Best Utensils for Cooking: ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಪಾತ್ರೆಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಕೆಲವರು ಬಣ್ಣ ಬಣ್ಣದ ಪಾತ್ರೆಗಳತ್ತ ಮೊರೆ ಹೋದರೆ, ಇನ್ನು ಕೆಲವರು ವಿವಿಧ ವಿನ್ಯಾಸಗಳ ಪಾತ್ರೆಗಳತ್ತ ಆಕರ್ಷಿತರಾಗುತ್ತಾರೆ. ಹಾಗೆಯೇ ಪ್ರತಿಯೊಬ್ಬರೂ ತಮ್ಮ ಇಷ್ಟದ ಪಾತ್ರೆಗಳಲ್ಲಿ ಅಡುಗೆ ಮಾಡಿ ಸೇವಿಸಲು ಇಷ್ಟಪಡುತ್ತಾರೆ. ಕೆಲವರು ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಅಡುಗೆ ಮಾಡಿದರೆ, ಮತ್ತೆ ಕೆಲವರು ಸ್ಟೇನ್‌ಲೆಸ್ ಸ್ಟೀಲ್‌ನಲ್ಲಿ ಅಡುಗೆ ಮಾಡಲು ಇಷ್ಟಪಡುತ್ತಾರೆ. ಜನರು ತಮ್ಮ ಅನುಕೂಲ ಮತ್ತು ಆಯ್ಕೆಗೆ ಅನುಗುಣವಾಗಿ ಪಾತ್ರೆಗಳನ್ನು ಆರಿಸಿಕೊಳ್ಳುತ್ತಾರೆ. ನೀವು ಅಡುಗೆಗೆ ಬಳಸುವ ವಿವಿಧ ಲೋಹದ ಪಾತ್ರೆಗಳು ನಿಮ್ಮ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತಾ ಅಥವಾ ಪ್ರಯೋಜನವಾಗುತ್ತಾ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ದೈಹಿಕವಾಗಿ ಆರೋಗ್ಯಕರವಾಗಿ ಮತ್ತು ಸದೃಢವಾಗಿರಲು, ನೀವು ಸರಿಯಾದ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸಿ ಸೇವನೆ ಮಾಡಬೇಕು ಎಂಬುದು ಬಹಳ ಮುಖ್ಯವಾಗಿದೆ. ಏಕೆಂದರೆ, ಹೆಚ್ಚಿನ ಲೋಹದ ಪಾತ್ರೆಗಳು ವಿಷಕಾರಿ ರಾಸಾಯನಿಕಗಳನ್ನು ಒಳಗೊಂಡಿರುತ್ತವೆ. ಇವುಗಳು ಆಹಾರದೊಳಗೆ ಸೇರಿಕೊಂಡರೆ ಆಹಾರವು ಕಲುಷಿತವಾಗುತ್ತದೆ. ಇದರಿಂದ ಅಡುಗೆಗೆ ಯಾವ ಪಾತ್ರೆಗಳನ್ನು ಬಳಸಬೇಕು ಎನ್ನುವುದು ಬಹಳ ಮುಖ್ಯ.
ಮನೆಗಳಲ್ಲಿನ ಅಡುಗೆ ಕೊಠಡಿಗಳು ಈಗ ಹೈಟೆಕ್ ಸ್ಥಳಗಳಾಗಿ ಮಾರ್ಪಟ್ಟಿವೆ. ಅಲ್ಲಿ ಜನರು ಸ್ಟೀಲ್ ಅಥವಾ ಅಲ್ಯೂಮಿನಿಯಂ ಪಾತ್ರೆಗಳ ಬದಲಿಗೆ ನಾನ್ - ಸ್ಟಿಕ್ ಪಾತ್ರೆಗಳನ್ನು ಬಳಸಲು ಬಯಸುತ್ತಾರೆ. ಈ ಪಾತ್ರೆಗಳು ಆಹಾರವನ್ನು ಅತಿಯಾಗಿ ಸುಡುವುದನ್ನು ಅಥವಾ ಅಂಟಿಕೊಳ್ಳುವುದನ್ನು ತಡೆಯುತ್ತದೆಯಾದರೂ ಅವು ಆರೋಗ್ಯಕ್ಕೆ ಅಪಾಯಗಳನ್ನು ಉಂಟು ಮಾಡಬಹುದು. ಇತ್ತೀಚೆಗೆ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (NIN) ಭಾರತೀಯರಿಗೆ ಆಹಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಸಂಸ್ಥೆಯ ಪ್ರಕಾರ ಮಣ್ಣಿನ ಮಡಕೆಗಳ ಸುರಕ್ಷತೆ ಮತ್ತು ಪ್ರಯೋಜನಗಳ ಮೇಲೆ ಒತ್ತು ನೀಡಿದೆ.
