ನವದೆಹಲಿ : ಮಧುಮೇಹವು ಗರ್ಭಾಶಯದ ಫೈಬ್ರಾಯ್ಡ್‌ಗಳ ಬೆಳವಣಿಗೆಯ ಅಪಾಯಕ್ಕೆ ಸಂಬಂಧಿಸಿದೆ. ಆದರೆ ಇದು ಸಂಪೂರ್ಣವಾಗಿ ಸಾಬೀತಾಗಿಲ್ಲ ಎಂದು ತಜ್ಞರು ಭಾನುವಾರ ಹೇಳಿದ್ದಾರೆ. ಗರ್ಭಾಶಯದ ಫೈಬ್ರಾಯ್ಡ್‌ಗಳು ಗರ್ಭಾಶಯದ ಗೆಡ್ಡೆಗಳಾಗಿವೆ. ಇವು ಹೆರಿಗೆಯ ಸಮಯದಲ್ಲಿ ಮಹಿಳೆಯರಲ್ಲಿ ಆಗಾಗ ಕಾಣಿಸಿಕೊಳ್ಳುತ್ತವೆ ಎಂದಿದ್ದಾರೆ.
ದೇಶದ ಯುವತಿಯರಲ್ಲಿ ಗರ್ಭಾಶಯದ ಫೈಬ್ರಾಯ್ಡ್‌ಗಳು ಹೆಚ್ಚುತ್ತಿರುವ ಬಗ್ಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದಾಗ್ಯೂ, ಜೀವನಶೈಲಿ ಹಾಗೂ ಬೊಜ್ಜು, ಅನುವಂಶೀಯತೆಯಿಂದ ಇವು ಮಹಿಳೆಯರಲ್ಲಿ ಕಂಡುಬರುತ್ತಿವೆ ಎಂದಿದ್ದಾರೆ.
"ಮಧುಮೇಹವು ಗರ್ಭಾಶಯದ ಫೈಬ್ರಾಯ್ಡ್‌ಗಳಿಗೆ ಸಂಬಂಧಿಸಿದೆ ಎಂಬುದು ಸಾಬೀತಾಗಿಲ್ಲ. ಆದರೆ ಇದು ಸಂಕೀರ್ಣವಾಗಿದೆ ಮತ್ತು ಈ ಕುರಿತು ಇನ್ನೂ ಅಧ್ಯಯನ ನಡೆಯುತ್ತಿದೆ " ಎಂದು ಗುರುಗ್ರಾಮ್‌ನ ಕ್ಲೌಡ್‌ನೈನ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ನಿರ್ದೇಶಕಿ ಡಾ. ಚೇತನಾ ಜೈನ್ ತಿಳಿಸಿದ್ದಾರೆ.
"ಇನ್ಸುಲಿನ್ ಪ್ರತಿರೋಧ, ಸ್ಥೂಲಕಾಯತೆ ಮತ್ತು ದೀರ್ಘಕಾಲದ ಉರಿಯೂತದಂತಹ ಮಧುಮೇಹಕ್ಕೆ ಸಂಬಂಧಿಸಿದ ಅಂಶಗಳು ಫೈಬ್ರಾಯ್ಡ್‌ಗಳ ಬೆಳವಣಿಗೆಗೆ ಕಾರಣವಾಗಬಹುದು ಎಂದು ಸೂಚಿಸುವ ಪುರಾವೆಗಳಿವೆ. ಆದಾಗ್ಯೂ, ಈ ಕುರಿತು ನಿಖರವಾದ ಕಾರ್ಯವಿಧಾನಗಳನ್ನು ಅರ್ಥಮಾಡಿಕೊಳ್ಳಲಾಗಿಲ್ಲ ಮತ್ತು ಇದನ್ನು ಸ್ಪಷ್ಟಪಡಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ”ಎಂದು ವೈದ್ಯರು ಹೇಳಿದ್ದಾರೆ.
ಶೇಕಡಾ 20 ರಿಂದ 80 ರಷ್ಟು ಮಹಿಳೆಯರು ತಮ್ಮ 50 ವರ್ಷ ವಯಸ್ಸಿನೊಳಗೆ ಗರ್ಭಾಶಯದ ಫೈಬ್ರಾಯ್ಡ್‌ಗಳ ಸಮಸ್ಯೆಯನ್ನು ಹೆಚ್ಚು ಹೊಂದಿರುತ್ತಾರೆ ಎಂದು ಅಧ್ಯಯನಗಳು ಸಾಬೀತುಪಡಿಸಿವೆ. ಫೈಬ್ರಾಯ್ಡ್‌ಗಳು 40 ಮತ್ತು 50 ರ ವಯಸ್ಸಿನ ಆರಂಭದಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತವೆ ಎಂದಿದ್ದಾರೆ.
