ನವದೆಹಲಿ: ಈ ಹಿಂದೆಲ್ಲಾ ಮಕ್ಕಳು ಅತ್ತರೆ, ಅವರಿಗೆ ಆಟಿಕೆ ನೀಡಿ, ಮುದ್ದು ಮಾಡಿ ಲಲ್ಲೆಗರೆದು ಸಮಾಧಾನ ಮಾಡಲಾಗುತ್ತಿತ್ತು. ಆದರೆ, ಇಂದು ಪೋಷಕರು ರಚ್ಚೆ ಹಿಡಿಯುವ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಶಾಂತಗೊಳಿಸುತ್ತಿದ್ದಾರೆ. ಆದರೆ, ಈ ಅಭ್ಯಾಸ ಮಕ್ಕಳ ಭಾವನಾತ್ಮಕ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೊಸ ಅಧ್ಯಯನ ಎಚ್ಚರಿಸಿದೆ.
ಮಕ್ಕಳು ಅತ್ತಾಗ ಸಮಾಧಾನಪಡಿಸಲು ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್ನಂತಹ ಡಿಜಿಟಲ್ ಸಾಧನಗಳನ್ನು ನೀಡುವುದರಿಂದ, ಇದು ವಯಸ್ಕರಾದ ಬಳಿಕ ಭಾವನೆಗಳ ನಿಯಂತ್ರಿಸುವಿಕೆಯ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಏಕಾಗ್ರತೆಗೂ ಭಂಗ ತರುತ್ತದೆ ಎಂದು ಹೇಳಲಾಗಿದೆ.
ಹಂಗೇರಿ ಮತ್ತು ಕೆನಡಾ ದೇಶಗಳ ಸಂಶೋಧಕರ ತಂಡ ಈ ಬಗ್ಗೆ ಅಧ್ಯಯನ ನಡೆಸಿದೆ. ಮಕ್ಕಳಿಗೆ ಮೊಬೈಲ್ ನೀಡುವ ಅಭ್ಯಾಸವನ್ನು ಪೋಷಕರ ಡಿಜಿಟಲ್ ಭಾವನೆಗಳ ನಿಯಂತ್ರಣ ಎಂದು ಈ ತಂಡ ಗುರುತಿಸಿದೆ.
ಮಕ್ಕಳ ಕಿರಿಕಿರಿ ತಪ್ಪಿಸಲು ಆಗ್ಗಿಂದಾಗ್ಗೆ ಮೊಬೈಲ್ ನೀಡಿ ಅವರನ್ನು ಶಾಂತಗೊಳಿಸುವುದರಿಂದ ಮಗು ತನ್ನ ಭಾವನೆಯನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನು ತಿಳಿಯುವುದಿಲ್ಲ. ಭವಿಷ್ಯದಲ್ಲಿ ಇದು ಗಂಭೀರ ಭಾವನೆ ನಿಯಂತ್ರಣ ಸಮಸ್ಯೆಗೆ ಕಾರಣವಾಗುತ್ತದೆ. ಅದರಲ್ಲೂ ವಿಶೇಷವಾಗಿ ಜೀವನದಲ್ಲಿ ಕೋಪ ನಿರ್ವಹಣೆ ಸಮಸ್ಯೆ ಎದುರಿಸುವಂತಾಗುತ್ತದೆ ಎಂದು ಹಂಗೇರಿಯ ಒಟ್ವೊಸ್ ಲೊರಂಡ್ ಯೂನಿವರ್ಸಿಟಿ ಸಂಶೋಧಕರಾದ ವೆರೊನಿಕಾ ಕೊನೊಕ್ ತಿಳಿಸಿದ್ದಾರೆ.
ಈ ಅಧ್ಯಯನವನ್ನು ಫ್ರಾಂಟಿರಿಯರ್ಸ್ ಇನ್ ಚೈಲ್ಡ್ ಆ್ಯಂಡ್ ಅಡೊಲೆಸೆಂಟ್ ಸೈಕಿಯಾಟ್ರಿಯಲ್ಲಿ ಪ್ರಕಟಿಸಲಾಗಿದೆ. ಇದಕ್ಕಾಗಿ ಎರಡರಿಂದ ಐದು ವರ್ಷದೊಳಗಿನ ಮಕ್ಕಳ ಪೋಷಕರನ್ನು ಭಾಗಿಯಾಗಿಸಲಾಗಿದೆ.
ಮಕ್ಕಳ ಸಿಟ್ಟನ್ನು ಡಿಜಿಟಲ್ ಸಾಧನಗಳ ಮೂಲಕ ಶಮನ ಮಾಡಲು ಸಾಧ್ಯವಿಲ್ಲ. ಇದು ಮಕ್ಕಳಲ್ಲಿ ತಮ್ಮ ನಕಾರಾತ್ಮಕ ಭಾವನೆಗಳನ್ನು ತಂದು ತಮ್ಮಷ್ಟಕ್ಕೆ ಅದನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಕಲಿಸುವುದಿಲ್ಲ ಎಂದಿದ್ದಾರೆ.
ಇಂತಹ ಪರಿಸ್ಥಿತಿಗಳನ್ನು ನಿಭಾಯಿಸಲಾಗದೇ ಮಕ್ಕಳು ಒತ್ತಡಕ್ಕೆ ಒಳಗಾಗುತ್ತಾರೆ. ಈ ಹಿನ್ನೆಲೆಯಲ್ಲಿ ಅವರ ಭಾವನೆ ನಿಯಂತ್ರಣವನ್ನು ನಿರ್ವಹಿಸುವ ಕುರಿತು ತಿಳಿಸುವ ಪ್ರಯತ್ನ ನಡೆಯಬೇಕು. ಇದು ಸಾಧ್ಯವಾಗದೇ ಹೋದಾಗ ತರಬೇತಿ ಅಥವಾ ಸಮಲೋಚನೆಯಂಥ ಮಾದರಿಗೆ ಪೋಷಕರು ಮುಂದಾಬೇಕು ಎಂದು ಸಲಹೆ ನೀಡಿದ್ದಾರೆ.(ಐಎಎನ್ಎಸ್)
ಇದನ್ನೂ ಓದಿ: ನಿಮ್ಮ ಮಕ್ಕಳು ಮೊಬೈಲ್ ಫೋನ್‌ಗೆ ಅಡಿಕ್ಟ್ ಆಗಿದ್ದಾರಾ?: ಹಾಗಾದ್ರೆ ಈ ಟಿಪ್ಸ್ಗಳನ್ನು ಅನುಸರಿಸಿ ನೋಡಿ