ಅಮೆರಿಕ: ಆನುವಂಶಿಕವಾಗಿ ಮಾರ್ಪಡಿಸಿದ ಹಂದಿ ಮೂತ್ರಪಿಂಡವನ್ನು ಕಸಿ ಮಾಡಿಸಿಕೊಂಡಿದ್ದ 62 ವರ್ಷದ ವ್ಯಕ್ತಿ, ಶಸ್ತ್ರಚಿಕಿತ್ಸೆ ನಡೆದು ಎರಡು ತಿಂಗಳ ಬಳಿಕ ಸಾವಿಗೀಡಾಗಿದ್ದಾರೆ. ಇದು ಕಿಡ್ನಿ ಸಮಸ್ಯೆಯಿಂದಲೇ ಸಂಭವಿಸಿದ ಸಾವು ಎಂಬುದನ್ನು ವೈದ್ಯರು ದೃಢಪಡಿಸಿಲ್ಲ. ಆದರೆ, ವೈದ್ಯಲೋಕದ ಹೊಸ ಪ್ರಯತ್ನಕ್ಕೆ ಆರಂಭದಲ್ಲೇ ಹಿನ್ನಡೆ ಉಂಟಾಗಿದೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅಮೆರಿಕದ ರಿಚರ್ಡ್ ರಿಕ್ ಸ್ಲೇಮನ್ ಎಂಬಾತನಿಗೆ ಮಾರ್ಚ್ನಲ್ಲಿ ಹಂದಿ ಮೂತ್ರಪಿಂಡವನ್ನು ಕಸಿ ಮಾಡಲಾಗಿತ್ತು. ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ತೋರಿಸಿದ್ದ ವ್ಯಕ್ತಿ ಕ್ರಮೇಣ ಚೇತರಿಸಿಕೊಳ್ಳುತ್ತಿದ್ದರು. ಆದರೆ, ಶನಿವಾರ ಅನಾರೋಗ್ಯದಿಂದ ಸಾವಿಗೀಡಾಗಿದ್ದಾಗಿ ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಮೆಸಾಚ್ಯುಸೆಟ್ಸ್ ಜನರಲ್ ಆಸ್ಪತ್ರೆಯ ವೈದ್ಯರ ತಂಡವು ಹೇಳಿಕೆ ಬಿಡುಗಡೆ ಮಾಡಿದ್ದು, ಸ್ಲೇಮನ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಹಂದಿ ಕಿಡ್ನಿ ಕಸಿಯ ಪರಿಣಾಮವಾಗಿ ಅವರು ನಿಧನರಾಗಿದ್ದಾರೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಹಂದಿಯ ಮೂತ್ರಪಿಂಡವು ಕನಿಷ್ಠ ಎರಡು ವರ್ಷಗಳವರೆಗೆ ಬಾಳಿಕೆ ಬರುತ್ತದೆ ಎಂದಿದ್ದಾರೆ.
ರಿಚರ್ಡ್ ರಿಕ್ ಸ್ಲೇಮನ್ ಅವರು ಹಂದಿ ಮೂತ್ರಪಿಂಡವನ್ನು ಕಸಿ ಮಾಡಿಸಿಕೊಂಡ ಮೊದಲ ಜೀವಂತ ವ್ಯಕ್ತಿಯಾಗಿದ್ದರು. ಇದಕ್ಕೂ ಮೊದಲು ಮೆದುಳು ನಿಷ್ಕ್ರಿಯವಾಗಿದ್ದ ವ್ಯಕ್ತಿಯಲ್ಲಿ ಹಂದಿ ಕಿಡ್ನಿಯನ್ನು ಕಸಿ ಮಾಡಲಾಗಿತ್ತು. ಬಳಿಕ ಇನ್ನಿಬ್ಬರಿಗೆ ಹಂದಿ ಹೃದಯವನ್ನು ಅಳವಡಿಸಲಾಗಿತ್ತು. ಆದರೆ, ಎಲ್ಲರೂ ತಿಂಗಳೊಳಗೆ ಮೃತಪಟ್ಟಿದ್ದರು.
