ಹೈದರಾಬಾದ್: ಉಸಿರಾಟ ಸಂಬಂಧಿ ಕಾಯಿಲೆಗಳಾದ ಅಸ್ತಮಾ, ಉಬ್ಬಸ, ದಮ್ಮು, ಕೆಮ್ಮು ಸಮಸ್ಯೆ ನಿವಾರಣೆಗೆ ಇಲ್ಲಿನ ಬತ್ತಿನಿ ಕುಟುಂಬದವರು ಪ್ರತಿವರ್ಷದಂತೆ ನೀಡುವ ಮೀನಿನ ಔಷಧವನ್ನು ವಿತರಿಸಲು ದಿನಾಂಕ ನಿಗದಿ ಮಾಡಿದೆ. ಸಮಸ್ಯೆಯಿಂದ ಬಳಲುತ್ತಿರುವವರು ಇದರ ನೆರವು ಪಡೆದುಕೊಳ್ಳಬಹುದಾಗಿದೆ.
ಮೀನಿನ ಔಷಧ ನೀಡುವ ಕುರಿತು ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬತ್ತಿನಿ ಕುಟುಂಬದ ಅಮರನಾಥಗೌಡ ಅವರು, ನಮ್ಮ ಕುಟುಂಬವು ತಲೆಮಾರುಗಳಿಂದ ಅಸ್ತಮಾ ಪೀಡಿತರಿಗೆ ಮೀನಿನ ಔಷಧವನ್ನು ನೀಡುತ್ತಾ ಬಂದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಔಷಧ ನೀಡಲಾಗುವುದು. ಮುಂದಿನ ತಿಂಗಳು ಅಂದರೆ ಜೂನ್ 8 ರಿಂದ ನಾಂಪಲ್ಲಿ ವಸ್ತುಪ್ರದರ್ಶನ ಮೈದಾನದಲ್ಲಿ ಔಷಧ ವಿತರಿಸಲಾಗುವುದು ಎಂದು ತಿಳಿಸಿದರು.
ಜೂನ್ 8 ರಂದು ಬೆಳಗ್ಗೆ 11 ಗಂಟೆಯಿಂದ ಆರಂಭವಾಗಿ ಜೂನ್ 9 ರ ಬೆಳಗ್ಗೆ 11 ಗಂಟೆಯವರೆಗೆ ಮೀನಿನ ಔಷಧ ವಿನಿಯೋಗ ನಡೆಯಲಿದೆ. ಜು.7ರಂದು ಪೂಜಾ ಕಾರ್ಯಕ್ರಮಗಳ ಬಳಿಕ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಔಷಧ ಪಡೆಯಲು ಬರುವವರಿಗೆ ಮೂಲಸೌಕರ್ಯಗಳನ್ನೂ ಒದಗಿಸಲಾಗುವುದು ಎಂದು ಅಮರನಾಥಗೌಡ ಹೇಳಿದರು.
ಅಸ್ತಮಾ, ಕೆಮ್ಮು ನಿವಾರಣೆಗೆ ಈ ಔಷಧವನ್ನು ನೀಡುತ್ತಿದ್ದೇವೆ. ಬರುವ ಜನರಿಗೆ ವಿವಿಧ ಸ್ವಯಂಸೇವಾ ಸಂಸ್ಥೆಗಳ ನೆರವಿನೊಂದಿಗೆ ವೈದ್ಯಕೀಯ ನೆರವು, ಆಹಾರ, ಕುಡಿಯುವ ನೀರಿನ ಸೌಲಭ್ಯವನ್ನು ಉಚಿತವಾಗಿ ನೀಡಲಾಗುವುದು. ಹಿಂದಿನ ಸರ್ಕಾರಗಳು ಮೀನು ಔಷಧ ವಿತರಣೆಗೆ ವ್ಯವಸ್ಥೆ ಮಾಡಿದಂತೆ, ಈಗಿನ ಕಾಂಗ್ರೆಸ್ ಸರ್ಕಾರವೂ ನೆರವು ನೀಡಬೇಕು ಎಂದು ಮನವಿ ಮಾಡಿದರು.
170 ವರ್ಷಗಳ ಇತಿಹಾಸ: ಸುಮಾರು 170 ವರ್ಷಗಳಿಂದ ಹೈದರಾಬಾದ್‌ನಲ್ಲಿ ಅಸ್ತಮಾ ರೋಗಿಗಳಿಗೆ ಬತ್ತಿನಿ ಕುಟುಂಬದವರು ಉಚಿತವಾಗಿ ಮೀನಿನ ಔಷಧವನ್ನು ವಿತರಿಸುತ್ತಿದ್ದಾರೆ. ಮೊದಲು ಹಳೆಯ ನಗರದಲ್ಲಿ ಹಂಚಿಕೆ ಮಾಡಲಾಗುತ್ತಿತ್ತು. ಈಗ ಭದ್ರತಾ ಕಾರಣಗಳಿಗಾಗಿ ನಾಂಪಲ್ಲಿ ವಸ್ತುಪ್ರದರ್ಶನ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲಿನ ಸ್ಟಾಲ್ಗಳಲ್ಲಿ ಮೀನಿನ ಮರಿಗಳನ್ನು ಮಾರಾಟ ಮಾಡಲಾಗುತ್ತದೆ. ಮೀನಿನ ಔಷಧ ಬೇಕಾದವರು ಹಣ ಕೊಟ್ಟು ಮೀನು ಮರಿ ಖರೀದಿಸಬಹುದು ಎಂದು ಅವರು ತಿಳಿಸಿದರು.