ನವದೆಹಲಿ : ವಿಶೇಷವಾಗಿ ಸಸ್ಯ ಆಧಾರಿತ ಮೂಲದ ಆಹಾರಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಸೇವಿಸುವ ಮಹಿಳೆಯರು ದೀರ್ಘಕಾಲದ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಕಡಿಮೆ ಮತ್ತು ವಯಸ್ಸಾದಂತೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ದಿ ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಸಂಶೋಧಕರು 48,000 ಕ್ಕೂ ಹೆಚ್ಚು ಮಹಿಳೆಯರು ಸ್ವಯಂ ಪ್ರೇರಿತರಾಗಿ ನೀಡಿದ ಡೇಟಾವನ್ನು ವಿಶ್ಲೇಷಿಸಿದ್ದಾರೆ. ಕಡಿಮೆ ಆಹಾರ ಸೇವಿಸುವವರಿಗೆ ಹೋಲಿಸಿದರೆ ಹಣ್ಣು, ತರಕಾರಿ, ಬ್ರೆಡ್, ಬೀನ್ಸ್, ದ್ವಿದಳ ಧಾನ್ಯ ಮತ್ತು ಪಾಸ್ತಾದಂತಹ ಮೂಲಗಳಿಂದ ತಮ್ಮ ಆಹಾರದಲ್ಲಿ ಹೆಚ್ಚಿನ ಪ್ರೋಟೀನ್ ಸೇವಿಸಿದವರಲ್ಲಿ ಹೃದ್ರೋಗ, ಕ್ಯಾನ್ಸರ್, ಮಧುಮೇಹ, ಅರಿವಿನ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಕಡಿಮೆ ಎಂಬುದನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ.
"ಮಧ್ಯ ವಯಸ್ಸಿನಲ್ಲಿ ಪ್ರೋಟೀನ್ ಸೇವನೆಯಿಂದ ವಯಸ್ಸಾದ ನಂತರವೂ ಉತ್ತಮ ಆರೋಗ್ಯ ಹೊಂದಬಹುದು" ಎಂದು ಯುಎಸ್ ಮೂಲದ ಹ್ಯೂಮನ್ ನ್ಯೂಟ್ರಿಷನ್ ರಿಸರ್ಚ್ ಸೆಂಟರ್ ಆನ್ ಏಜಿಂಗ್ (ಎಚ್ಎನ್ಆರ್ ಸಿಎ) ವಿಜ್ಞಾನಿ ಮತ್ತು ಅಧ್ಯಯನದ ಪ್ರಮುಖ ಸಂಶೋಧಕ ಆಂಡ್ರೆಸ್ ಅರ್ಡಿಸನ್ ಕೊರಾಟ್ ಹೇಳಿದ್ದಾರೆ.
"ಪ್ರೋಟೀನ್ ಮೂಲ ಮುಖ್ಯವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಜೀವನದ ಮಧ್ಯ ವಯಸ್ಸಿನಲ್ಲಿ ಸಸ್ಯ ಮೂಲಗಳಿಂದ ನಿಮ್ಮ ಹೆಚ್ಚಿನ ಪ್ರೋಟೀನ್ ಪಡೆಯುವುದು, ಜೊತೆಗೆ ಸಣ್ಣ ಪ್ರಮಾಣದ ಪ್ರಾಣಿ ಪ್ರೋಟೀನ್ ಉತ್ತಮ ಆರೋಗ್ಯ ಮತ್ತು ವಯಸ್ಸಾದ ನಂತರ ದೀರ್ಘಾಯುಷ್ಯಕ್ಕೆ ಅನುಕೂಲಕರವಾಗಿದೆ" ಎಂದು ಅವರು ಹೇಳಿದರು.
ಇದಲ್ಲದೆ ಗೋಮಾಂಸ, ಕೋಳಿ, ಹಾಲು, ಮೀನು, ಸಮುದ್ರಾಹಾರ ಮತ್ತು ಚೀಸ್ ನಂತಹ ಹೆಚ್ಚಿನ ಪ್ರಾಣಿ ಪ್ರೋಟೀನ್ ಸೇವಿಸುವವರು ವಯಸ್ಸಾದಂತೆ ಆರೋಗ್ಯಕರವಾಗಿ ಉಳಿಯುವ ಸಾಧ್ಯತೆ ಶೇಕಡಾ 6 ರಷ್ಟು ಕಡಿಮೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. "ಹೆಚ್ಚಿನ ಪ್ರಮಾಣದ ಪ್ರಾಣಿ ಪ್ರೋಟೀನ್ ಸೇವಿಸುವವರು ಹೆಚ್ಚು ದೀರ್ಘಕಾಲದ ಕಾಯಿಲೆಯನ್ನು ಹೊಂದಿರುತ್ತಾರೆ" ಎಂದು ಕೊರಟ್ ತಿಳಿಸಿದರು.
ಸಸ್ಯ ಪ್ರೋಟೀನ್ ನ ಹೆಚ್ಚಿನ ಸೇವನೆಯು ಕಡಿಮೆ ಮಟ್ಟದ ಎಲ್ ಡಿಎಲ್ ಕೊಲೆಸ್ಟ್ರಾಲ್ (ಕೆಟ್ಟ ಕೊಲೆಸ್ಟ್ರಾಲ್), ಕಡಿಮೆ ರಕ್ತದೊತ್ತಡ ಮತ್ತು ಕಡಿಮೆ ಹೃದ್ರೋಗ, ಸುಧಾರಿತ ಇನ್ಸುಲಿನ್ ಸೂಕ್ಷ್ಮತೆಯೊಂದಿಗೆ ಸಂಬಂಧ ಹೊಂದಿದೆ. "ಮಧ್ಯ ವಯಸ್ಸಿನಲ್ಲಿ ಪ್ರೋಟೀನ್ ಸೇವನೆ, ವಿಶೇಷವಾಗಿ ಸಸ್ಯ ಪ್ರೋಟೀನ್ ಆರೋಗ್ಯಕರ ವೃದ್ಧಾಪ್ಯವನ್ನು ಉತ್ತೇಜಿಸುವಲ್ಲಿ ಮತ್ತು ವೃದ್ಧಾಪ್ಯದಲ್ಲಿ ಸಕಾರಾತ್ಮಕ ಆರೋಗ್ಯ ಸ್ಥಿತಿಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ" ಎಂದು ಕೊರಟ್ ಹೇಳಿದರು. (IANS)
ಇದನ್ನೂ ಓದಿ : ವೈದ್ಯರು ಆ್ಯಂಟಿಬಯೋಟಿಕ್ಸ್ ಶಿಫಾರಸು ಮಾಡುವಾಗ ಕಾರಣ ಬರೆಯುವುದು ಕಡ್ಡಾಯ: ಕೇಂದ್ರ ಸರ್ಕಾರ