Ayurvedic Home Remedy To Cure Throat Pain In Winter: ಚಳಿಗಾಲದಲ್ಲಿ ಅನೇಕರು ಶೀತ, ಕೆಮ್ಮು ಹಾಗೂ ಗಂಟಲು ನೋವಿನಿಂದ ಬಳಲುತ್ತಾರೆ. ಹವಾಗುಣದಲ್ಲಾಗುವ ಬದಲಾವಣೆಗಳಿಂದ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಗಂಟಲಲ್ಲಿ ಸಿಲುಕಿಕೊಳ್ಳುತ್ತವೆ. ಇದರ ಪರಿಣಾಮ ಗಂಟಲಿನಲ್ಲಿ ಕಿರಿಕಿರಿ ಅನುಭವವಾಗುತ್ತದೆ. ಇದರಿಂದಾಗಿ ಆಹಾರ ಸೇವಿಸಲು ಮತ್ತು ನೀರು ಕುಡಿಯಲು ಕಷ್ಟವಾಗುತ್ತದೆ. ಕೆಲವರು ಲಾಲಾರಸವನ್ನೂ ಸಹ ನುಂಗಲು ಕಷ್ಟಪಡಬೇಕಾದ ಪರಿಸ್ಥಿತಿ ಇರುತ್ತದೆ. ಕೆಲವೊಮ್ಮೆ ತೀವ್ರ ನೋವಿನಿಂದ ಜ್ವರವೂ ಬರುತ್ತದೆ.
ಆಲಸ್ಯ, ಹಸಿವಿನ ಕೊರತೆ, ಕೆಮ್ಮು, ಗಂಟಲು ಕಿರಿಕಿರಿ ಹಾಗೂ ಮೂಗು ಸೋರುವಿಕೆ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಆಯುರ್ವೇದ ತಜ್ಞೆ ಡಾ.ಗಾಯತ್ರಿ ದೇವಿ ಅವರು ಗಂಟಲು ನೋವಿನಿಂದ ಪರಿಹಾರ ಪಡೆಯಲು ಆಯುರ್ವೇದದ ಮನೆ ಮದ್ದು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಈ ಔಷಧ ತಯಾರಿಕೆ ಹೇಗೆ? ಯಾವಾಗ ತೆಗೆದುಕೊಳ್ಳಬೇಕು ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ.
ಮನೆಮದ್ದಿಗೆ ಬೇಕಾಗುವ ಪದಾರ್ಥಗಳು:
- ಲವಂಗ ಚೂರ್ಣ - 10 ಗ್ರಾಂ
- ಅಳಲೆಕಾಯಿ ಪುಡಿ - 10 ಗ್ರಾಂ
- ಕರಿಮೆಣಸಿನ ಪುಡಿ - 10 ಗ್ರಾಂ
- ಕಗ್ಗಲಿ - 30 ಗ್ರಾಂ
- ನೆಗಾಲಿಯಾ ಗಿಡದ ತೊಗಟೆ ಪುಡಿ - 30 ಗ್ರಾಂ
- ನೀರು - ಕಾಲು ಲೀಟರ್
ಸಿದ್ಧಪಡಿಸುವುದು ಹೇಗೆ?:
- ಒಲೆ ಆನ್ ಮಾಡಿ ಪಾತ್ರೆ ಇಡಿ. ಅದರೊಳಗೆ ಕಾಲು ಲೀಟರ್ ನೀರು ಸುರಿಯಿರಿ. ನಂತರ ಅದಕ್ಕೆ ನೆಗಾಲಿಯಾ ಗಿಡದ ತೊಗಟೆ ಪುಡಿ ಹಾಕಿ ಚೆನ್ನಾಗಿ ಕಲಸಿ. ಕಡಿಮೆ ಉರಿಯಲ್ಲಿಟ್ಟು ನೀರು ಈ ಅರ್ಧಕ್ಕಿಂತ ಕಡಿಮೆಯಾಗುವವರೆಗೆ ಕುದಿಸಬೇಕು.
