ನೀವು ಆಗಾಗ್ಗೆ ಬೆನ್ನು ನೋವಿನಿಂದ ಬಳಲುತ್ತಿದ್ದೀರಾ? ಅದು ಹೋಗಿದೆ ಎಂದು ನೀವು ಭಾವಿಸಿದಾಗಲೆಲ್ಲಾ ಅದು ಮತ್ತೆ ಮತ್ತೆ ಬರುತ್ತಿದೆಯಾ?. ಈ ವಿಪರೀತ ಬೆನ್ನು ನೋವು ಏನನ್ನೂ ಮಾಡದಂತೆ ನಿಮ್ಮನ್ನು ತಡೆಯುತ್ತದೆಯೇ? ಹಾಗಾದರೆ ನೀವು ನಿಮ್ಮ ದೈನಂದಿನ ದಿನಚರಿಯಲ್ಲಿ ನೀವು ವಾಕಿಂಗ್ ಮಾಡುವುದನ್ನು ಸೇರಿಸಿಕೊಳ್ಳಲೇಬೇಕು. ಸಿಡ್ನಿ ವಿಶ್ವವಿದ್ಯಾನಿಲಯ ಮತ್ತು ಮ್ಯಾಕ್ವಾರಿ ವಿಶ್ವವಿದ್ಯಾನಿಲಯವು ಜಂಟಿಯಾಗಿ ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ, ನಿಗದಿತ ರೀತಿಯಲ್ಲಿ ನಿತ್ಯ ನಡೆಯುವುದರಿಂದ ಬೆನ್ನು ನೋವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಬೆನ್ನು ನೋವನ್ನು ತಡೆಯಲು ವಾರದಲ್ಲಿ 5 ದಿನ ವಾಕಿಂಗ್ ಮಾಡಿದರೆ ಸಾಕು ಅಂತಿದೆ ಈ ಅಧ್ಯಯನ.
ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಸರಾಸರಿ 130 ನಿಮಿಷಗಳ ಕಾಲ ವಾರಕ್ಕೆ ಮೂರರಿಂದ ಐದು ಬಾರಿ ನಡೆಯುವುದರಿಂದ ಬೆನ್ನು ನೋವು ಸುಲಭವಾಗಿ ಪರಿಹಾರವಾಗುತ್ತದೆ. ಜನರು ಯಾವುದೇ ಚಿಕಿತ್ಸೆ ತೆಗೆದುಕೊಳ್ಳದವರಿಗಿಂತ ಎರಡು ಪಟ್ಟು ಹೆಚ್ಚು ಬೆನ್ನುನೋವಿನಿಂದ ಮುಕ್ತರಾಗುತ್ತಾರೆ ಅಂತಿದೆ ಈ ಅಧ್ಯಯನ. ಸಾಮಾನ್ಯ ದೈಹಿಕ ಚಟುವಟಿಕೆಗೆ ಅಡ್ಡಿಪಡಿಸುವ ಬೆನ್ನುನೋವಿಗೆ ವಾಕಿಂಗ್ ರಾಮಬಾಣ ಎಂದು ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ವರದಿ ಹೇಳುತ್ತದೆ.
2019 ರಿಂದ 2022 ರವರೆಗೆ ನಡೆಸಿದ ಈ ಸಂಶೋಧನೆಯಲ್ಲಿ, ಆರು ತಿಂಗಳ ಕಾಲ ಆರು ಅವಧಿಗಳಲ್ಲಿ ಸುಮಾರು 700 ಜನರು ಫಿಸಿಯೋಥೆರಪಿಸ್ಟ್‌ಗಳ ಮಾರ್ಗದರ್ಶನದಲ್ಲಿ ನಡೆಸಲಾಗಿದೆ. ಪ್ರತಿದಿನ ಸುಮಾರು ಅರ್ಧ ಗಂಟೆ ನಡೆದವರು ಆರು ತಿಂಗಳ ಬಳಿಕ ತುಸು ನೆಮ್ಮದಿ ಪರಿಹಾರ ಕಂಡುಕೊಂಡಿದ್ದರು. ಇನ್ನು ಪಟ್ಟುಬಿಡದೇ ನಡೆದವರಿಗೆ ಬೆನ್ನುನೋವಿನಿಂದ ಪರಿಹಾರ ಸಿಕ್ಕಿತ್ತು. ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಯಾರೂ ಆ ಸಮಯದಲ್ಲಿ ಬೆನ್ನುನೋವಿಗೆ ಚಿಕಿತ್ಸೆಯನ್ನು ತೆಗೆದುಕೊಂಡಿರಲಿಲ್ಲ . ಆದಾಗ್ಯೂ, ಅವರು ಬೆನ್ನುನೋವಿನಿಂದ ಸುಲಭ ಪರಿಹಾರ ಪಡೆದುಕೊಂಡಿದ್ದರು.
