ನವದೆಹಲಿ: ಭಾರತದಲ್ಲಿ 60 ವರ್ಷ ಮೇಲ್ಪಟ್ಟ ಐವರಲ್ಲಿ ಒಬ್ಬರಿಗೆ ಸೌಮ್ಯ ಸ್ವಭಾವದ ನ್ಯೂರೋಕಾಂಗ್ನಿಟಿವ್ (ನರ ಅರಿವು) ಅಸ್ವಸ್ಥತೆ ಇದೆ ಎಂದು ಅಧ್ಯಯನ ತಿಳಿಸಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ಅಂದಾಜು 138 ಮಿಲಿಯನ್ ವಯಸ್ಕರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಸರಿಸುಮಾರು 24 ಮಿಲಿಯನ್ ಮಂದಿ ಮತ್ತು 9.9 ಮಿಲಿಯನ್ ಹಿರಿಯ ನಾಗರಿಕರಲ್ಲಿ ಕ್ರಮವಾಗಿ ಸೌಮ್ಯ ಮತ್ತು ಪ್ರಮುಖ ನ್ಯೂರೋಕಾಂಗ್ನಿಟಿವ್ ಅಸ್ವಸ್ಥತೆ ಕಂಡುಬಂದಿದೆ. ಈ ಕುರಿತು ಜರ್ನಲ್ ಪಿಎಲ್ಒಎಸ್ ಒನ್ನಲ್ಲಿ ವರದಿ ಪ್ರಕಟಿಸಲಾಗಿದೆ.
ಅಧ್ಯಯನದ ಫಲಿತಾಂಶ ತೋರಿಸುವಂತೆ ಹಿರಿಯ ವಯಸ್ಕರು, ಅಂದರೆ 60ರಿಂದ 64 ವರ್ಷದವರಲ್ಲಿ ಈ ಸಮಸ್ಯೆ ಶೇ 4ರಷ್ಟು ಇದ್ದರೆ, 80 ವರ್ಷ ಮೀರಿದವರಲ್ಲಿ ಶೇ 15.2ರಷ್ಟಿದೆ. ದೇಶದಲ್ಲಿ ವಯಸ್ಸಾದವರ ಸಂಖ್ಯೆ ಏರಿಕೆ ಕಾಣುತ್ತಿದ್ದು, ಡೆಮೆನ್ಶಿಯಾದಂತಹ ಹೊರೆ ಎಚ್ಚರಿಕೆ ಗಂಟೆ ಬಾರಿಸಿದೆ ಎಂದು ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜ್ ಮತ್ತು ಅಮೆರಿಕದ ಜಾನ್ ಹಾಪ್ಕಿನ್ಸ್ ಯೂನಿವರ್ಸಿಟಿ ತಂಡ ನಡೆಸಿದ ಸಂಶೋಧನೆಯಲ್ಲಿ ತಿಳಿದುಬಂದಿದೆ.
ಅಧ್ಯಯನಕ್ಕಾಗಿ ಈ ತಂಡವು 18 ಭೌಗೋಳಿಕ ಪ್ರದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ದೆಹಲಿ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯದ ವೈವಿಧ್ಯ ಭಾಷೆಗಳನ್ನು ಹೊಂದಿರುವ 4,100 ನಿವಾಸಿಗಳನ್ನು ಭಾಗಿಯಾಗಿಸಿದೆ. ಅಧ್ಯಯನದಲ್ಲಿ ಭಾಗಿಯದವರು 60 ರಿಂದ 79 ವರ್ಷ ವಯೋಮಾನದವರಾಗಿದ್ದಾರೆ.
