ಮೈಸೂರು: ಬೇಸಿಗೆಯಲ್ಲಿ ಜನರು ಹೆಚ್ಚಾಗಿ ನೀರನ್ನು ಕುಡಿಯಬೇಕು. ಹೆಚ್ಚು ಹಣ್ಣುಗಳನ್ನು ಸೇವಿಸಬೇಕು. ಅತಿ ತಣ್ಣಗಿನ ಪದಾರ್ಥಗಳನ್ನು ಸೇವಿಸಬಾರದು. ಜೊತೆಗೆ ಬೇಸಿಗೆಗೆ ಇರುವ ಆಹಾರ ಪದ್ಧತಿಯನ್ನು ಅನುಸರಿಸಬೇಕು ಎಂದು ಶ್ವಾಸಕೋಶ ತಜ್ಞ ಡಾ. ಲಕ್ಷ್ಮಿ ನರಸಿಂಹನ್ ಈಟಿವಿ ಭಾರತ ಸಂದರ್ಶನದಲ್ಲಿ ವಿವರಿಸಿದ್ದಾರೆ. ಇದರ ಜೊತೆಗೆ ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿರುವ ಎಚ್1ಎನ್1 ಸೋಂಕು ಹಾಗೂ ಕೋವಿಡ್ ಬಂದ ನಂತರ ಮಧ್ಯ ವಯಸ್ಕರಲ್ಲಿ ಕಂಡುಬರುತ್ತಿರುವ ಹೃದಯಸಂಬಂಧಿ ಕಾಯಿಲೆಗಳಿಗೆ ಕಾರಣಗಳ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
"ಎಚ್1ಎನ್1 ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದು ಹಳೆಯ ವೈರಸ್. ಸುಮಾರು 100 ವರ್ಷಗಳಿಂದ ಇದೆ. 1918ರಲ್ಲಿ ಸ್ಪ್ಯಾನಿಷ್ನಲ್ಲಿ ಕಂಡುಬಂತು. ಪ್ರತಿ ವರ್ಷ ಕೆಲವೊಂದಷ್ಟು ಕೇಸ್ಗಳು ಬಂದು ಹೋಗುತ್ತಿದ್ದವು. 14-15 ವರ್ಷಗಳ ಹಿಂದೆ ಕೋವಿಡ್ಗಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಬಂದಿತ್ತು. ಋತುಗಳು ಬದಲಾದಾಗ ಚಳಿಗಾಲ, ಮಳೆಗಾಲ ಬೇಸಿಗೆಕಾಲ ಶುರುವಾಗುವ ಸಮಯದಲ್ಲಿ ಕೆಲವೊಂದು ಎಚ್1ಎನ್1 ಪ್ರಕರಣಗಳು ಕಂಡುಬರುತ್ತವೆ" ಎಂದು ಡಾ. ನರಸಿಂಹನ್ ತಿಳಿಸಿದರು.
ಎಚ್1ಎನ್1 ಹೆಚ್ಚಾಗಿ ಯಾರಲ್ಲಿ ಕಂಡು ಬರುತ್ತದೆ?: "ಹೆಚ್ಚಾಗಿ ಇದು ಹಿರಿಯ ನಾಗರಿಕರು, ಶುಗರ್, ಬಿಪಿ, ಹೃದ್ರೋಗ ಇರುವವರಿಗೆ, ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ ಇರುವವರಿಗೆ ಅಥವಾ ತೀರ ಚಿಕ್ಕ ಮಕ್ಕಳಿಗೆ ಇದರ ಪ್ರಭಾವ ಜಾಸ್ತಿ ಇರುತ್ತದೆ. ಇದನ್ನು ತಡೆಗಟ್ಟಲು ಫ್ಲೂ ವ್ಯಾಕ್ಸಿನ್ ಎನ್ನುವ ಲಸಿಕೆ ಇದೆ. ಇದು ಗವರ್ನಮೆಂಟ್ ಮತ್ತು ಪ್ರೈವೇಟ್ ಆಸ್ಪತ್ರೆಗಳಲ್ಲಿ ಎಲ್ಲಾ ಕಡೆ ಲಭ್ಯವಿದೆ. ಈ ಲಸಿಕೆಯನ್ನು ಖಂಡಿತವಾಗಿ ಹಾಕಿಸಿಕೊಳ್ಳಬೇಕು. ಮನೆಯಲ್ಲಿ ಯಾರಾದರೂ ವಯಸ್ಸಾದವರು ಇದ್ದರೆ ಅಥವಾ ಶುಗರ್, ಬಿಪಿ ಇರುವವರು ಇದ್ದರೆ, ಅವರಿಗೂ ಲಸಿಕೆ ಹಾಕಿಸಬೇಕು" ಎಂದು ತಿಳಿಸಿದರು.