ಏನಿದು ಪ್ರಾಣಿಗಳ ಅಂಗಾಂಗ ಕಸಿ ಪದ್ಧತಿ?: ಕ್ಸೆನೋಟ್ರಾನ್ಸ್ಪ್ಲಾಂಟೇಶನ್ (Xenotransplantation) ಎಂಬುದು ಪ್ರಾಣಿಗಳಿಂದ ಪಡೆದ ಜೀವಕೋಶಗಳು, ಅಂಗಾಂಶಗಳು ಅಥವಾ ಅಂಗಗಳನ್ನು ಮಾನವನ ದೇಹಕ್ಕೆ ಅಳವಡಿಸುವುದಾಗಿದೆ. ಇತ್ತೀಚಿನ ಯತ್ನಗಳಲ್ಲಿ ಇದು ವೈಫಲ್ಯ ಕಾಣುತ್ತಾ ಬಂದಿದೆ. ಮಾನವನ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪ್ರಾಣಿಗಳ ಅಂಗಾಂಶಗಳು ದಾಳಿ ಮಾಡುವುದರಿಂದ ಪ್ರಯತ್ನಗಳು ವಿಫಲವಾಗುತ್ತಿವೆ. ದೇಶದಲ್ಲಿ 1.75 ಲಕ್ಷಕ್ಕೂ ಅಧಿಕ ಜನರು ಕಿಡ್ನಿ ಕಸಿಗಾಗಿ ಕಾಯುತ್ತಿದ್ದಾರೆ. ಆದರೆ, ಅವರ ಸರದಿ ಬರುವ ಮುನ್ನವೇ ಸಾವಿಗೀಡಾಗುತ್ತಿರುವುದು ಖೇದಕರ ಸಂಗತಿ.
ಭಾರತದಲ್ಲೂ ನಡೆದಿತ್ತು ಹಂದಿ ಅಂಗಾಂಗ ಕಸಿ: ಅಮೆರಿಕದಲ್ಲಿ ಕಿಡ್ನಿ ಕಸಿಯಂತೆ, ಆ ಪ್ರಾಣಿಯ ಹೃದಯ, ಶ್ವಾಸಕೋಶ, ಮೂತ್ರಪಿಂಡವನ್ನು ಜೀವಂತ ಮಾನವನ ದೇಹಕ್ಕೆ ಭಾರತದ ವೈದ್ಯರೂ ಕಸಿ ಮಾಡಿದ್ದರು. ಆದರೆ, ಆ ಪ್ರಯತ್ನ ವೈಫಲ್ಯ ಕಂಡಿತ್ತು. 1997ರಲ್ಲಿ ಅಸ್ಸಾಂನ ಗುವಾಹಟಿಯ ವೈದ್ಯ ಧನಿರಾಮ್ ಬರುವಾ ಅವರು ಕ್ಸೆನೋಟ್ರಾನ್ಸ್ಪ್ಲಾಂಟೇಶನ್ ಮಾಡಿದ್ದರು. ಕಸಿ ಮಾಡಿಸಿಕೊಂಡ ವ್ಯಕ್ತಿ ಒಂದು ವಾರದಲ್ಲಿ ಸಾವಿಗೀಡಾಗಿದ್ದರು. ಪ್ರಕರಣದಲ್ಲಿ ಪೊಲೀಸರು ಇಬ್ಬರು ವೈದ್ಯರನ್ನು ಬಂಧಿಸಿದ್ದು ಅವರು 40 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು.
ಇದನ್ನೂ ಓದಿ: ಹೆಚ್ಚುತ್ತಿರುವ ಮೂತ್ರಪಿಂಡ ಕಲ್ಲಿನ ಸಮಸ್ಯೆ; ಈ ಬಗ್ಗೆ ಜನರಲ್ಲಿ ಬೇಕಿದೆ ಸಾಮಾನ್ಯ ಅರಿವು - Rising Cases Of Kidney Stones