ನವದೆಹಲಿ: ಯೋಗರ್ಟ್ನ ನಿಯಮಿತ ಸೇವನೆಯಿಂದ ಮಧುಮೇಹದ ಅಪಾಯ ಮತ್ತು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಬಹುದು ಎಂದು ವೈದ್ಯರು ಭಾನುವಾರ ಹೇಳಿದ್ದಾರೆ. ಯೋಗರ್ಟ್ ಮಧುಮೇಹದ ಅಪಾಯವನ್ನು ನಿಗ್ರಹಿಸುತ್ತದೆ ಎಂಬುದು ಬಹಳ ಹಿಂದಿನಿಂದಲೂ ತಿಳಿದಿದೆ. ಆದರೆ ಯೋಗರ್ಟ್ ಸೇವಿಸುವುದರಿಂದ ಟೈಪ್ -2 ಡಯಾಬಿಟಿಸ್ (ಟಿ 2 ಡಿ) ಅಪಾಯವನ್ನು ಕಡಿಮೆ ಮಾಡಬಹುದು ಎಂದು ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ಡಿಎ) ಮಾರ್ಚ್ನಲ್ಲಿ ಮೊದಲ ಬಾರಿಗೆ ಅಧಿಕೃತ ಹೇಳಿಕೆ ನೀಡಿದೆ.
"ವಾರಕ್ಕೆ ಕನಿಷ್ಠ ಮೂರು ಬಾರಿ ಯೋಗರ್ಟ್ ಸೇವನೆಯಿಂದ ಸಾಮಾನ್ಯ ಜನರು ತಮಗೆ ಟೈಪ್ -2 ಡಯಾಬಿಟಿಸ್ ಆಗುವ ಅಪಾಯವನ್ನು ಕಡಿಮೆ ಮಾಡಬಹುದು" ಎಂದು ಡಯಾಬಿಟಿಸ್ & ಮೆಟಾಬಾಲಿಕ್ ಸಿಂಡ್ರೋಮ್: ಕ್ಲಿನಿಕಲ್ ರಿಸರ್ಚ್ & ರಿವ್ಯೂಸ್ ಜರ್ನಲ್ನಲ್ಲಿ ಪ್ರಕಟವಾದ ಸೀಮಿತ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲಿನ ಎಫ್ಡಿಎ ಅಧ್ಯಯನವು ಬಹಿರಂಗಪಡಿಸಿದೆ.
ಆದಾಗ್ಯೂ ಯೋಗರ್ಟ್ ಸೇವನೆಯಿಂದ ಈಗಾಗಲೇ ಟೈಪ್ -2 ಡಯಾಬಿಟಿಸ್ ಹೊಂದಿರುವ ಜನರ ಡಯಾಬಿಟಿಸ್ ಗುಣಮುಖವಾಗುವುದಿಲ್ಲ ಅಥವಾ ಅದಕ್ಕೆ ಚಿಕಿತ್ಸೆ ನೀಡುವುದಿಲ್ಲ" ಎಂದು ಯುಎಸ್ನ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಪ್ರಬಂಧದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಐಎಎನ್ಎಸ್ ಜೊತೆ ಮಾತನಾಡಿದ ಸರ್ ಗಂಗಾ ರಾಮ್ ಆಸ್ಪತ್ರೆಯ ಪ್ರಧಾನ ಆಹಾರ ತಜ್ಞೆ ವಂದನಾ ವರ್ಮಾ, ಯೋಗರ್ಟ್ನಲ್ಲಿನ ಪ್ರೋಬಯಾಟಿಕ್ ಅಂಶದಿಂದಾಗಿ ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಲು ಅದನ್ನು ಅನುಮೋದಿಸಲಾಗಿದೆ. ಪ್ರೋಬಯಾಟಿಕ್ ಅಂಶವು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.
"ರಕ್ತದಲ್ಲಿನ ಸಕ್ಕರೆ ಮಟ್ಟದ ನಿರ್ವಹಣೆಗೆ ಅಗತ್ಯವಾದ ಗ್ಲೂಕೋಸ್ ಚಯಾಪಚಯ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ನಿಯಂತ್ರಿಸುವಲ್ಲಿ ಕರುಳಿನಲ್ಲಿನ ಸೂಕ್ಷ್ಮಜೀವಿ ಪ್ರಮುಖ ಪಾತ್ರ ವಹಿಸುತ್ತದೆ. ಯೋಗರ್ಟ್ನಲ್ಲಿರುವ ಪ್ರೋಬಯಾಟಿಕ್ಗಳು ಈ ಕಾರ್ಯಗಳನ್ನು ಹೆಚ್ಚಿಸಬಹುದು. ಇದು ಮಧುಮೇಹ ಹೊಂದಿರುವ ಅಥವಾ ಅದರ ಅಪಾಯದಲ್ಲಿರುವ ವ್ಯಕ್ತಿಗಳಿಗೆ ಪ್ರಯೋಜನಕಾರಿಯಾಗಿದೆ" ಎಂದು ಅವರು ತಿಳಿಸಿದರು.
