ನ್ಯೂಯಾರ್ಕ್: ಸ್ಲೀಪ್ ಅಪ್ನಿಯಾ ಸಮಸ್ಯೆಯಿಂದ ಬಳಲುತ್ತಿರುವ ಜನರನ್ನು ಗಂಭೀರ ನಿದ್ರಾ ಸಮಸ್ಯೆ ಕಾಡುತ್ತದೆ. ಇವರು ನಿದ್ರಿಸುವಾಗ ಉಸಿರಾಟ ಸರಾಗವಾಗಿ ಸಾಗದೇ ಪದೇ ಪದೇ ನಿಲ್ಲುತ್ತಾ ಆರಂಭವಾಗುತ್ತದೆ. ಇದು ಮುಂದೆ ಅವರ ಸ್ಮರಣೆ ಅಥವಾ ಯೋಚಿಸುವ ಶಕ್ತಿಗೆ ತೊಂದರೆ ಉಂಟುಮಾಡುತ್ತದೆ ಎಂದು ಪ್ರಾಥಮಿಕ ಅಧ್ಯಯನ ತಿಳಿಸಿದೆ.
ಅಧ್ಯಯನದಲ್ಲಿ ಸ್ಲೀಪ್ ಅಪ್ನಿಯಾವೂ ಅರಿವಿನ ಸಮಸ್ಯೆಯೊಂದಿಗೆ ಸಂಬಂಧ ಹೊಂದಿದೆ ಎಂದು ತೋರಿಸಿದೆ. ಆದರೆ, ಇದು ಅರಿವಿನ ಇಳಿಕೆಗೆ ಕಾರಣವಾಗಲಿದೆ ಎಂಬುದನ್ನು ನಿಖರವಾಗಿ ಹೇಳಿಲ್ಲ.
ಸ್ಲೀಪ್ ಅಪ್ನಿಯಾ ಸಮಸ್ಯೆ ಹೊಂದಿರುವವರಲ್ಲಿ ಉಸಿರಾಟಕ್ಕೆ ಆಗಾಗ್ಗೆ ಅಡಚಣೆ ಉಂಟಾಗುತ್ತದೆ. ಇದು ನಿದ್ರೆಯ ವೇಳೆ ಗೊರಕೆ ಮತ್ತು ಏದುರಿಸಿನಲ್ಲೂ ಸಮಸ್ಯೆ ಉಂಟುಮಾಡಬಲ್ಲದು. ಈ ವೇಳೆ ಕಡಿಮೆ ರಕ್ತದ ಆಮ್ಲಜನಕ ಮಟ್ಟದಂತಹ ಪರಿಸ್ಥಿತಿ ಮಾರಣಾಂತಿಕವಾಗಬಹುದು. ಈ ಸಮಸ್ಯೆ ಹೊಂದಿರುವವರಲ್ಲಿ ಬೆಳಗಿನ ಸಮಯದಲ್ಲಿ ತಲೆನೋವು ಅಥವಾ ಕೆಲಸದಲ್ಲಿ ಏಕಾಗ್ರತೆ ಸಮಸ್ಯೆ ತಲೆದೋರುತ್ತದೆ.
ಸ್ಲೀಪ್ ಅಪ್ನಿಯಾ ಎಂಬುದು ಬಹುತೇಕ ಪತ್ತೆಯಾಗದ ಸಾಮಾನ್ಯ ಆರೋಗ್ಯಬಾಧೆಯಾಗಿದ್ದು, ಇದಕ್ಕೆ ಸೂಕ್ತ ಚಿಕಿತ್ಸೆ ಲಭ್ಯವಿಲ್ಲ ಎಂದು ಅಮೆರಿಕದ ಮೆಸ್ಸಾಚೂಸೆಟ್ನಲ್ಲಿನ ಬೋಸ್ಟನ್ ಮೆಡಿಕಲ್ ಸೆಂಟರ್ನ ಡೊನಿಮಿಕ್ಯೂ ಲೊ ಹೇಳುತ್ತಾರೆ. ಈ ಅಧ್ಯಯನದಲ್ಲಿ ಭಾಗಿದಾರರಲ್ಲಿ ಸ್ಲೀಪ್ ಅಪ್ನೀಯ ಲಕ್ಷಣ ಹೊಂದಿರುವವರಲ್ಲಿ ಸ್ಮರಣೆ ಅಥವಾ ಯೋಚನೆಯಲ್ಲಿ ಹೆಚ್ಚಿನ ತೊಂದರೆ ಕಾಣಬಹುದಾಗಿದೆ ಎಂದಿದ್ದಾರೆ.