ಹೇಗೆ ಹರಡುತ್ತದೆ?: "ಇದು ಗಾಳಿ ಮೂಲಕ ಹರಡುವ ರೋಗವಾಗಿದ್ದು, ಯಾರಾದರೂ ಕೆಮ್ಮಿದರೆ ಅಥವಾ ಸೀನಿದರೆ ಅವರ ದೇಹದಿಂದ ವೈರಾಣುಗಳು ಬೇರೆಯವರ ದೇಹಕ್ಕೆ ಸೇರುತ್ತವೆ. ನಾವು ಉಸಿರಾಡುವ ಗಾಳಿಯ ಮೂಲಕ ಲಂಗ್ಸ್ (ಶ್ವಾಸಕೋಶ)ಗೆ ಪ್ರವೇಶಿಸಿ ಕೆಲವೇ ದೇಹಗಳಲ್ಲಿ ನ್ಯುಮೋನಿಯಾ ಎಂಬುದನ್ನು ಉಂಟುಮಾಡುತ್ತದೆ. ಇನ್ನೂ ಕೆಲವರ ದೇಹದಲ್ಲಿ ಕೆಮ್ಮು, ನೆಗಡಿ ಆಗಿ ವಾಸಿಯಾಗುತ್ತದೆ."
ಬೇಸಿಗೆಯಲ್ಲಿ ಯಾವ ರೀತಿ ಆಹಾರಪದ್ಧತಿ ಅನುಸರಿಸಬೇಕು? ರೋಗ ನಿಯಂತ್ರಣ ಹೇಗೆ? ಮುಂಜಾಗ್ರತಾ ಕ್ರಮಗಳೇನು ?:
"ಇದಕ್ಕೆ ಕೋವಿಡ್ನ ಲಿಂಕ್ ಇದೆ ಅಂತಲೇ ಹೇಳುತ್ತಿದ್ದಾರೆ. ಕೋವಿಡ್ ಬಂದು ಹೋದ ಕೆಲವು ವರ್ಷಗಳ ಬಳಿಕ ಅವರ ಹೃದಯದಲ್ಲಿ ಕೆಲವು ತೊಂದರೆಗಳು ಉಂಟಾಗುತ್ತವೆ. ಸಡನ್ ಆಗಿ ಮಧ್ಯ ವಯಸ್ಸಿನಲ್ಲಿ ನಿಧನರಾಗುವುದು ಈ ವೈರಸ್ನ ದೀರ್ಘಾವಧಿಯ ಪರಿಣಾಮವಾಗಿದೆ. ಅದನ್ನು ಕಡಿಮೆ ಮಾಡಲು ವಿಶೇಷ ಚಿಕಿತ್ಸೆ ಏನು ಇಲ್ಲ. ಮನುಷ್ಯ ಉತ್ತಮ ಜೀವನ ಪದ್ಧತಿ ಮತ್ತು ಆಹಾರ ಪದ್ಧತಿಯನ್ನು ಅಳವಡಿಸಿಕೊಂಡು ಬಂದರೆ ಕಡಿಮೆಯಾಗುತ್ತದೆ, ನಿವಾರಣೆ ಆಗುತ್ತದೆ. ಸಾಮಾನ್ಯವಾಗಿ ಹೃದ್ರೋಗ ಮತ್ತು ಹೃದಯಾಘಾತದ ಲಕ್ಷಣ ಕಂಡುಬಂದರೆ ಕೂಡಲೇ ಡಾಕ್ಟರ್ ಬಳಿ ಸರಿಯಾದ ಚಿಕಿತ್ಸೆ ಪಡೆಯಬೇಕು. ಭಯ ಪಡುವಂತದ್ದು ಏನಿಲ್ಲ. ಈ ವೈರಸ್ಗೆ ಮುಂಜಾಗ್ರತಾ ಕ್ರಮಗಳನ್ನು ಮತ್ತು ಸರಿಯಾದ ರೀತಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಅದಕ್ಕೆ ಹೆಚ್ಚಾಗಿ ನೀರು ಕುಡಿಯುತ್ತಿರಬೇಕು. ಹಣ್ಣುಗಳನ್ನು ಸೇವಿಸಬೇಕು, ತುಂಬಾ ತಣ್ಣಗಿನ ಪದಾರ್ಥಗಳನ್ನು ಸೇವಿಸಬಾರದು. ಜೊತೆಗೆ ಬೇಸಿಗೆಯ ಆಹಾರ ಪದ್ಧತಿಯನ್ನು ಅನುಸರಿಸಬೇಕು. ಹೀಗೆ ಮಾಡಿದರೆ ಈ ವೈರಾಣುವನ್ನು ನಿಯಂತ್ರಣ ಮಾಡಬಹುದು" ಎಂದು ವಿವರಿಸಿದರು.
ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಹೊಟ್ಟೆ ಜ್ವರ ಪ್ರಕರಣ: ಈ ಲಕ್ಷಣ ಕಂಡರೆ ಬೇಡ ನಿರ್ಲಕ್ಷ್ಯ