ಆದಾಗ್ಯೂ, ಎಲ್ಲಾ ರೀತಿಯ ಯೋಗರ್ಟ್ಗಳು ಒಂದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ ಎಂದು ಅವರು ಒತ್ತಿ ಹೇಳಿದರು. "ಕೆಲವರಿಗೆ ಪ್ರೋಬಯಾಟಿಕ್ಗಳ ಕೊರತೆ ಇರಬಹುದು ಅಥವಾ ಹೆಚ್ಚುವರಿ ಸಕ್ಕರೆಯ ಮಟ್ಟ ಹೊಂದಿರಬಹುದು. ಇಂಥವರು ದಿನನಿತ್ಯದ ಜೀವನದಲ್ಲಿ ಸಾದಾ ಯೋಗರ್ಟ್ ಅನ್ನು ಸೇವಿಸುವುದು ಮತ್ತು ಹೆಚ್ಚುವರಿ ಸಕ್ಕರೆಯ ಸೇವನೆಯನ್ನು ತಪ್ಪಿಸುವುದು ಉತ್ತಮ. ಹಣ್ಣು, ತರಕಾರಿ, ಧಾನ್ಯಗಳು ಮತ್ತು ಪ್ರೋಟೀನ್ಗಳೊಂದಿಗೆ ಸಮತೋಲಿತ ಆಹಾರದಲ್ಲಿ ಯೋಗರ್ಟ್ ಸೇರಿಸುವುದು ಮಧುಮೇಹದ ಅಪಾಯವನ್ನು ನಿರ್ವಹಿಸಲು ನಿರ್ಣಾಯಕವಾಗಿದೆ" ಎಂದು ಆಹಾರ ತಜ್ಞರು ಹೇಳಿದ್ದಾರೆ.
ಯೋಗರ್ಟ್ ಹೆಚ್ಚಿನ ಪೌಷ್ಠಿಕಾಂಶ ಹೊಂದಿದ ಉತ್ಪನ್ನವಾಗಿದೆ ಮತ್ತು ಪ್ರೋಟೀನ್ಗಳು, ಜೀವಸತ್ವಗಳು, ಖನಿಜಗಳು ಮತ್ತು ಪ್ರಯೋಜನಕಾರಿ ಸೂಕ್ಷ್ಮಜೀವಿಗಳಂತಹ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಇದಲ್ಲದೆ, ಯೋಗರ್ಟ್ ತಿನ್ನುವುದು ಜೀರ್ಣಾಂಗವ್ಯೂಹದ (ಜಿಐಟಿ) ಮೈಕ್ರೋಬಯೋಟಾ ಮತ್ತು ಆರೋಗ್ಯ ವ್ಯವಸ್ಥೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ.
ಮೊಸರು ಮತ್ತು ಯೋಗರ್ಟ್ ಎರಡೂ ನೋಟದಲ್ಲಿ ಒಂದೇ ರೀತಿ ಕಾಣುತ್ತವೆ. ಆದರೆ ಅವುಗಳ ರುಚಿ, ವಿನ್ಯಾಸ ಮತ್ತು ತಯಾರಿಕೆಯಲ್ಲಿ ಸ್ಪಷ್ಟ ವ್ಯತ್ಯಾಸವಿದೆ. ಮೊಸರನ್ನು ಸಾಮಾನ್ಯವಾಗಿ ಪ್ರತಿ ಭಾರತೀಯ ಮನೆಯಲ್ಲೂ ಸೇವಿಸಲಾಗುತ್ತದೆ. ಇದನ್ನು ಸ್ವಲ್ಪ ಹಳೆಯ ಮೊಸರು ಅಥವಾ ನಿಂಬೆ ರಸವನ್ನು ಬೆಚ್ಚಗಿನ ಹಾಲಿನೊಂದಿಗೆ ಬೆರೆಸಿ ತಯಾರಿಸಲಾಗುತ್ತದೆ. ಮೊಸರು ರೂಪುಗೊಳ್ಳಲು ಪ್ರೋಬಯಾಟಿಕ್ ಬ್ಯಾಕ್ಟೀರಿಯಾವನ್ನು ಪ್ರಚೋದಿಸುವ ಈ ಪ್ರಕ್ರಿಯೆಯು ಈ ಡೈರಿ ಉತ್ಪನ್ನಕ್ಕೆ ವಿಶಿಷ್ಟ ರುಚಿ ಮತ್ತು ವಿನ್ಯಾಸವನ್ನು ನೀಡುತ್ತದೆ.
ಮತ್ತೊಂದೆಡೆ, ಹಾಲನ್ನು ಕೃತಕ ಆಮ್ಲಗಳೊಂದಿಗೆ ಹುದುಗಿಸುವ ಮೂಲಕ ಯೋಗರ್ಟ್ ಅನ್ನು ತಯಾರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ವಾಣಿಜ್ಯಿಕವಾಗಿ ತಯಾರಿಸಲಾಗುತ್ತದೆ ಮತ್ತು ಪರಿಪೂರ್ಣ ರುಚಿ ಮತ್ತು ನಯವಾದ ವಿನ್ಯಾಸವನ್ನು ಪಡೆಯಲು ಸೂಕ್ತ ತಾಪಮಾನದಲ್ಲಿ ಇದನ್ನು ತಯಾರಿಸಬೇಕಾಗುತ್ತದೆ.
ಇದನ್ನೂ ಓದಿ : ವಿಶ್ವ ಆರೋಗ್ಯ ದಿನ: ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಭಾರತ ಇನ್ನೂ ಸಾಧಿಸಬೇಕಿರುವುದೇನು? - WORLD HEALTH DAY