ಲಖನೌ: ಸಾಮಾನ್ಯವಾಗಿ ಸುಟ್ಟ ಗಾಯಗಳಿಗೆ ತಕ್ಷಣಕ್ಕೆ ಐಸ್ ಅಥವಾ ಟೂತ್ಫೇಸ್ಟ್ ಹಚ್ಚುವ ಬದಲಾಗಿ ಅದರ ನೀರು ಹಾಕುವುದು ಉತ್ತಮ ಎಂದು ಕೆಜಿಎಂಯು ತಜ್ಞರು ತಿಳಿಸಿದ್ದಾರೆ. ಸುಟ್ಟ ಗಾಯ ಆದ ಸಂದರ್ಭದಲ್ಲಿ ಅದರ ಮೇಲೆ ನೀರು ಹಾಕುವುದು ಉತ್ತಮ ಎಂದು ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ (ಕೆಜಿಎಂಯು) ಸೊಸೈಟಿ ಫಾರ್ ವುಂಡ್ ಕೇರ್ ಅಂಡ್ ರಿಸರ್ಚ್ ನಡೆಸುತ್ತಿರುವ ವೂಂಡ್‌ಕಾನ್ 2024 ನಲ್ಲಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಹದಲ್ಲಿ ಸುಟ್ಟ ಗಾಯ ಆದ ಸಂದರ್ಭದಲ್ಲಿ ಅದರ ಮೇಲೆ ಐಸ್ ಇಡುವುದು ಅಥವಾ ಟೂತ್ಪೇಸ್ಟ್, ಎಣ್ಣೆ ಹಚ್ಚುವುದು ಸಾಮಾನ್ಯ ಪರಿಹಾರವಾದರೂ ಇವು ಹಾನಿಯನ್ನುಂಟು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಗಾಯವಾದ ಪ್ರದೇಶದ ಮೇಲೆ ನೀರು ಹಾಕುವುದು ಉತ್ತಮ ಎಂದು ಕೆಜಿಎಂಯುನ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಪ್ರೊ ಬ್ರಿಜೇಶ್ ಮಿಶ್ರಾ ತಿಳಿಸಿದ್ದಾರೆ.
ಐಸ್ ಸುಟ್ಟಗಾಯದ ಸಂದರ್ಭದಲ್ಲಿ ಆಗುವ ಉರಿಯನ್ನು ಉಪಶಮನ ಮಾಡಿದರೂ ಅದು ಚರ್ಮವನ್ನು ಹೆಪ್ಪುಗಟ್ಟುವಂತೆ ಮಾಡಿ, ರಕ್ತದ ಹರಿವನ್ನು ತಡೆಯುತ್ತದೆ. ಜೊತೆಗೆ ಟೂತ್ಪೇಸ್ಟ್ನಲ್ಲಿ ಕೂಡ ಕ್ಯಾಲ್ಸಿಯಂ ಮತ್ತು ಪುದೀನಾದಂತಹ ಪದಾರ್ಥಗಳು ಉತ್ತಮವಲ್ಲ. ಜೊತೆಗೆ ಇದು ಮತ್ತಷ್ಟು ಹಾನಿಯನ್ನು ಉಂಟು ಮಾಡಿ ತಣ್ಣಗೆ ಆಗಲು ಕಷ್ಟವಾಗುವುದರ ಜೊತೆಗೆ ಸೋಂಕಿನ ಅಪಾಯ ಹೆಚ್ಚಿಸುತ್ತದೆ ಎಂದಿದ್ದಾರೆ.
ಸುಟ್ಟ ಗಾಯ ಆದ ತಕ್ಷಣ ಹರಿಯುವ ನೀರಿನ ಅಡಿ ಗಾಯವಾದ ಪ್ರದೇಶವನ್ನು ತೊಳೆಯುವುದು ಅತ್ಯಗತ್ಯ. ಇದಾದ ಬಳಿಕ ಲೆನಿನ್ ಬಟ್ಟೆಗಳಿಂದ ಮುಚ್ಚಬೇಕು. ತೀವ್ರತರಹದ ಸುಟ್ಟುಗಾಯದ ಸಂದರ್ಭದಲ್ಲಿ ತಕ್ಷಣಕ್ಕೆ ವೈದ್ಯಕೀಯ ಸಹಾಯವನ್ನು ಪಡೆಯಬೇಕು. ಹಾನಿಗೊಳಗಾದ ಚರ್ಮ, ಸ್ನಾಯುಗಳು ಮತ್ತು ಅಂಗಾಂಶಗಳನ್ನು ಗುಣಪಡಿಸಲು ಹೈಡ್ರೇಷನ್ ಮತ್ತು ಪ್ರೋಟೀನ್ ಸೇವನೆಯನ್ನು ಹೆಚ್ಚಿಸುವುದು ನಿರ್ಣಾಯಕವಾಗಿದೆ. ವಿದ್ಯುತ್ನಿಂದ ಆದ ಸುಟ್ಟಗಾಯದ ಸಂದರ್ಭದಲ್ಲಿ ಸ್ಟೆರಿಲ್ ಬ್ಯಾಂಡೇಜ್ ಅಥವಾ ಶುಚಿಯಾದ ಬಟ್ಟೆಯನ್ನು ಸುತ್ತಬೇಕು. ಸುಟ್ಟ ಚರ್ಮದ ಪ್ರದೇಶದಲ್ಲಿ ಕಂಬಳಿ ಅಥವಾ ಟವೆಲ್ ಹೊದಿಕೆ ಮಾಡಬೇಡಿ ಎಂದು ಕೆಜಿಎಂಯುನ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ ವಿಜಯ್ ವರ್ಮಾ ಸಲಹೆ ನೀಡಿದ್ದಾರೆ.
ಸುಟ್ಟ ಗಾಯಗಳನ್ನು ಗುಣಮುಖವಾಗಿಸುವಲ್ಲಿ ಮೀನಿನ ಚರ್ಮದ ಉತ್ಪನ್ನಗಳು ಪರಿಣಾಮಕಾರಿಯಾಗಿವೆ. ಒಮೆಗಾ ಕೊಬ್ಬು ಮತ್ತು ಫ್ಯಾಟಿ ಕಾಲಜನ್ ಆಮ್ಲಗಳಿರುವ ಮೀನಿನ ಚರ್ಮದ ಉತ್ಪನ್ನಗಳು ಶುದ್ದೀಕರಿಸಿದ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವುಗಳನ್ನು ಹಚ್ಚುವ ಮೂಲಕ ಪರಿಣಾಮಕಾರಿ ಚಿಕಿತ್ಸೆ ನೀಡಬಹುದಾಗಿದೆ ಎಂದು ಪ್ಲಾಸ್ಟಿಕ್ ಸರ್ಜನ್ ಡಾ ಕೆಎಸ್ ಮೂರ್ತಿ ತಿಳಿಸಿದರು.
ಇದನ್ನೂ ಓದಿ: ದಿನವೂ ತುಪ್ಪ ತಿನ್ನುವುದರ ಪ್ರಯೋಜನ ನಿಮಗೆ ಗೊತ್ತಾ?: ಯಾಕಾಗಿ ತುಪ್ಪ ತಿನಬೇಕು ಅಂತಾ ಇಲ್ಲಿ ತಿಳಿಯಿರಿ!