ಮಣ್ಣಿನ ಪಾತ್ರೆಗಳು ಪ್ರಯೋಜನಗಳೇನು?: ಮಣ್ಣಿನ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸುವುದು ತುಂಬಾ ಸುರಕ್ಷಿತವಾಗಿದೆ. ಆಹಾರ ತಯಾರಿಕೆಗೆ ಮಣ್ಣಿನ ಮಡಕೆಗಳನ್ನು ಬಳಸುವಾಗ ಕಡಿಮೆ ಎಣ್ಣೆಯ ಅಗತ್ಯ ಇರುತ್ತದೆ. ಇವು ಪರಿಸರ ಸ್ನೇಹಿ ಮತ್ತು ಆಹಾರದ ಪೌಷ್ಟಿಕಾಂಶದ ಮೌಲ್ಯವನ್ನು ಕಾಪಾಡಿಕೊಳ್ಳುತ್ತವೆ. ಮಣ್ಣಿನ ಪಾತ್ರೆಗಳು ಆಹಾರಕ್ಕೆ ಉತ್ತಮ ಶಾಖ ನೀಡುತ್ತವೆ. ಇದರಿಂದ ಪೋಷಕಾಂಶಗಳನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ.
ಲೋಹದ ಪಾತ್ರೆಗಳು: ನಾವು ಹಲವಾರು ರೀತಿಯ ಪಾತ್ರೆಗಳನ್ನು ಬಳಸುತ್ತೇವೆ. ಅವುಗಳು ವಿವಿಧ ವಸ್ತುಗಳಿಂದ ಮಾಡಲ್ಪಟ್ಟಿದೆ. ಅಲ್ಯೂಮಿನಿಯಂ, ಕಬ್ಬಿಣ, ಹಿತ್ತಾಳೆ ಅಥವಾ ತಾಮ್ರದಂತಹ ಈ ಕೆಲವು ವಸ್ತುಗಳು ಅಡುಗೆ ಮಾಡುವಾಗ ಆಹಾರದೊಂದಿಗೆ ಮಿಶ್ರಣವಾಗುತ್ತದೆ. ಆಮ್ಲೀಯ ಆಹಾರಗಳಾದ ಉಪ್ಪಿನಕಾಯಿ, ಚಟ್ನಿಗಳು, ಸಾಂಬಾರ್ ಮತ್ತು ಸಾಸ್‌ಗಳನ್ನು ಅಲ್ಯೂಮಿನಿಯಂ, ಕಬ್ಬಿಣ, ಹಿತ್ತಾಳೆ ಅಥವಾ ತಾಮ್ರದ ಪಾತ್ರೆಗಳಲ್ಲಿ ಸಂಗ್ರಹಿಸುವುದು ಒಳ್ಳೆಯದಲ್ಲ.
ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳು: ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳನ್ನು ಸರಿಯಾಗಿ ಬಳಸಿದರೆ ಸಾಮಾನ್ಯವಾಗಿ ಅಡುಗೆಗೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಅದರ ಬಾಳಿಕೆ, ತುಕ್ಕುಗೆ ಪ್ರತಿರೋಧ, ಮತ್ತು ಆಹಾರಗಳೊಂದಿಗೆ ಪ್ರತಿಕ್ರಿಯಾತ್ಮಕತೆ ಸೇರಿದಂತೆ ಅನೇಕ ಪ್ರಯೋಜನಗಳ ಕಾರಣದಿಂದಾಗಿ ಪ್ರಪಂಚದಾದ್ಯಂತದ ಅಡುಗೆ ಮನೆಗಳಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಆಮ್ಲೀಯ ಅಥವಾ ಕ್ಷಾರೀಯ ಆಹಾರಗಳೊಂದಿಗೆ ಕರಗುವುದಿಲ್ಲ ಅಥವಾ ಪ್ರತಿಕ್ರಿಯಿಸುವುದಿಲ್ಲ. ಅಂದರೆ, ಬೇಯಿಸಿದ ಆಹಾರವನ್ನು ಅದರಲ್ಲಿ ಸಂಗ್ರಹಿಸಿದರೆ, ಲೋಹೀಯ ರುಚಿ ಅಥವಾ ಹಾನಿಕಾರಕ ಅಂಶಗಳು ಆಹಾರದೊಂದಿಗೆ ಮಿಶ್ರಣವಾಗುವುದಿಲ್ಲ.
