ನವದೆಹಲಿ: ಆಂಕೊಲಾಜಿಸ್ಟ್ಗಳಿಂದ ಎರಡನೇ ಅಭಿಪ್ರಾಯ ಪಡೆಯಲು ಎನ್‌ಜಿಒವೊಂದು ನಡೆಸುತ್ತಿರುವ ಸಹಾಯವಾಣಿಗೆ ಕರೆ ಮಾಡಿದ್ದ ಶೇಕಡಾ 20 ರಷ್ಟು ಕ್ಯಾನ್ಸರ್ ರೋಗಿಗಳು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಇದು ಯುವ ಜನರಲ್ಲಿ ಕ್ಯಾನ್ಸರ್ ಪ್ರಕರಣಗಳ ಹೆಚ್ಚಳವನ್ನು ಸೂಚಿಸುತ್ತದೆ ಎಂದು ಕ್ಯಾನ್ಸರ್ ಮುಕ್ತ ಭಾರತ್ ಫೌಂಡೇಶನ್ ಸಂಸ್ಥೆಯ ಅಂಕಿ - ಅಂಶಗಳು ತಿಳಿಸಿವೆ.
ಆನ್ಕೊಲೊಜಿಸ್ಟ್ ಗ್ರೂಪ್ ಪ್ರಾರಂಭಿಸಿರುವ ಕ್ಯಾನ್ಸರ್ ಮುಕ್ತ ಭಾರತ್ ಫೌಂಡೇಶನ್ ಪ್ರಕಾರ, ಮಾರ್ಚ್ 1 ಮತ್ತು ಮೇ 15 ರ ನಡುವೆ 1,368 ಕರೆಗಳು ಬಂದಿವೆ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕ್ಯಾನ್ಸರ್ ರೋಗಿಗಳಲ್ಲಿ 60 ಪ್ರತಿಶತದಷ್ಟು ಪುರುಷರಿದ್ದಾರೆ ಎಂದು ಅಧ್ಯಯನ ತೋರಿಸಿದೆ. ಪ್ರಸ್ತುತ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ (ಶೇ.26), ಜಠರ ಕರುಳಿನ ಕ್ಯಾನ್ಸರ್ (ಶೇ.16), ಸ್ತನ ಕ್ಯಾನ್ಸರ್ (ಶೇ.15) ಮತ್ತು ರಕ್ತದ ಕ್ಯಾನ್ಸರ್ (ಶೇ.9) ಪ್ರಕರಣಗಳು ಇವೆ. ಹೆಚ್ಚಿನ ಸಂಖ್ಯೆಯ ಕರೆಗಳು ಹೈದರಾಬಾದ್‌ನಿಂದ ಬಂದಿದ್ದು, ನಂತರದಲ್ಲಿ ಮೀರತ್, ಮುಂಬೈ ಮತ್ತು ನವದೆಹಲಿಯಿಂದ ಬಂದಿವೆ ಎಂದು ಎನ್‌ಜಿಒ ತಿಳಿಸಿದೆ.
ರೋಗಿಗಳು ರೋಗದ ಕುರಿತು ಎರಡನೇ ಅಭಿಪ್ರಾಯವನ್ನು ಉಚಿತವಾಗಿ ಪಡೆಯಲು ಸಹಾಯವಾಣಿ ಸಂಖ್ಯೆಯನ್ನು (93-555-20202) ಪ್ರಾರಂಭಿಸಲಾಗಿದೆ. ಇದು ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸುತ್ತದೆ. ಕ್ಯಾನ್ಸರ್ ರೋಗಿಗಳು ನೇರವಾಗಿ ಪ್ರಮುಖ ಆಂಕೊಲಾಜಿಸ್ಟ್‌ಗಳೊಂದಿಗೆ ಮಾತನಾಡಲು ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು ಅಥವಾ ಅವರ ಕ್ಯಾನ್ಸರ್ ಚಿಕಿತ್ಸೆ ಕುರಿತು ಚರ್ಚಿಸಲು ವಿಡಿಯೋ ಕರೆ ಮಾಡಬಹುದು.
ಕ್ಯಾನ್ಸರ್ ಮುಕ್ತ ಭಾರತ್ ಅಭಿಯಾನದ ಮುಖ್ಯಸ್ಥರಾಗಿರುವ ಹಿರಿಯ ಆಂಕೊಲಾಜಿಸ್ಟ್ ಡಾ ಆಶಿಶ್ ಗುಪ್ತಾ ಮಾತನಾಡಿ, ಸಹಾಯವಾಣಿ ಸಂಖ್ಯೆ ಪ್ರಾರಂಭವಾದಾಗಿನಿಂದ, ಭಾರತದಾದ್ಯಂತ ಕ್ಯಾನ್ಸರ್ ರೋಗಿಗಳಿಗೆ ಬೆಂಬಲ ಸಿಕ್ಕಿದೆ. ನಿತ್ಯ ನೂರಾರು ಕರೆಗಳನ್ನು ಬರುತ್ತಿವೆ. ಈ ಅಧ್ಯಯನವು ಭಾರತವನ್ನು 'ಕ್ಯಾನ್ಸರ್ ಮುಕ್ತ' ಮಾಡಲು ನಮಗೆ ಸಹಾಯ ಮಾಡುತ್ತದೆ. ಜೀವನಶೈಲಿ ಮಾರ್ಪಾಡು, ವ್ಯಾಕ್ಸಿನೇಷನ್ ಮತ್ತು ಸ್ಕ್ರೀನಿಂಗ್ ತಂತ್ರಗಳಿಂದ ಸಂಪೂರ್ಣವಾಗಿ ತಡೆಗಟ್ಟಬಹುದಾದ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಹೆಚ್ಚು ಪ್ರಚಲಿತವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಸ್ತನ ಮತ್ತು ಕರುಳಿನ ಕ್ಯಾನ್ಸರ್‌ಗಳು ಆರಂಭಿಕ ಹಂತಗಳಲ್ಲಿ ಕ್ಯಾನ್ಸರ್ ಇರುವುದನ್ನು ಪತ್ತೆ ಮಾಡಲು ಅತ್ಯಂತ ಪರಿಣಾಮಕಾರಿ ಸ್ಕ್ರೀನಿಂಗ್ ತಂತ್ರಗಳನ್ನು ಹೊಂದಿವೆ. ದುರದೃಷ್ಟವಶಾತ್ ಭಾರತದಲ್ಲಿ ಸರಿಯಾದ ತಪಾಸಣೆ ಇಲ್ಲದಿರುವುದರಿಂದ ಸುಮಾರು 2/3 ರಷ್ಟು ಕ್ಯಾನ್ಸರ್ ತಡವಾಗಿ ಪತ್ತೆಯಾಗಿದೆ ಎಂದು ತಿಳಿಸಿದರು.
