ನವದೆಹಲಿ: ಗರ್ಭಕಂಠ ಕ್ಯಾನ್ಸರ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು 9 ರಿಂದ 14 ವರ್ಷದ ಬಾಲಕಿಯರಿಗೆ ಲಸಿಕೆ ನೀಡಲು ಪ್ರೋತ್ಸಾಹಿಸುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಮಧ್ಯಂತರ ಬಜೆಟ್ನಲ್ಲಿ ಮಂಡನೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಸಚಿವರು, ನಮ್ಮ ಸರ್ಕಾರ ಗರ್ಭಕಂಠ ಕ್ಯಾನ್ಸರ್ ತಡೆಯುವ ನಿಟ್ಟಿನಲ್ಲಿ ಲಸಿಕೆ ಕ್ರಮಕ್ಕೆ ಮುಂದಾಗಲಿದೆ. ತಾಯಿ ಮಕ್ಕಳ ಆರೈಕೆಗೆ ವಿವಿಧ ಯೋಜನೆಗಳನ್ನು ಒಂದು ಸಮಗ್ರ ಕಾರ್ಯಕ್ರಮದ ಅಡಿಯಲ್ಲಿ ತರಲಾಗುವುದು. ಸಕ್ಷಮ ಅಂಗನವಾಡಿ ಅಡಿ ಅಂಗನವಾಡಿ ಕೇಂದ್ರಗಳನ್ನು ಉನ್ನತೀಕರಿಸುವ ಮತ್ತು ಪೋಷಣ್ 2.0 ಮೂಲಕ ಮಕ್ಕಳ ಆರೈಕೆ ಮತ್ತು ಅಭಿವೃದ್ಧಿ ಸೇರಿದಂತೆ ಸುಧಾರಿತ ಪೌಷ್ಟಿಕಾಂಶ ವಿತರಣೆಗಾಗಿ ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದರು.
ಅನೇಕ ಯುವ ಜನರು ವೈದ್ಯರಾಗುವ ಮಹಾತ್ವಕಾಂಕ್ಷೆಯನ್ನು ಹೊಂದಿದ್ದಾರೆ. ಅವರ ಈ ಕನಸಿಗಾಗಿ ನಮ್ಮ ಸರ್ಕಾರವು ಪ್ರಸ್ತುತ ಇರುವ ಆಸ್ಪತ್ರೆಗಳ ಮೂಲಸೌಕರ್ಯವನ್ನು ಬಳಕೆ ಮಾಡಿಕೊಂಡು ಮತ್ತಷ್ಟು ಹೆಚ್ಚಿನ ವೈದ್ಯಕೀಯ ಕಾಲೇಜು ನಿರ್ಮಾಣದ ಯೋಜನೆ ಹೊಂದಿದೆ. ಇದಕ್ಕಾಗಿ ಒಂದು ಸಮಿತಿಯನ್ನು ರಚಿಸಲಾಗುವುದು. ಇದು ಅದಕ್ಕೆ ಪೂರಕವಾಗುವ ಅಂಶಗಳ ಮೇಲ್ವಿಚಾರಣೆ ನಡೆಸಿ ಶಿಫಾರಸುಗಳನ್ನು ನೀಡಲಿದೆ ಎಂದರು.