ಟೆಫ್ಲಾನ್ ಲೇಪಿತ ನಾನ್ - ಸ್ಟಿಕ್ ಪ್ಯಾನ್: ಟೆಫ್ಲಾನ್ ಲೇಪಿತ ನಾನ್-ಸ್ಟಿಕ್ ಪ್ಯಾನ್‌ಗಳನ್ನು 170 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನಕ್ಕೆ ಬಿಸಿ ಮಾಡಿದಾಗ ಅಪಾಯಕಾರಿ. ಖಾಲಿ ಪ್ಯಾನ್ ಅನ್ನು ದೀರ್ಘಕಾಲದವರೆಗೆ ಬರ್ನರ್ನಲ್ಲಿ ಬಿಟ್ಟರೆ ರಾಸಾಯನಿಕಗಳನ್ನು ಬಿಡುಗಡೆ ಮಾಡಬಹದು. ಈ ಪ್ಯಾನ್ ಬಳಸಿದ ಲೇಪನಗಳು ಕಿರಿಕಿರಿಯುಂಟುಮಾಡುತ್ತವೆ. ಜೊತೆಗೆ ವಿಷಕಾರಿ ಹೊಗೆಯನ್ನು ಹೊರಸೂಸಬಹುದು. ನಾನ್-ಸ್ಟಿಕ್ ಕುಕ್‌ವೇರ್‌ಗಳ ಬಳಕೆ ಮತ್ತು ಶುಚಿಗೊಳಿಸುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಮತ್ತು ಪ್ಯಾನ್ನ ಲೇಪನ ಹಾನಿಗೊಳಗಾದರೆ ಅವುಗಳನ್ನು ಎಸೆಯಬೇಕಾಗುತ್ತದೆ.
ಗ್ರಾನೈಟ್ ಸ್ಟೋನ್ ಕುಕ್‌ವೇರ್: ಹಿಂದಿನ ತಲೆಮಾರಿನ ಗ್ರಾನೈಟ್ ಕಲ್ಲಿನ ಅಡುಗೆ ಪಾತ್ರೆಗಳಿಂದ ಅಡುಗೆ ಮಾಡಲಾಗುತ್ತಿದೆ. ಈ ಅಡುಗೆ ಪಾತ್ರೆಗಳು ತುಂಬಾ ಹಗುರವಾಗಿವೆ. ಗ್ರಾನೈಟ್ ಕಲ್ಲಿನ ಕುಕ್ ವೇರ್ ಸಮಯ ಮತ್ತು ಶಕ್ತಿಯನ್ನು ಉಳಿಸುತ್ತದೆ. ಶಾಖದ ಮೂಲವನ್ನು ಆಫ್ ಮಾಡಿದ ನಂತರವೂ ಈ ಕುಕ್‌ವೇರ್ ಶಾಖವನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಇದು ಹಗುರವಾದ, ಬಾಳಿಕೆ ಬರುವ ಮತ್ತು ಸ್ವಚ್ಛಗೊಳಿಸಲು ಕೂಡ ಸುಲಭವಾಗಿದೆ. ಕಡಿಮೆ ಮತ್ತು ಮಧ್ಯಮ ಉರಿಯಲ್ಲಿ ಅಡುಗೆ ಮಾಡಲು ಗ್ರಾನೈಟ್ ಕುಕ್‌ವೇರ್ ಸೂಕ್ತವಾಗಿದೆ. ಇದು ದಪ್ಪ ಮತ್ತು ಅಗಲವಾದ ತಳವನ್ನು ಹೊಂದಿರುತ್ತವೆ. ನೀವು ಅಡುಗೆ ಪ್ರಕ್ರಿಯೆಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಲು ಬಯಸಿದರೆ ಈ ಪಾತ್ರೆಗಳು ತುಂಬಾ ಮುಖ್ಯವಾಗಿವೆ.
ಪರ್ಫ್ಲೋರೋಕ್ಟಾನೋಯಿಕ್ ಆಸಿಡ್ (PFOA), ಪರ್ಫ್ಲೋರೋಕ್ಟೇನ್ ಸಲ್ಫೋನೇಟ್ (PFOS) ಮತ್ತು ಪಾಲಿಟೆಟ್ರಾಫ್ಲೋರೋಎಥಿಲೀನ್ (PTFE) ನಂತಹ ಟೆಫ್ಲಾನ್ ಲೇಪನಗಳನ್ನು ಒಳಗೊಂಡಿರುವವರೆಗೆ ಕುಕ್‌ವೇರ್ ಅನ್ನು ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ನೀವು ಆರೋಗ್ಯವಾಗಿರಲು ಬಯಸಿದರೆ, ನೀವು ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳು, ಮಣ್ಣಿನ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸಿ ಸೇವನೆ ಮಾಡಿದರೆ ಅನುಕೂಲವಾಗುತ್ತದೆ. ಆದ್ರೆ, ಅಲ್ಯೂಮಿನಿಯಂ, ಸೆರಾಮಿಕ್, ನಾನ್-ಸ್ಟಿಕ್ ಕುಕ್‌ವೇರ್‌ಗಳ ಅತಿಯಾದ ಬಳಕೆಯನ್ನು ತಪ್ಪಿಸಬೇಕು ಎಂದು ಆಹಾರ ತಜ್ಞರು ಹೇಳುತ್ತಾರೆ.