಪ್ರದೇಶದ ಅಬೈಯ ಎನ್ಗೊಕ್ ಡಿಂಕಾ ಅವರೊಂದಿಗೆ ಭೂ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ವಿಶ್ವಸಂಸ್ಥೆಯ ಶಾಂತಿಪಾಲಕ ಸಾವು: ಅಬೈಯಲ್ಲಿನ ಮಧ್ಯಂತರ ಭದ್ರತಾ ಪಡೆ (UNISFA) ಶಾಂತಿಪಾಲಕನ ಸಾವಿಗೆ ಕಾರಣವಾದ ಹಿಂಸಾಚಾರವನ್ನು ವಿಶ್ವಸಂಸ್ಥೆ ಖಂಡಿಸಿದೆ. Nyinkuaq, Majbong ಮತ್ತು Khadian ಪ್ರದೇಶಗಳಲ್ಲಿ ಕೋಮು ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಇದರ ಪರಿಣಾಮ ಸಾವು-ನೋವುಗಳು ಸಂಭವಿಸುತ್ತಲೇ ಇರುತ್ತವೆ. ಹೀಗಾಗಿ ನಾಗರಿಕರನ್ನು UNISFA ನೆಲೆಗಳಿಗೆ ಸ್ಥಳಾಂತರಿಸಲಾಗಿತ್ತು. ಅಗೋಕ್‌ನಲ್ಲಿರುವ UNISFA ನೆಲೆಯ ಮೇಲೆ ಸಶಸ್ತ್ರ ಗುಂಪು ದಾಳಿ ನಡೆಸಿದೆ. ದಾಳಿಕೋರರನ್ನು ಹಿಮ್ಮೆಟ್ಟಿಸುವಾಗ ಒಬ್ಬ ಘಾನಾ ದೇಶದ ಶಾಂತಿಪಾಲಕ ಹುತಾತ್ಮರಾದರು ಎಂದು ಸಚಿವ ಬೌಲಿಸ್ ಕೋಚ್ ಮಾಹಿತಿ ನೀಡಿದ್ದಾರೆ.
ದ.ಸುಡಾನ್ ನಿಯಂತ್ರಣದಲ್ಲಿ ಅಬೈ: 2005ರ ಶಾಂತಿ ಒಪ್ಪಂದವು ಸುಡಾನ್‌ನ ಉತ್ತರ ಮತ್ತು ದಕ್ಷಿಣದ ನಡುವಿನ ದಶಕಗಳ ಅಂತರ್ಯುದ್ಧ ಕೊನೆಗೊಳಿಸಿತ್ತು. ಇದರ ನಂತರ ಸುಡಾನ್ ಮತ್ತು ದಕ್ಷಿಣ ಸುಡಾನ್ ಅಬೈ ಪ್ರದೇಶದ ನಿಯಂತ್ರಣವನ್ನು ಒಪ್ಪುತ್ತಿಲ್ಲ. ಸುಡಾನ್ ಮತ್ತು ದಕ್ಷಿಣ ಸುಡಾನ್ ಎರಡೂ ಅಬೈ ಮಾಲೀಕತ್ವ ಪಡೆದುಕೊಳ್ಳಲು ಇಚ್ಛಿಸುತ್ತವೆ. 2011ರಲ್ಲಿ ಸುಡಾನ್‌ನಿಂದ ದಕ್ಷಿಣ ಸುಡಾನ್ ಸ್ವತಂತ್ರವಾದ ನಂತರ ಅದರ ಸ್ಥಿತಿಯನ್ನು ಬಗೆಹರಿಸಲಾಗಿಲ್ಲ. ಈ ಪ್ರದೇಶದ ಬಹುಪಾಲು ಎನ್ಗೊಕ್ ಡಿಂಕಾ ಜನರು ದಕ್ಷಿಣ ಸುಡಾನ್ ಪರವಾಗಿದ್ದಾರೆ. ಆದರೆ ತಮ್ಮ ಜಾನುವಾರುಗಳಿಗೆ ಹುಲ್ಲುಗಾವಲು ಹುಡುಕಲು ಅಬೈಗೆ ಬರುವ ಮಿಸೇರಿಯಾ ಅಲೆಮಾರಿಗಳು ಸುಡಾನ್ ಪರವಾಗಿದ್ದಾರೆ. ಪ್ರಸ್ತುತ ಈ ಪ್ರದೇಶವು ದಕ್ಷಿಣ ಸುಡಾನ್‌ನ ನಿಯಂತ್ರಣದಲ್ಲಿದೆ.
ಹೆಚ್ಚಾದ ಗಡಿಯಾಚೆಗಿನ ಘರ್ಷಣೆ: ಆಫ್ರಿಕನ್ ಯೂನಿಯನ್ ಸಮಿತಿಯು ಅಬೈ ಮೇಲೆ ಜನಾಭಿಪ್ರಾಯ ಸಂಗ್ರಹ ಪ್ರಸ್ತಾಪಿಸಿತು. ಆದರೆ ಯಾರು ಮತ ಚಲಾಯಿಸಬಹುದು ಎಂಬುದರ ಕುರಿತು ಭಿನ್ನಾಭಿಪ್ರಾಯವಿತ್ತು. ಪ್ರಸ್ತುತ ಈ ಪ್ರದೇಶವು ದಕ್ಷಿಣ ಸುಡಾನ್‌ನ ನಿಯಂತ್ರಣದಲ್ಲಿದೆ. ಕಳೆದ ಮಾರ್ಚ್‌ನಲ್ಲಿ ದಕ್ಷಿಣ ಸುಡಾನ್ ತನ್ನ ಸೈನ್ಯವನ್ನು ಅಬೈಗೆ ನಿಯೋಜಿಸಿದಾಗಿನಿಂದ ಅಂತರ-ಕೋಮು ಮತ್ತು ಗಡಿಯಾಚೆಗಿನ ಘರ್ಷಣೆಗಳು ಹೆಚ್ಚಾಗಿವೆ.
ಇದನ್ನೂ ಓದಿ: ಮಸ್ಕ್ ಹಿಂದಿಕ್ಕಿದ ಬರ್ನಾರ್ಡ್ ಅರ್ನಾಲ್ಟ್ ವಿಶ್ವದ ಕುಬೇರ: ಅಂಬಾನಿ ಸ್ಥಾನವೇನು?