ನ್ಯೂರೋಕಾಂಗ್ನಿಟಿವ್ ಸಮಸ್ಯೆ ಹೆಚ್ಚು ವಯಸ್ಸಾದವರಲ್ಲಿ, ಕಡಿಮೆ ಶಿಕ್ಷಣ, ಅವಿದ್ಯಾವಂತ, ಗ್ರಾಮೀಣವಾಸಿಗಳಲ್ಲಿ ಗೋಚರಿಸಿದೆ. ಅಧ್ಯಯನವು ಭಾರತದಲ್ಲಿ ಬೆಳೆಯುತ್ತಿರುವ ಡೆಮನ್ಶಿಯಾ ಕುರಿತು ತಿಳಿಸಿದೆ. ದೇಶದಲ್ಲಿ ಈ ಹಿಂದೆ ಗುರುತಿಸಿದ್ದಕ್ಕಿಂತ ಹೆಚ್ಚಿನದಾಗಿ ಡೆಮಾನ್ಶಿಯಾ ಇರುವಿಕೆ ಪತ್ತೆಯಾಗಿದೆ. ಮುಂದಿನ ದಶಕದಲ್ಲಿ ವಯಸ್ಸಾದವರ ಸಂಖ್ಯೆ ಏರಿಕೆ ಕಾಣಲಿದ್ದು, ಸಮಾಜ, ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬಗಳ ಮೇಲೆ ಪ್ರಮುಖ ಪರಿಣಾಮ ಬೇರಲಿದೆ ಎಂದು ತಿಳಿಸಿದೆ.
ಸಂಶೋಧಕರ ತಂಡವು ಭಾಗಿದಾರರನ್ನು ಡಯೋಗ್ನೋಸ್ಟಿಕ್ ಆ್ಯಂಡ್ ಸ್ಟಾಟಿಸ್ಟಿಕಲ್ ಮ್ಯಾನುಯಲ್ ಆಫ್ ಮೆಂಟಲ್ ಡಿಸಾರ್ಡರ್ (ಡಿಎಸ್ಎಂ-5) ಬಳಕೆ ಮಾಡುವ ಮೂಲಕ ಈ ಲಕ್ಷಣಗಳನ್ನು ಪತ್ತೆ ಮಾಡಿದೆ. ಫಲಿತಾಂಶದಲ್ಲಿ ಅಧ್ಯಯನದಲ್ಲಿ ಭಾಗಿಯಾದವರಲ್ಲಿ ಸೌಮ್ಯ ಮತ್ತು ಗಂಭೀರ ನ್ಯೂರೋಕಾಂಗ್ನಿಟಿವ್ ಅಸ್ವಸ್ಥತೆ ಕ್ರಮವಾಗಿ 17.6 ಮತ್ತು 7.2ರಷ್ಟು ಕಂಡುಬಂದಿದೆ.
ಶೇ 12ರಷ್ಟು ಮಂದಿ ತಮ್ಮ ದಿನನಿತ್ಯದ ಜೀವನಕ್ಕೆ ಬೇಕಾದ ಗಂಭೀರ ಸ್ಮರಣೆ ಕಳೆದುಕೊಂಡಿದ್ದಾರೆ ಶೇ 8.5ರಷ್ಟು ಮಂದಿ ಐಎಡಿಎಲ್ (ಸೂಚನೆ ಮೇರೆಗೆ ದೈನಂದಿನ ಚಟುವಟಿಕೆ ನಡೆಸುವುದು) ದೋಷ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ. ಗಂಭೀರ ನ್ಯೂರೋಕಾಂಗ್ನಿಟಿವ್ ಅಸ್ವಸ್ಥತೆ ಹೆಚ್ಚಾಗಿ ಅವಿದ್ಯಾವಂತರಲ್ಲಿ 9.3ರಷ್ಟು ಕಂಡು ಬಂದರೆ, ವಿದ್ಯಾವಂತರಲ್ಲಿ ಶೇ 5ರಷ್ಟು ಕಂಡುಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ 10.3ರಷ್ಟು ಇದ್ದರೆ, ನಗರದಲ್ಲಿ 4.9ರಷ್ಟು ಕಂಡುಬಂದಿದೆ. (ಐಎಎನ್ಎಸ್)
ಇದನ್ನೂ ಓದಿ: 2015 ರಿಂದ ಭಾರತದಲ್ಲಿ ಶೇ 16ರಷ್ಟು ಕುಸಿದ ಟಿಬಿ ಪ್ರಕರಣ: ಕೇಂದ್ರ ಆರೋಗ್ಯ ಸಚಿವ