ನವದೆಹಲಿ: ಏಪ್ರಿಲ್ 1ರಿಂದ ಹೊಸ ಆರ್ಥಿಕ ವರ್ಷ ಶುರುವಾಗುವುದರ ಜತೆಗೆ ಬಜೆಟ್ಗನುಸಾರ ಹಲವು ವಸ್ತುಗಳ ಬೆಲೆಗಳಲ್ಲಿಯೂ ಏರಿಕೆ ಮತ್ತು ಇಳಿಕೆ ಆಗುತ್ತದೆ. ಈ ತಿಂಗಳಿಂದ ಔಷಧಗಳ ಬೆಲೆಗಳಲ್ಲೂ ಕೂಡ ಏರಿಕೆಯಾಗಲಿದೆ ಎಂಬ ವರದಿಗಳಾಗಿದ್ದವು. ಆದರೆ, ಇದು ಸತ್ಯಾಂಶಕ್ಕೆ ದೂರವಾದ ಸಂಗತಿ. ಏಪ್ರಿಲ್ 1ರಿಂದ ಔಷಧಗಳ ಬೆಲೆಗಳಲ್ಲಿ ಯಾವುದೇ ಏರಿಕೆಯಾಗಿಲ್ಲ. ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಈ ಸುದ್ದಿಗಳು ಸುಳ್ಳು. ಇದು ತಪ್ಪು ದಾರಿಗೆಳೆಯುವ ದುರುದ್ದೇಶಪೂರಿತ ಸುದ್ದಿಗಳಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಕೇಂದ್ರ ಕುಟುಂಬ ಕಲ್ಯಾಣ ಇಲಾಖೆ, ಏಪ್ರಿಲ್ 1ರಿಂದ 500ಕ್ಕೂ ಔಷಧಗಳ ಬೆಲೆ ಶೇ.12ರಷ್ಟು ಏರಿಕೆಯಾಗಲಿದೆ ಎಂದು ವರದಿಯಾಗಿದೆ. ಆದರೆ, ಇದು ಸುಳ್ಳು. ಔಷಧಗಳ ಮಾರಾಟ ಬೆಲೆಯನ್ನು ರಾಷ್ಟ್ರೀಯ ಫ್ಯಾರ್ಮಸ್ಯುಟಿಕಲ್ ದರ ಪ್ರಾಧಿಕಾರ (ಎನ್ಪಿಪಿಎ) ಹೋಲ್ಸೇಲ್ ದರ ಸೂಚ್ಯಂಕದ (ಡಬ್ಲ್ಯೂಪಿಐ) ಆಧಾರದ ಮೇಲೆ ಪ್ರತೀ ವರ್ಷ ಪರಿಷ್ಕರಿಸುತ್ತದೆ. ಡಬ್ಲ್ಯೂಪಿಐ ಆಧಾರದ ಮೇಲೆ 0.00551ರಷ್ಟು ಹೆಚ್ಚಳ ಮಾಡಲಾಗಿದೆ. 782 ಔಷಧಿಗಳಿಗೆ ಚಾಲ್ತಿಯಲ್ಲಿರುವ ಸೀಲಿಂಗ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ 54 ಔಷಧಿಗಳು 0.01 (ಒಂದು ಪೈಸೆ)ಯ ಅಲ್ಪ ಏರಿಕೆ ಕಾಣಬಹುದಾಗಿದೆ. 54 ಔಷಧಗಳ ಸೀಲಿಂಗ್ ಬೆಲೆಯ ದರ 90 ರೂ ನಿಂದ 261 ರೂ ಇರಲಿದೆ. ಡಬ್ಲ್ಯೂಪಿಐ ಔಷಧ ದರ ನಿಯಂತ್ರಣ ಆದೇಶ (ಡಿಪಿಸಿಒ) 2013 ಅವಕಾಶಕ್ಕೆ ಅನುಮತಿಸಿದಂತೆ ಗರಿಷ್ಠ ಹೆಚ್ಚಳ ಮಾಡಬಹುದು. ಉತ್ಪಾದಕರು ಸಣ್ಣ ಪ್ರಮಾಣದಲ್ಲಿ ಔಷಧಗಳ ದರ ಏರಿಕೆ ಮಾಡಬಹುದು ಅಥವಾ ಮಾಡದೇ ಇರಬಹುದು ಎಂದು ಸಚಿವಾಲಯ ತಿಳಿಸಿದೆ.
2024-25ರ ಆರ್ಥಿಕ ವರ್ಷದಲ್ಲಿ ಔಷಧಗಳ ಸೀಲಿಂಗ್ ಬೆಲೆಗಳ ಮೇಲೆ ಡಬ್ಲೂಪಿಐ ಆಧಾರದ ಅನುಸಾರ ಯಾವುದೇ ಬದಲಾವಣೆ ಇಲ್ಲ. ತಮ್ಮ ಔಷಧಿಗಳ ಸೀಲಿಂಗ್ ಬೆಲೆಯನ್ನು ಅವಲಂಬಿಸಿ, ಕಂಪನಿಗಳು ತಮ್ಮ ಎಂಆರ್‌ಪಿ (ಜಿಎಸ್‌ಟಿ ಹೊರತುಪಡಿಸಿ) ಸೀಲಿಂಗ್ ಬೆಲೆಗಿಂತ ಕಡಿಮೆ ಇರುವ ಯಾವುದೇ ಬೆಲೆಯೊಂದಿಗೆ ಹೊಂದಿಸಬಹುದು. ಏಪ್ರಿಲ್ 1ರಿಂದ ಅನ್ವಯವಾಗುವ ಈ ಪರಿಷ್ಕೃತ ದರ ಎನ್ಪಿಪಿಒಎ ವೆಬ್ಸೈಟ್ನಲ್ಲಿ ಲಭ್ಯವಿದೆ. (ಐಎಎನ್ಎಸ್)
ಇದನ್ನೂ ಓದಿ: ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಿಂದ ಟಿಟಿಯನ್ನು ತಳ್ಳಿದ ಟಿಕೆಟ್ರಹಿತ ಪ್ರಯಾಣಿಕ