ಬೆಂಗಳೂರು: ಮೂತ್ರಪಿಂಡ ಕಸಿ ಎಂಬುದನ್ನು ಕೇಳಿರುತ್ತೀರಿ. ಇದು ದಾನಿಯಿಂದ ಆರೋಗ್ಯಕರ ಮೂತ್ರಪಿಂಡವನ್ನು ಪಡೆದು ಮೂತ್ರಪಿಂಡ ವಿಫಲವಾದವರಿಗೆ ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸುವ ಪ್ರಕ್ರಿಯೆ. ದಾನಿ ಜೀವಂತವಾಗಿರಬಹುದು ಅಥವಾ ಸಾವನ್ನಪ್ಪಿರಬಹುದು. ಆದರೆ ಅಂಗ ದಾನಿ ಮತ್ತು ಸ್ವೀಕರಿಸುವವರ ನಡುವಿನ ಹೊಂದಾಣಿಕೆ ಇಲ್ಲಿ ಬಹಳ ಮುಖ್ಯ ಅಂಶ.
ನಗರದ ಮಣಿಪಾಲ್ ಆಸ್ಪತ್ರೆ ಇದೇ ಅಂಗ ಕಸಿ ಪ್ರಕ್ರಿಯೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಸ್ವಾಪ್ ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್ (ಜೋಡಿ ಕಿಡ್ನಿ ಎಕ್ಸ್‌ಚೇಂಜ್) ಎಂದು ಕರೆಯಲ್ಪಡುವ ವಿಶಿಷ್ಟ ರೀತಿಯ ಕಸಿ ಶಸ್ತ್ರ ಚಿಕಿತ್ಸೆಗೆ ಆಸ್ಪತ್ರೆ ಮುಂದಾಗಿದೆ. ಜೀವಂತ ದಾನಿ ಮತ್ತು ಸ್ವೀಕರಿಸುವವರು ಒಂದೇ ಕುಟುಂಬಕ್ಕೆ ಸೇರಿದ್ದರೆ ಕಿಡ್ನಿ ಹೊಂದಿಕೆಯಾಗುವುದಿಲ್ಲ. ಇದಕ್ಕೆ ಕಾರಣ ರಕ್ತದ ಗುಂಪಿನಲ್ಲಿನ ವ್ಯತ್ಯಾಸ ಮತ್ತು ಅಂಗಾಂಶ ಹೊಂದಾಣಿಕೆಯಲ್ಲಿನ ವ್ಯತ್ಯಾಸವೂ ಕಾರಣವಾಗಬಹುದು. ಈ ಸಮಸ್ಯೆಯನ್ನು ಹೊಸ ಪ್ರಕ್ರಿಯೆಯ ಮೂಲಕ ಬಗೆಹರಿಸಲು ಮಣಿಪಾಲ್ ಆಸ್ಪತ್ರೆ ತಯಾರಾಗಿದೆ.
'ಸ್ವಾಪ್ ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್' ಎಂದರೇನು?: ಎರಡು ಜೋಡಿ ದಾನಿಗಳು ಮತ್ತು ಎರಡು ವಿಭಿನ್ನ ಕುಟುಂಬಗಳ ಸ್ವೀಕರಿಸುವವರ ನಡುವೆ ಅಂಗಗಳ ವಿನಿಮಯವನ್ನು 'ಸ್ವಾಪ್ ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್' ಎಂದು ಕರೆಯುತ್ತಾರೆ. ತಮ್ಮ ಸ್ವಂತ ಕುಟುಂಬದ ಸದಸ್ಯರಿಗೆ ದಾನ ಮಾಡಲು ಸಾಧ್ಯವಿಲ್ಲದಿರುವುದಕ್ಕೆ ಜೋಡಿ ವಿನಿಮಯ ಮಾಡಲಾಗುತ್ತದೆ.
