ಜಿನೀವಾ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ)ಯು ಇದೇ ಮೊದಲ ಬಾರಿಗೆ ಡಿಫ್ತೀರಿಯಾದ ಕ್ಲಿನಿಕಲ್ ನಿರ್ವಹಣೆಯ ಬಗ್ಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಲಭ್ಯವಿರುವ ಮಾರ್ಗಸೂಚಿಗಳು ಕೇವಲ ಕಾರ್ಯಾಚರಣೆಯ ಪ್ರೋಟೋಕಾಲ್ ಆಗಿದ್ದವು. ಹೊಸ ಮಾರ್ಗಸೂಚಿಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ಕಠಿಣ ಪ್ರಕ್ರಿಯೆಗಳನ್ನು ಅನುಸರಿಸಿ ತಯಾರಿಸಲಾಗಿದೆ. ಇದು ಡಿಫ್ತೀರಿಯಾ ಚಿಕಿತ್ಸೆಯಲ್ಲಿ ಡಿಫ್ತೀರಿಯಾ ಆಂಟಿಟಾಕ್ಸಿನ್ (ಡಿಎಟಿ) ಬಳಕೆಯ ಬಗ್ಗೆ ನಿಯಮಗಳನ್ನು ಒಳಗೊಂಡಿದೆ.
ಮಾರ್ಗಸೂಚಿಯು ಆ್ಯಂಟಿಬಯಾಟಿಕ್ಸ್ಗಳ ಬಗ್ಗೆ ಹೊಸ ಶಿಫಾರಸುಗಳನ್ನು ಸಹ ಒಳಗೊಂಡಿದೆ. ಶಂಕಿತ ಅಥವಾ ದೃಢಪಟ್ಟ ಡಿಫ್ತೀರಿಯಾ ರೋಗಿಗಳಲ್ಲಿ, ಪೆನ್ಸಿಲಿನ್ ಆ್ಯಂಟಿಬಯಾಟಿಕ್ಗಳ ಬದಲು ಮ್ಯಾಕ್ರೋಲೈಡ್ ಆ್ಯಂಟಿಬಯಾಟಿಕ್ಸ್ಗಳನ್ನು (ಅಜಿಥ್ರೊಮೈಸಿನ್, ಎರಿಥ್ರೊಮೈಸಿನ್) ಬಳಸುವಂತೆ ಡಬ್ಲ್ಯುಎಚ್ಒ ಶಿಫಾರಸು ಮಾಡಿದೆ.
"ಡಿಫ್ತೀರಿಯಾ ಪ್ರಕರಣಗಳು ಜಾಗತಿಕವಾಗಿ ಏಕಾಏಕಿ ಹೆಚ್ಚಾಗುತ್ತಿರುವುದನ್ನು ಗಮನಿಸಿ ಈ ಕ್ಲಿನಿಕಲ್ ಅಭ್ಯಾಸ ಮಾರ್ಗಸೂಚಿಯನ್ನು ತ್ವರಿತವಾಗಿ ಅಭಿವೃದ್ಧಿಪಡಿಸಲಾಗಿದೆ. ನೈಜೀರಿಯಾ, ಗಿನಿಯಾ ಮತ್ತು ನೆರೆಯ ದೇಶಗಳಲ್ಲಿ 2023 ರಲ್ಲಿ ಡಿಫ್ತೀರಿಯಾ ಏಕಾಏಕಿ ಉಲ್ಬಣವಾಗಿರುವುದು ಡಿಫ್ತೀರಿಯಾ ಚಿಕಿತ್ಸೆಗೆ ಪುರಾವೆ ಆಧಾರಿತ ಕ್ಲಿನಿಕಲ್ ಅಭ್ಯಾಸ ಮಾರ್ಗಸೂಚಿಗಳ ತುರ್ತು ಅಗತ್ಯವನ್ನು ಎತ್ತಿ ತೋರಿಸಿದೆ" ಎಂದು ಡಬ್ಲ್ಯುಎಚ್ಒ ಹೇಳಿದೆ.
ಡಿಫ್ತೀರಿಯಾ ಇದು ಬ್ಯಾಕ್ಟೀರಿಯಾದಿಂದ ಉಂಟಾಗುವ ರೋಗವಾಗಿದ್ದು, ಇದು ಮೇಲ್ಭಾಗದ ಶ್ವಾಸನಾಳದ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತದೆ. ಅಲ್ಲದೇ ಚರ್ಮದ ಮೇಲೆ ಕೂಡ ಕಡಿಮೆ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ. ಇದು ಹೃದಯ ಮತ್ತು ನರಗಳನ್ನು ಹಾನಿಗೊಳಿಸುವ ವಿಷವನ್ನು ಉತ್ಪಾದಿಸುತ್ತದೆ. ಲಸಿಕೆಯ ಮೂಲಕ ಡಿಫ್ತೀರಿಯಾವನ್ನು ತಡೆಗಟ್ಟಬಹುದಾಗಿದೆ.
ಆದರೆ, ರೋಗನಿರೋಧಕ ಶಕ್ತಿಯನ್ನು ಉತ್ಪಾದಿಸಲು ಮತ್ತು ಅದನ್ನು ಉಳಿಸಿಕೊಳ್ಳಲು ಅನೇಕ ಡೋಸ್ ಮತ್ತು ಬೂಸ್ಟರ್ ಡೋಸ್ ಲಸಿಕೆ ನೀಡಬೇಕಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೊಂದಿರದ ಅಥವಾ ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ರೋಗಿಗಳಿಗೆ ಈ ರೋಗ ಅಪಾಯಕಾರಿಯಾಗಬಹುದು. 5 ರಿಂದ 10 ಪ್ರತಿಶತದಷ್ಟು ಪ್ರಕರಣಗಳಲ್ಲಿ ಡಿಫ್ತೀರಿಯಾ ಮಾರಣಾಂತಿಕವಾಗಿದೆ. ಡಿಫ್ತೀರಿಯಾ ಪೀಡಿತ ಚಿಕ್ಕ ಮಕ್ಕಳ ಮರಣ ಪ್ರಮಾಣ ಹೆಚ್ಚಾಗಿದೆ.
2022 ರಲ್ಲಿ ವಿಶ್ವಾದ್ಯಂತ ಅಂದಾಜು 84 ಪ್ರತಿಶತದಷ್ಟು ಮಕ್ಕಳು ಶೈಶವಾವಸ್ಥೆಯಲ್ಲಿ ಶಿಫಾರಸು ಮಾಡಿದ 3 ಡೋಸ್ ಡಿಫ್ತೀರಿಯಾ ಹೊಂದಿರುವ ಲಸಿಕೆ ಪಡೆದುಕೊಂಡಿದ್ದಾರೆ. ಆದರೆ ಲಸಿಕೆ ಪಡೆಯದ ಇನ್ನುಳಿದ 16 ಪ್ರತಿಶತದಷ್ಟು ಮಕ್ಕಳು ಈಗಲೂ ಅಪಾಯದಲ್ಲಿದ್ದಾರೆ. ಲಸಿಕೆ ಹಾಕುವ ಪ್ರಮಾಣ ದೇಶ ಮತ್ತು ಪ್ರದೇಶಗಳ ನಡುವೆ ವಿಭಿನ್ನವಾಗಿದೆ.
ಇದನ್ನೂ ಓದಿ : ತೂಕ ಇಳಿಕೆ ಔಷಧ ಪಡೆದಾಕ್ಷಣ ಡಯಟ್, ವ್ಯಾಯಾಮದ ಬಗ್ಗೆ ಬೇಡ ನಿರ್ಲಕ್ಷ್ಯ