ಕ್ರಮಕ್ಕೆ ಮುಂದಾಗಿರುವ ಸರ್ಕಾರ: ಸರ್ಕಾರ ಹೆಣ್ಣು ಮಕ್ಕಳಲ್ಲಿ ಗರ್ಭಕಂಠ ಕ್ಯಾನ್ಸರ್ ತಡೆಯುವ ನಿಟ್ಟಿನಲ್ಲಿ 5 ರಿಂದ 10ನೇ ತರಗತಿರೊರಗಿನ ಹೆಣ್ಣು ಮಕ್ಕಳಿಗೆ ಲಸಿಕೆ ಕೊಡುವ ಕಾರ್ಯಕ್ರಮದ ಯೋಜನೆ ಹೊಂದಿದೆ. ಈ ಗರ್ಭಕಂಠ ಕ್ಯಾನ್ಸರ್ ತಡೆಯುವ ಹ್ಯೂಮನ್ ಪ್ಯಾಪಿಲೋಮಾ ವೈರಸ್ (ಎಚ್ಪಿವಿ) ಸೆರ್ವಾವಕ್ ಲಸಿಕೆಯು ಏಪ್ರಿಲ್ನಲ್ಲಿ ಮಾರುಕಟ್ಟೆಗೆ ಬರಲಿದೆ. ಸೆರಂ ಇನ್ಸುಟಿಟ್ಯೂಟ್ ಆಫ್ ಇಂಡಿಯಾ ಈ ಸ್ವದೇಶಿ ಎಚ್ಪಿವಿ ಲಸಿಕೆಯನ್ನು ತಯಾರಿಸಿದ್ದು, ಇದಕ್ಕೆ ಡಿಸಿಜಿಐ ಅನುಮೋದನೆ ಕೂಡ ದೊರೆತಿದೆ.
ಗರ್ಭಕಂಠ ಕ್ಯಾನ್ಸರ್ ಕುರಿತು ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಸಭೆ ನಡೆಸುವ ಮೂಲಕ ಪೋಷಕರು ಮತ್ತು ಶಿಕ್ಷಕರಲ್ಲಿ ಅರಿವು ಮೂಡಿಸಬೇಕು. ಈ ಕುರಿತು ಜಾಗೃತಿ ನಡೆಸಿ, ಶಾಲೆಗಳಲ್ಲಿ ಎಚ್ಪಿವಿ ಲಸಿಕೆ ಕೇಂದ್ರವನ್ನು ತೆರೆಯಲು ಕ್ರಮ ಕೈಗೊಳ್ಳಲು ಈಗಾಗಲೇ ಕೇಂದ್ರವು ಸೂಚಿಸಿದೆ.
ಏನಿದು ಗರ್ಭಕಂಠ ಕ್ಯಾನ್ಸರ್: ಜಗತ್ತಿನಲ್ಲಿ ಮಹಿಳೆಯರನ್ನು ಕಾಡುವ ಪ್ರಮುಖ ಕ್ಯಾನ್ಸರ್ನಲ್ಲಿ ಗರ್ಭಕಂಠ ಕ್ಯಾನ್ಸರ್ ನಾಲ್ಕನೇಯದ್ದಾಗಿದೆ. ಮಹಿಳೆಯರಲ್ಲಿ 35ರ ಬಳಿಕ ಕಾಡುವ ಈ ಕ್ಯಾನ್ಸರ್ನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡುವ ಮೂಲಕ ಶಮನ ಮಾಡಬಹುದಾಗಿದೆ. ಅಲ್ಲದೇ ಇದು ತಡೆಗಟ್ಟಬಹುದಾದ ಕ್ಯಾನ್ಸರ್ ಆಗಿದೆ. ಈ ಗರ್ಭಕಂಠ ಕ್ಯಾನ್ಸರ್ನಿಂದ ಪ್ರತಿ ವರ್ಷ ಜಗತ್ತಿನಾದ್ಯಂತ 80 ಸಾವಿರ ಮಹಿಳೆಯರ ಸಾವು ಸಂಭವಿಸುತ್ತಿದೆ. (ಐಎಎನ್ಎಸ್)
ಇದನ್ನೂ ಓದಿ: ಗರ್ಭಕಂಠ ಕ್ಯಾನ್ಸರ್ಗೆ ತುತ್ತಾದ ಮಿಸ್ ವರ್ಲ್ಡ್ ಅಭ್ಯರ್ಥಿ.. ಮಹಿಳೆಯರನ್ನು ಕಾಡುವ ಈ ಕ್ಯಾನ್ಸರ್ ಬಗ್ಗೆ ಅರಿವು ಅಗತ್ಯ