ಭಾರತದಲ್ಲಿ ಪತ್ತೆಯಾದ ಶೇ. 27 ರಷ್ಟು ಪ್ರಕರಣಗಳು ಕ್ಯಾನ್ಸರ್‌ನ 1 ಮತ್ತು 2 ಹಂತಗಳಲ್ಲಿವೆ ಎಂದು ಅಧ್ಯಯನವು ಪತ್ತೆ ಮಾಡಿದೆ. ಆದರೆ, 63 ಪ್ರತಿಶತದಷ್ಟು ಕ್ಯಾನ್ಸರ್ 3 ಅಥವಾ 4 ಹಂತದಲ್ಲಿದೆ. ಕ್ಯಾನ್ಸರ್ ರೋಗಿಗಳ ಅತ್ಯಂತ ಸಾಮಾನ್ಯವಾದ ಪ್ರಶ್ನೆಯೆಂದರೆ ಎರಡನೇ ಅಭಿಪ್ರಾಯ ಮತ್ತು ಅವರ ಕ್ಯಾನ್ಸರ್ ಚಿಕಿತ್ಸೆಯು ಸರಿಯಾಗಿದೆಯೇ ಎಂಬುದಾಗಿದೆ. ಕ್ಯಾನ್ಸರ್ ಮುಕ್ತ ಭಾರತ ಅಭಿಯಾನವು ಶಿಕ್ಷಣ ಮತ್ತು ಆರಂಭಿಕ ಪತ್ತೆಹಚ್ಚುವಿಕೆಯ ಮೂಲಕ ವ್ಯಕ್ತಿಗಳು ಮತ್ತು ಸಮುದಾಯಗಳ ಮೇಲೆ ಕ್ಯಾನ್ಸರ್ ನ ಸಂಭವ ಮತ್ತು ಪರಿಣಾಮವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಇದಲ್ಲದೇ, ಸಂಸ್ಥೆಯನ್ನು ಸಂಪರ್ಕಿಸಿದ ಕ್ಯಾನ್ಸರ್ ರೋಗಿಗಳಲ್ಲಿ ಶೇ.67 ರಷ್ಟು ಜನರು ಖಾಸಗಿ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧ್ಯಯನವು ತೋರಿಸಿದೆ ಎಂದು ಮಾಹಿತಿ ನೀಡಿದರು.
ಶೇ.33ರಷ್ಟು ಮಂದಿ ಕ್ಯಾನ್ಸರ್ ರೋಗಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯತೆ, ಆಹಾರ ಪದ್ಧತಿಯಲ್ಲಿನ ಬದಲಾವಣೆ, ನಿರ್ದಿಷ್ಟವಾಗಿ ಸಂಸ್ಕರಿಸಿದ ಆಹಾರದ ಸೇವನೆಯ ಹೆಚ್ಚಳ ಮತ್ತು ಜಡ ಜೀವನಶೈಲಿ ಕೂಡ ಕ್ಯಾನ್ಸರ್ ಪ್ರಕರಣ ಹೆಚ್ಚಾಗಲು ಕಾರಣ. ಕ್ಯಾನ್ಸರ್ನಿಂದ ಪಾರಾಗಲು ನಾವು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು. ಯುವ ಪೀಳಿಗೆಯಲ್ಲಿ ಕ್ಯಾನ್ಸರ್ ಅಪಾಯವನ್ನು ತಡೆಗಟ್ಟಲು ತಂಬಾಕು ಮತ್ತು ಆಲ್ಕೋಹಾಲ್ ಬಳಕೆಯನ್ನು ತಪ್ಪಿಸಬೇಕು. ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಪ್ರಮುಖ ಆಂಕೊಲಾಜಿಸ್ಟ್ಗಳು ಉಚಿತವಾಗಿ ಮಾರ್ಗದರ್ಶನ ನೀಡುತ್ತಾರೆ. ಕ್ಯಾನ್ಸರ್ ರೋಗನಿರ್ಣಯ ಮತ್ತು ಚಿಕಿತ್ಸೆಯ ಸಂಕೀರ್ಣತೆಗಳನ್ನು ನ್ಯಾವಿಗೇಟ್ ಮಾಡುವ ರೋಗಿಗಳಿಗೆ ಅಗತ್ಯ ಸಲಹೆಗಳನ್ನು ನೀಡುತ್ತಾರೆ ಎಂದು ಅವರು ಹೇಳಿದರು.