ಕೆಲವು ಅಧ್ಯಯನಗಳು ಮಧುಮೇಹ ಹೊಂದಿರುವ ಮಹಿಳೆಯರಲ್ಲಿ ಗರ್ಭಾಶಯದ ಫೈಬ್ರಾಯ್ಡ್‌ಗಳ ಹೆಚ್ಚಿನ ಪ್ರಾಬಲ್ಯವನ್ನು ತೋರಿಸಿದರೆ, ವಯಸ್ಸು ಮತ್ತು ಒಟ್ಟಾರೆ ಚಯಾಪಚಯ ಆರೋಗ್ಯದಂತಹ ಇತರ ಅಂಶಗಳು ಫೈಬ್ರಾಯ್ಡ್ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಮಧುಮೇಹದೊಂದಿಗೆ ಮುಟ್ಟಿನ ನೋವು ಮತ್ತು ಕೆಲವೊಮ್ಮೆ ಫೈಬ್ರಾಯ್ಡ್‌ಗಳಿಂದ ಬಂಜೆತನದಂತಹ ಅನೇಕ ಸಮಸ್ಯೆಗಳು ಉಲ್ಬಣಗೊಳ್ಳಬಹುದು ಎಂದು ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಮಧುಮೇಹವು ಗರ್ಭಾಶಯದ ಫೈಬ್ರಾಯ್ಡ್ ಹೆಚ್ಚಳಕ್ಕೆ ಸಂಬಂಧಿಸಿದೆ ಎಂಬುದು ಕಂಡುಬಂದರೂ, ನೇರವಾಗಿ ಗರ್ಭಾಶಯದ ಫೈಬ್ರಾಯ್ಡ್‌ಗಳನ್ನು ಹೆಚ್ಚಿಸುತ್ತದೆ ಎಂಬುದು ಇನ್ನೂ ನಿರ್ಣಾಯಕವಾಗಿಲ್ಲ. ಎರಡೂ ಪರಿಸ್ಥಿತಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಹಾರ್ಮೋನುಗಳ, ಚಯಾಪಚಯ ಮತ್ತು ಉರಿಯೂತದ ಪ್ರಕ್ರಿಯೆಗಳ ಸಂಯೋಜನೆಯಿಂದಾಗಿ ಇವು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಡಾ ಜೈನ್ ಮಾಹಿತಿ ನೀಡಿದ್ದಾರೆ.
ಆರ್ಟೆಮಿಸ್ ಆಸ್ಪತ್ರೆಗಳ ಎಂಡೋಕ್ರೈನಾಲಜಿ ಮುಖ್ಯಸ್ಥ ಡಾ. ಧೀರಜ್ ಕಪೂರ್ ಅವರು ಗರ್ಭಾಶಯದ ಫೈಬ್ರಾಯ್ಡ್‌ಗಳು ಗರ್ಭಾಶಯದಲ್ಲಿ ಕ್ಯಾನ್ಸರ್ ರಹಿತ ಬೆಳವಣಿಗೆಗಳಾಗಿವೆ ಎಂದು ತಿಳಿಸಿದ್ದಾರೆ.
"ಮಧುಮೇಹ ಮತ್ತು ಗರ್ಭಾಶಯದ ಫೈಬ್ರಾಯ್ಡ್‌ಗಳ ಬೆಳವಣಿಗೆಯ ನಡುವಿನ ಸಂಬಂಧವು ಇನ್ಸುಲಿನ್ ಪ್ರತಿರೋಧದ ಕಾರಣದಿಂದಾಗಿರಬಹುದು. ಇದು ಮಧುಮೇಹದ ಸಾಮಾನ್ಯ ಲಕ್ಷಣವಾಗಿದೆ. ಇದು ಹೆಚ್ಚಿನ ಮಟ್ಟದ ಇನ್ಸುಲಿನ್ ಮತ್ತು ಇನ್ಸುಲಿನ್ ತರಹದ ಬೆಳವಣಿಗೆಯ ಅಂಶಗಳಿಗೆ ಕಾರಣವಾಗಬಹುದು. ಈ ಅಂಶಗಳು ಫೈಬ್ರಾಯ್ಡ್‌ಗಳ ಬೆಳವಣಿಗೆ ಸೇರಿದಂತೆ ಜೀವಕೋಶದ ಬೆಳವಣಿಗೆಯನ್ನು ಉತ್ತೇಜಿಸುತ್ತವೆ ”ಎಂದು ಅವರು ತಿಳಿಸಿದರು.
ಆಹಾರ, ವ್ಯಾಯಾಮ ಮತ್ತು ಔಷಧಿಗಳ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವುದು ಮಧುಮೇಹದಿಂದ ಬಳಲುತ್ತಿರುವ ಜನರಲ್ಲಿ ಫೈಬ್ರಾಯ್ಡ್‌ಗಳ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ವಿವರಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ : ಮನೆ ಮದ್ದಿನಲ್ಲಿ ಯಕೃತ್ ಶುದ್ಧೀಕರಣ ಅವೈಜ್ಞಾನಿಕ: IMA - Liver Detoxification