ಪ್ರಯೋಜನವೇನು?: ಇಬ್ಬರು ದಾನಿಗಳು ಮತ್ತು ಸ್ವೀಕರಿಸುವ ಜೋಡಿಗಳು ಇದ್ದಲ್ಲಿ ಅಸಾಮರಸ್ಯದಿಂದಾಗಿ ಕಸಿ ಮಾಡಲು ಸಾಧ್ಯವಾಗದು. ಹೀಗಾಗಿ ಇದಕ್ಕೆ ಸ್ವಾಪ್ ಟ್ರಾನ್ಸ್‌ಪ್ಲಾಂಟ್ ಸಹಾಯ ಮಾಡುತ್ತದೆ. ಈ ಮೂಲಕ ಅಂಗಗಳ ಕೊರತೆಯೂ ನೀಗುತ್ತದೆ. ಕಾನೂನುಬದ್ಧವಾಗಿ ಟ್ರಾನ್ಸ್‌ಪ್ಲಾಂಟ್ ಮಾಡುವವರ ಸಂಖ್ಯೆಯನ್ನು ಕೂಡ ಹೆಚ್ಚು ಮಾಡಬಹುದು. ಈ ಪ್ರಕ್ರಿಯೆಯು ಸ್ವೀಕರಿಸುವವರಿಗೆ ಉತ್ತಮ ಹೊಂದಾಣಿಕೆಯ ಕಿಡ್ನಿಯನ್ನು ಪಡೆಯಲು ಸಹಾಯ ಮಾಡುತ್ತದೆ.
ಸ್ವಾಪ್ ಟ್ರಾನ್ಸ್‌ಪ್ಲಾಂಟೇಶನ್ ಹೆಚ್ಚು ಪ್ರಯೋಜನಕಾರಿಯಾಗಿದೆ. ಮೃತಪಟ್ಟ ವ್ಯಕ್ತಿಯ ಕಿಡ್ನಿ ಟ್ರಾನ್ಸ್ಪ್ಲಾಂಟೇಶನ್ಗೆ ಹೋಲಿಸಿದರೆ ಈ ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್ ಕಾಯುವ ಸಮಯ ಕಡಿಮೆ ಮಾಡುತ್ತದೆ. ಹೊಂದಾಣಿಕೆಯಾಗದ ಟ್ರಾನ್ಸ್ಪ್ಲಾಂಟೇಶನ್ಗೆ ಹೋಲಿಸಿದರೆ ಇದು ಕಡಿಮೆ ಅಪಾಯಕಾರಿ ಎಂದು ಯಶವಂತಪುರದ ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್ ನೆಫ್ರಾಲಜಿಸ್ಟ್ ಮತ್ತು ಟ್ರಾನ್ಸ್‌ಪ್ಲಾಂಟ್ ವೈದ್ಯ ಡಾ.ದೀಪಕ್ ಕುಮಾರ್ ಚಿತ್ರಳ್ಳಿ ತಿಳಿಸಿದ್ದಾರೆ.
ಸ್ವಾಪ್ ಕಿಡ್ನಿ ಕಸಿ ಒಂದು ಗಮನಾರ್ಹ ವೈದ್ಯಕೀಯ ವಿಧಾನ. ಪ್ರಪಂಚದಾದ್ಯಂತ ಅಸಂಖ್ಯಾತ ವ್ಯಕ್ತಿಗಳ ಜೀವನವನ್ನು ಈ ಪ್ರಕ್ರಿಯೆ ಸುಧಾರಿಸಿದೆ. ಅಂಗಗಳ ಕೊರತೆ ಮತ್ತು ರಿಜೆಕ್ಟ್ ಆಗುವ ಅಪಾಯ ಸೇರಿದಂತೆ ಹಲವು ಸವಾಲುಗಳ ಹೊರತಾಗಿಯೂ ಮೂತ್ರಪಿಂಡದ ಕಸಿ ಭರವಸೆ ನೀಡುತ್ತದೆ. ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ. ಅಂತಿಮ ಹಂತದಲ್ಲಿರುವ ಮೂತ್ರಪಿಂಡದ ಕಾಯಿಲೆಯ ರೋಗಿಗಳಿಗೆ ದೀರ್ಘಾಯುಷ್ಯವನ್ನು ನೀಡುತ್ತದೆ ಎಂದು ಅವರು ವಿವರಿಸಿದರು.