ಜೋಧಪುರ: ರಾಜಸ್ಥಾನ ರಾಜ್ಯದ ಜೋಧಪುರದ ಉಮೈದ್ ಆಸ್ಪತ್ರೆಯಲ್ಲಿ ಅವಧಿಪೂರ್ವ ಶಿಶುಗಳಿಗೆ ಹೊಸ ಜೀವ ನೀಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇದೆ. ಇಲ್ಲಿ ಮೊದಲ ಬಾರಿಗೆ ಕೇವಲ 500 ಗ್ರಾಂ ತೂಕವಿದ್ದ ಶಿಶುವಿನ ಜೀವ ಉಳಿಸುವಲ್ಲಿ ಯಶಸ್ಸು ಸಾಧಿಸಲಾಗಿದೆ. ಹುಟ್ಟಿದ ದಿನದಿಂದ ನಿರಂತರವಾಗಿ 83 ದಿನಗಳ ಕಾಲ ಅದನ್ನು ಇಂಟೆನ್ಸಿವ್ ಕೇರ್ನಲ್ಲಿಟ್ಟು ಚಿಕಿತ್ಸೆ ನೀಡಿ, ಆರೈಕೆ ಮಾಡಲಾಗಿದೆ. 83 ದಿನಗಳ ಬಳಿಕ ಅಂದರೆ ಗುರುವಾರ ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಆಸ್ಪತ್ರೆಯ ಅಧೀಕ್ಷಕ ಡಾ.ಅಫ್ಜಲ್ ಹಕೀಂ, ಮಗುವಿನ ಆರೈಕೆ ಮಾಡಿ ಅದಕ್ಕೆ ಚೈತನ್ಯ ನೀಡಿದ ಮಕ್ಕಳ ವಿಭಾಗದ ತಂಡವನ್ನು ಅಭಿನಂದಿಸಿದ್ದಾರೆ. ಇನ್ನೂ ವಿಶೇಷ ಎಂದರೆ ಈ ಮಗುವಿನ ಆರೈಕೆಯನ್ನ ಮತ್ತು ಚಿಕಿತ್ಸೆಯನ್ನು ಸಂಪೂರ್ಣವಾಗಿ ಉಚಿತವಾಗಿ ಮಾಡಲಾಗಿದೆ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ರಂಜನಾ ದೇಸಾಯಿ ಮತ್ತು ಉಮೈದ್ ಆಸ್ಪತ್ರೆಯ ಅಧೀಕ್ಷಕ ಡಾ.ಅಫ್ಜಲ್ ಹಕೀಮ್ ಮತ್ತು ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಮನೀಷ್ ಪರಾಖ್ ಅವರು ಮಗುವನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದರು.
ಮಗುವಿನ ಮೇಲೆ ನಿತ್ಯ ನಿಗಾ: ’’ಈ ಹಿಂದೆ 600 ಮತ್ತು 750 ಗ್ರಾಂ ತೂಕದ ಮಕ್ಕಳಿಗೆ ಚಿಕಿತ್ಸೆ ನೀಡಿ, ಅವುಗಳನ್ನು ಆರೋಗ್ಯಯುತವನ್ನಾಗಿ ಮಾಡಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತಿತ್ತು. ಆದರೆ, 500 ಗ್ರಾಂ ತೂಕದ 26 ವಾರಗಳ ಮಗುವಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿ, ಸಂಪೂರ್ಣ ಸದೃಢವಾಗಿ ಮನೆಗೆ ಕಳುಹಿಸುತ್ತಿರುವುದು ಸಂತಸ ತಂದಿದೆ‘‘ ಎಂದು ಆಸ್ಪತ್ರೆಯ ಘಟಕ ಪ್ರಭಾರಿ ಡಾ.