ಅಧ್ಯಯನದಲ್ಲಿ 4,257 ಜನರು ಭಾಗಿಯಾಗಿದ್ದು, ಅವರ ನಿದ್ರೆಯ ಗುಣಮಟ್ಟ ಮತ್ತು ಯೋಚನೆ ಸಮಸ್ಯೆಯ ಕುರಿತು ಪ್ರಶ್ನೆಗಳನ್ನು ಕೇಳಲಾಗಿದೆ. ಸ್ಲೀಪ್ ಅಪ್ನಿಯಾದ ಲಕ್ಷಣ ಹೊಂದಿರುವ 1,079 ಜನರಲ್ಲಿ ಗೊರಕೆ, ನಿದ್ರೆಯ ಸಮಯದಲ್ಲಿ ಅಡೆತಡೆ ಪತ್ತೆಯಾಗಿದೆ. 357 ಮಂದಿ (ಶೇ.33ರಷ್ಟು) ಮಂದಿಗೆ ಯೋಚನೆಯ ಅಥವಾ ಸ್ಮರಣೆ ಸಮಸ್ಯೆ ಉಂಟಾಗಿದೆ. ಇನ್ನು ಶೇ.20ರಷ್ಟು (628) ಮಂದಿಯಲ್ಲಿ ಯಾವುದೇ ಲಕ್ಷಣ ಗೋಚರಿಸಿಲ್ಲ.
ಅಧ್ಯಯನದ ಫಲಿತಾಂಶದಲ್ಲಿ ಸಾಮಾನ್ಯ ಜನರಿಗೆ ಹೋಲಿಕೆ ಮಾಡಿದಾಗ ಶೇ.50ರಷ್ಟು ಮಂದಿಯಲ್ಲಿ ಸ್ಮರಣೆ ಅಥವಾ ಯೋಚನೆಯಲ್ಲಿ ಸಮಸ್ಯೆ ಪತ್ತೆಯಾಗಿದೆ. ಸ್ಲೀಪ್ ಅಪ್ನಿಯಾದ ಆರಂಭಿಕ ಪತ್ತೆ ಕುರಿತ ಅಗತ್ಯತೆಯನ್ನು ಅಧ್ಯಯನದ ಫಲಿತಾಂಶ ತಿಳಿಸಿದೆ. ಕಂಟಿನ್ಯೂಯಸ್ ಪಾಸಿಟಿವ್ ಏರ್ವೇಸ್ ಪ್ರೆಷರ್ (ಸಿಪಿಎಪಿ) ಮಷಿನ್ ಮೂಲಕ ಪರಿಣಾಮಕಾರಿ ಚಿಕಿತ್ಸೆ ನೀಡಬಹುದಾಗಿದೆ. ಗುಣಮಟ್ಟದ ನಿದ್ದೆ, ಜೊತೆಗೆ ಆರೋಗ್ಯಯುತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಅರಿವಿನ ಉತ್ತೇಜಕತೆಯು ವ್ಯಕ್ತಿಯ ಸ್ಮರಣೆಯ ಸಮಸ್ಯೆಯನ್ನು ತಗ್ಗಿಸಿ, ಜೀವನಶೈಲಿಯ ಗುಣಮಟ್ಟ ಸುಧಾರಣೆಗೆ ಕಾರಣವಾಗಬಹುದು.
ಇನ್ನು ಅಧ್ಯಯನವು ಒಂದು ಸಮೀಕ್ಷೆಯ ದತ್ತಾಂಶವನ್ನು ಹೊಂದಿದ್ದು, ಕೆಲವು ಮಿತಿ ಹೊಂದಿದೆ. ಜೊತೆಗೆ ಭಾಗಿದಾರರನ್ನು ವೈದ್ಯಕೀಯ ವೃತ್ತಿಪರರ ಮೌಲ್ಯಮಾಪನಕ್ಕೆ ಒಳಪಡಿಸದೇ ಅವರ ಲಕ್ಷಣವನ್ನು ಆಧರಿಸಿ ವರದಿ ತಯಾರಿಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.(ಐಎಎನ್ಎಸ್)
ಇದನ್ನೂ ಓದಿ: ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್ನಲ್ಲಿ ಸ್ಲೀಪ್ ಅಪ್ನಿಯಾ ಫೀಚರ್ ಬಳಕೆಗೆ ಎಫ್ಡಿಎ ಅನುಮೋದನೆ