ಆರು ತಿಂಗಳ ನಡಿಗೆಯ ನಂತರ ನೋವು ಮಾಯವಾಗಿದೆ, ಅಧ್ಯಯನದಲ್ಲಿ ಭಾಗವಹಿಸಿದವರು ಮೂರು ವರ್ಷಗಳಿಂದ ತಮ್ಮನ್ನು ಕಾಡುತ್ತಿದ್ದ ಬೆನ್ನುನೋವಿನಿಂದ ಪರಿಹಾರ ಸಿಕ್ಕಿದೆ ಎಂದು ಹೇಳಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಸಂಶೋಧಕರು ಭಾಗವಹಿಸುವವರನ್ನು ಮಾಸಿಕ ಆಧಾರದ ಮೇಲೆ ಪರೀಕ್ಷೆ ನಡೆಸಿ ಫಲಿತಾಂಶವನ್ನು ಕಂಡುಕೊಂಡಿದ್ದಾರೆ. ವಾಕರ್‌ಗಳಲ್ಲಿ ಬೆನ್ನು ನೋವು ಮರುಕಳಿಸುವ ಅಪಾಯವು 28 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಬೆನ್ನುನೋವಿನಿಂದ ವೈದ್ಯರನ್ನು ಸಂಪರ್ಕಿಸುವವರ ಸಂಖ್ಯೆಯೂ ಶೇ.43ರಷ್ಟು ಕಡಿಮೆಯಾಗಿದೆ ಎಂಬುದು ಈ ಅಧ್ಯಯನದ ವೇಳೆ ಬಹಿರಂಗವಾಗಿದೆ.
112 ದಿನಗಳಲ್ಲಿ, ಬೆನ್ನು ನೋವು ಮರುಕಳಿಸುವ ಅಪಾಯವು ಸ್ವಲ್ಪ ಕಡಿಮೆಯಾಯಿತು ಮತ್ತು 208 ದಿನಗಳಲ್ಲಿ ನೋವು ಬಹುತೇಕ ದೂರವಾಯಿತು ಎಂದು ಅಧ್ಯಯನದಲ್ಲಿ ಭಾಗವಹಿಸಿದವರು ಹೇಳಿದ್ದಾರೆ. ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಹೆಚ್ಚಿನವರು ಮಹಿಳೆಯರು. ಅವರ ವಯಸ್ಸು 43 ರಿಂದ 66 ವರ್ಷಗಳು ಎಂದು ಸಂಶೋಧಕರು ಹೇಳಿದ್ದಾರೆ.
ನಡಿಗೆಯಂತಹ ಬೆನ್ನುನೋವಿನ ಚಿಕಿತ್ಸೆಯನ್ನು ಇಲ್ಲಿಯವರೆಗೆ ನಿರ್ಲಕ್ಷಿಸಲಾಗಿದೆ ಎಂದು ಈ ಸಂಶೋಧಕರು ಹೇಳಿದ್ದಾರೆ. ಹಿಂದಿನ ಎಲ್ಲ ಅಧ್ಯಯನಗಳು ಬೆನ್ನುನೋವಿಗೆ ವಿವಿಧ ಚಿಕಿತ್ಸೆಯನ್ನು ಸೂಚಿಸಿವೆ, ಆದರೆ ಭವಿಷ್ಯದಲ್ಲಿ ಬೆನ್ನು ನೋವನ್ನು ತಡೆಗಟ್ಟಲು ಏನು ಮಾಡಬೇಕೆಂದು ಅವರು ವಿವರಿಸಿದ್ದಾರೆ. ಅದಕ್ಕೆ ವಾಕಿಂಗ್ ಕೂಡ ಒಳ್ಳೆಯದು. ವ್ಯಾಯಾಮ ಮತ್ತು ಸಾಕಷ್ಟು ನಡಿಗೆಯಿಂದ ಉತ್ತಮ ಹೃದಯದ ಆರೋಗ್ಯ, ಉತ್ತಮ ಮನಸ್ಥಿತಿ ಮತ್ತು ಸಾಕಷ್ಟು ನಿದ್ರೆ ಬರುವಂತೆ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಆದರೆ, ಬೆನ್ನು ನೋವನ್ನು ಕಡಿಮೆ ಮಾಡಲು ನಡಿಗೆ ಏಕೆ ಪರಿಣಾಮಕಾರಿ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಸಂಶೋಧಕರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಸ್ನಾಯುವಿನ ಚಲನೆಯು ನೋವನ್ನು ಕಡಿಮೆ ಮಾಡುತ್ತದೆ ಎಂದು ಅಂದಾಜಿಸಲಾಗಿದೆ. ದೇಹ ಮತ್ತು ಮೆದುಳಿನ ನಡುವಿನ ನೋವಿನ ಸಂಕೇತಗಳನ್ನು ತಡೆಯುವ "ಫೀಲ್-ಗುಡ್" ಎಂಡಾರ್ಫಿನ್‌ಗಳ ಬಿಡುಗಡೆಯು ನೋವನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಬೆನ್ನು ನೋವನ್ನು ತಡೆಗಟ್ಟುವಲ್ಲಿ ವ್ಯಾಯಾಮಗಳು ಸಹ ಪರಿಣಾಮಕಾರಿಯಾಗಬಹುದು ಎಂದು ಅವರು ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ.
ಓದುಗರ ಗಮನಕ್ಕೆ: ಇಲ್ಲಿ ನಿಮಗೆ ಒದಗಿಸಲಾದ ಎಲ್ಲ ಆರೋಗ್ಯ ಮಾಹಿತಿ, ವೈದ್ಯಕೀಯ ಸಲಹೆಗಳು ಮತ್ತು ಸಲಹೆಗಳು ನಿಮ್ಮ ಮಾಹಿತಿಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ ಇವುಗಳನ್ನು ಅನುಸರಿಸುವ ಮೊದಲು ನೀವು ನಿಮ್ಮ ಆಪ್ತ ವೈದ್ಯಕೀಯ ಸಲಹೆಗಾರರು ಹಾಗೂ ಪರಿಣತರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.