ಜೆ.ಪಿ.ಸೋನಿ ಹೇಳಿದ್ದಾರೆ. ಇಷ್ಟೊಂದು ಕಡಿಮೆ ತೂಕ ಹೊಂದಿರುವ ಹೆಚ್ಚಿನ ನವಜಾತ ಶಿಶುಗಳು ಬದುಕುಳಿಯುವುದಿಲ್ಲ. ಆದರೆ ಇದಕ್ಕಾಗಿ ನಮ್ಮ ವೈದ್ಯರು ಶ್ರಮಿಸಿದ್ದಾರೆ. ಮಗುವನ್ನು ಪ್ರತಿದಿನ ಮೇಲ್ವಿಚಾರಣೆ ಮಾಡಿದ್ದಾರೆ. ಯಾವುದೇ ಸಮಸ್ಯೆ ಇದೆಯೇ ಎಂದು ಖಚಿತಪಡಿಸಿಕೊಳ್ಳಲು ಅವನ ಮೆದುಳಿನ ನಿರಂತರ ಸೋನೋಗ್ರಫಿ ಮಾಡಲಾಗಿದೆ. ರೆಟಿನಾ ಮತ್ತು ಶ್ರವಣ ಪರೀಕ್ಷೆಯನ್ನು ಆಗಾಗ ಮಾಡಿ ನಿಗಾ ಇಡಲಾಗಿತ್ತು. ಇನ್ನು ಮಗುವಿಗೆ ತಾಯಿ ಹಾಲು ಮಾತ್ರ ನೀಡಲಾಗುತ್ತಿತ್ತು. ಹುಟ್ಟಿದ 55 ದಿನಗಳಲ್ಲಿ ಅವನ ತೂಕ ಒಂದು ಕೆ.ಜಿ. ಮಾತ್ರವೇ ಇತ್ತು. ಆದರೆ 84ನೇ ದಿನ ಆ ಮಗುವಿನ ತೂಕವು 1 ಕೆಜಿ 600 ಗ್ರಾಂ ಆಗಿದೆ. ಒಬ್ಬ ಆರೋಗ್ಯವಂತ ಮಗುವಿನ ತೂಕ 2.5 ಕೇಜಿಗಿಂತ ಅಧಿಕವಾಗಿರಬೇಕು
ಎಲ್ಲ ವೈದ್ಯರ ಶ್ರಮದಿಂದ ಮಗು ಚೇತರಿಸಿಕೊಂಡಿದೆ: ಪಾವ್ಟಾ ನಿವಾಸಿ ರೌನಕ್ ಕಂಕರಿಯಾ ಅವರ ಪತ್ನಿ ಕೃಷ್ಣ ಅವರು ಡಿಸೆಂಬರ್ 14, 2023 ರಂದು ಉಮೈದ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದರು. ಆದರೆ ಆ ಮಗು ಕೇವಲ 500 ಗ್ರಾಂ ತೂಕವಿತ್ತು. ಹೀಗಾಗಿ ಅದೇ ದಿನ ಮಗುವನ್ನು NICU ಗೆ ದಾಖಲಿಸಲಾಯಿತು. ಮೊದಲ ದಿನವೇ ಉಸಿರಾಟಕ್ಕೆ ತೊಂದರೆಯಾದ ಕಾರಣ, ಮಗುವಿಗೆ ಮೂಗಿನ ಪ್ರಾಂಗ್ ಮೂಲಕ ಆಮ್ಲಜನಕ ಒದಗಿಸಲಾಯಿತು.ಇನ್ಕ್ಯುಬೇಟರ್ನಲ್ಲಿ ಇರಿಸಲಾಯಿತು. ಪ್ರತಿಜೀವಕಗಳನ್ನು ಮಗುವಿಗೆ ನೀಡಲಾಯಿತು. ಮೂರನೇ ದಿನದಿಂದ ಮಗುವಿಗೆ ಟ್ಯೂಬ್ ಮೂಲಕ ಹಾಲು ಕೊಡಲು ಆರಂಭಿಸಲಾಯಿತು. 15 ದಿನಗಳ ನಂತರ ಪ್ರತಿಜೀವಕಗಳನ್ನು ನಿಲ್ಲಿಸಲಾಯಿತು. ವೈದ್ಯರು ಮತ್ತು ಸಿಬ್ಬಂದಿ ಶ್ರಮಿಸಿದ್ದರಿಂದ ಮಗ ಚೇತರಿಸಿಕೊಂಡಿದ್ದಾನೆ ಎಂದು ಕೃಷ್ಣ ಹೇಳಿದರು. ಅವನಿಗೆ ಹೊಸ ಜೀವನ ಸಿಕ್ಕಿದೆ.
ಇದನ್ನು ಓದಿ:ಹೊಟ್ಟೆಯ ಒಳಾಂಗದ ಕೊಬ್ಬು ಆರೋಗ್ಯದ ಮೇಲೆ ಬೀರಲಿದೆ ಭಾರೀ ಪರಿಣಾಮ