ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ದೀಪಾವಳಿ ಸಂದರ್ಭ ಅಂದರೆ, ಅಕ್ಟೋಬರ್ ಮೊದಲ ವಾರದಿಂದ ಡಿಸೆಂಬರ್ವರೆಗೆ ಉಂಟಾಗುತ್ತಿದ್ದ ಭಾರಿ ವಾಯು ಮಾಲಿನ್ಯಕ್ಕೆ ನೆರೆಯ ಹರಿಯಾಣ ಮತ್ತು ಪಂಜಾಬ್ನಲ್ಲಿ ರೈತರು ಸುಡುವ ಕೃಷಿ ತ್ಯಾಜ್ಯವೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿತ್ತು. ಆದರೆ, ಈ ಬಾರಿ ವಾಯಮಾಲಿನ್ಯ ಜನವರಿಯಲ್ಲೂ ಮುಂದುವರೆದಿದೆ. ಹೊಸ ವರ್ಷದ ಬಳಿಕವೂ ನಗರದಲ್ಲಿ ವಾಯು ಕಳಪೆ ಗಂಭೀರ ಮಟ್ಟದಲ್ಲಿದೆ. ಜನರು ದಟ್ಟ ಮಂಜು ಮತ್ತು ಮಾಲಿನ್ಯದಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
ಕಾರಣವೇನು?: ತಜ್ಞರು ಹೇಳುವ ಪ್ರಕಾರ, ದೆಹಲಿಯ ಕಳಪೆ ವಾಯುಗುಣಮಟ್ಟಕ್ಕೆ ಚಳಿಗಾಲದಲ್ಲಿನ ತಾಪಮಾನದ ವಿಲೋಮ ಪ್ರಕ್ರಿಯೆ ಕಾರಣವಾಗಿದೆ. ನಗರವು ಚಳಿಗಾಲದ ತಾಪಮಾನದಲ್ಲಿ ವೈಪರೀತ್ಯ ಕಾಣುತ್ತದೆ. ಬೆಚ್ಚಗಿನ ಗಾಳಿಯ ಪದರವನ್ನು ತಣ್ಣನೆಯ ಗಾಳಿ ಮುಚ್ಚುತ್ತದೆ. ಈ ವಿದ್ಯಮಾನ ಮಾಲಿನ್ಯವನ್ನು ವಾತಾವರಣದಲ್ಲಿ ಹಿಡಿದಿಡುತ್ತದೆ. ಇದು ಜನರ ಉಸಿರಾಟದ ಸಮಸ್ಯೆಗೆ ಕಾರಣವಾಗಿದೆ. ಇದೇ ಕಾರಣಕ್ಕೆ ವಾಯು ಗುಣಮಟ್ಟ ಸೂಚ್ಯಂಕ 350ಕ್ಕಿಂತ ಕಡಿಮೆಯಾಗುತ್ತಿಲ್ಲ.
ಭಾರಿ ಜನಸಂಖ್ಯಾ ಸಾಂದ್ರತೆ ಮತ್ತು ವಾಹನಗಳ ಹೆಚ್ಚಳವೂ ಇದಕ್ಕೆ ಗಣನೀಯ ಕೊಡುಗೆ ನೀಡುತ್ತಿದೆ. ವಾಹನಗಳ ಹೊಗೆಯು ಧೂಳಿನ ಕಣಗಳು, ನೈಟ್ರೋಜನ್ ಡೈಆಕ್ಸೆಡ್ ಮತ್ತು ಕಾರ್ಬನ್ ಮೊನಾಕ್ಸೆಡ್ ಅನ್ನು ಬಿಡುಗಡೆ ಮಾಡುತ್ತದೆ. ಅಷ್ಟೇ ಅಲ್ಲ, ನಗರದೊಳಗೆ ಮತ್ತು ಹೊರಗಿರುವ ಕೈಗಾರಿಕೆಗಳು ಕೂಡ ವಾಯು ಗುಣಮಟ್ಟ ಕುಸಿಯುವಲ್ಲಿ ಪ್ರಮುಖ ಪಾತ್ರ ಹೊಂದಿವೆ. ಈ ಮೂಲಗಳಿಂದ ಹೊರಡುವ ಹೊಗೆಗಳನ್ನು ತಡೆಯಲು ಕಟ್ಟುನಿಟ್ಟಿನ ಅಗತ್ಯ ಕ್ರಮ ಅಗತ್ಯ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಫಲ ನೀಡುವುದೇ ಜಿಆರ್ಎಪಿ?: ದೆಹಲಿಯಲ್ಲಿ ವಾಯು ಗುಣಮಟ್ಟ ಗಂಭೀರ ಪ್ರಮಾಣದಲ್ಲಿದ್ದು, ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್ (ಜಿಆರ್ಎಪಿ) ಎಂದು ಕರೆಯಲಾಗುವ ಕೇಂದ್ರದ ವಾಯು ಮಾಲಿನ್ಯ ನಿಯಂತ್ರಣ ಯೋಜನೆ 1 ಮತ್ತು 2 ನೀತಿ ಅಳವಡಿಕೆಯು ಮಾಲಿನ್ಯ ಕಡಿಮೆ ಮಾಡುವಲ್ಲಿ ಸಹಾಯ ಮಾಡಬಹುದೇ ಎಂಬುದಕ್ಕೆ ತಜ್ಞರು, ಇಲ್ಲ ಎನ್ನುತ್ತಾರೆ.
ಅನಾನುಕೂಲಕರ ಹವಾಮಾನ ಪರಿಸ್ಥಿತಿಗಳು, ದಟ್ಟ ಮಂಜು, ಕಡಿಮೆ ತಾಪಮಾನ ಮತ್ತು ತಂಪು ಗಾಳಿ ಮಾದರಿಗಳು ಮಾಲಿನ್ಯಕಾರಕ ಪ್ರವೇಶಕ್ಕೆ ಕೊಡುಗೆ ನೀಡುತ್ತವೆ ಎಂದು ತಜ್ಞರು ತಿಳಿಸಿದ್ದಾರೆ. ಈ ನಡುವೆ ಮಳೆ ಮಾಲಿನ್ಯವನ್ನು ಕೊಂಚ ಕಡಿಮೆ ಮಾಡಬಹುದು. ಆದರೆ, ತುಂತುರು ಮಳೆ ವಾಯುವನ್ನು ಮತ್ತಷ್ಟು ಕಳಪೆ ಮಾಡುತ್ತದೆ. ವಾಯು ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಬೇರೆಲ್ಲಾ ಕ್ರಮಗಳ ನಡುವೆ ಹವಾಮಾನವೂ ಪ್ರಮುಖ ಪಾತ್ರವಹಿಸುತ್ತದೆ ಎಂದಿದ್ದಾರೆ.(ಐಎಎನ್ಎಸ್)
ಇದನ್ನೂ ಓದಿ: ಕರ್ತವ್ಯ ಪಥದಲ್ಲಿ ಚಿತ್ತಾಕರ್ಷಕ ಪರೇಡ್: 25 ಸ್ತಬ್ಧಚಿತ್ರಗಳ ಮೆರುಗು, 54 ವಿಮಾನಗಳ ರೋಮಾಂಚನಕಾರಿ ಏರ್‌ಶೋ