- ಈ ನಡುವೆ ಮತ್ತೊಂದು ಬೌಲ್‌ಗೆ ಕಗ್ಗಲಿ ಅಥವಾ ಕಾಚು ಪುಡಿ, ಲವಂಗದ ಚೂರ್ಣ, ಕಾಳುಮೆಣಸಿನ ಪುಡಿ ಮತ್ತು ಅಳಲೆಕಾಯಿ ಪುಡಿ ಹಾಕಿ ಚೆನ್ನಾಗಿ ಕಲಸಿ.
- ನೀರು ಚೆನ್ನಾಗಿ ಕುದಿಯುವಾಗ ಈ ಎಲ್ಲಾ ಪುಡಿಗಳನ್ನು ಹಾಕಿ ಕುದಿ ಬರುವವರೆಗೆ ಬೇಯಿಸಿಕೊಳ್ಳಬೇಕು. ಬೇಯಿಸಿದ ಬಳಿಕ ಇನ್ನೊಂದು ಪಾತ್ರೆಯಲ್ಲಿ ತೆಗೆದುಕೊಂಡು ತಣ್ಣಗಾಗಲು ಬಿಡಿ.
- ಅದು ಬೆಚ್ಚಗಿರುವಾಗ ಸ್ವಲ್ಪ ಸ್ವಲ್ಪವಾಗಿ ತೆಗೆದುಕೊಂಡು ಚಿಕ್ಕ ಚಿಕ್ಕ ಮಾತ್ರೆಗಳ ರೀತಿ ಸಿದ್ಧಪಡಿಸಿ ಸ್ಟೀಲ್ಡಬ್ಬದಲ್ಲಿ ಹಾಕಿ ಇಡಬೇಕು. ಬಾಕ್ಸ್ನಲ್ಲಿ ಶೇಖರಿಸಿಟ್ಟರೆ ಗಂಟಲು ನೋವಿಗೆ ಮದ್ದು ರೆಡಿಯಾಗುತ್ತದೆ.
ಔಷಧ ತೆಗೆದುಕೊಳ್ಳುವುದು ಹೇಗೆ?: ಗಂಟಲು ನೋವಿನ ಸಮಸ್ಯೆ ಇರುವವರು ಈ ಮಾತ್ರೆಗಳನ್ನು ದಿನದಲ್ಲಿ ಮೂರು ಸಲ ತೆಗೆದುಕೊಳ್ಳಬೇಕು. ಅಂದರೆ ಬೆಳಿಗ್ಗೆ ಒಂದು, ಮಧ್ಯಾಹ್ನ ಮತ್ತು ರಾತ್ರಿ ಒಂದು ತೆಗೆದುಕೊಳ್ಳಬೇಕಾಗುತ್ತದೆ. ಗಂಟಲು ನೋವಿನ ಸಮಸ್ಯೆ ಕಡಿಮೆಯಾಗುವವರೆಗೆ ಈ ರೀತಿ ಸೇವಿಸಬೇಕು ಎನ್ನುತ್ತಾರೆ ಆಯುರ್ವೇದ ತಜ್ಞೆ ಡಾ.ಗಾಯತ್ರಿದೇವಿ.
ಗಿಡಮೂಲಿಕೆಗಳ ಪ್ರಯೋಜನಗಳೇನು?:
ಕಗ್ಗಲಿ: ಗಂಟಲು ನೋವನ್ನು ನಿವಾರಿಸಲು ಇದು ತುಂಬಾ ಉಪಯುಕ್ತ. ಕಗ್ಗಲಿ/ಕಾಚು ಪುಡಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಗಂಟಲಿನ ಬ್ಯಾಕ್ಟೀರಿಯಾವನ್ನು ನಾಶಮಾಡಲು ಸಹಾಯಕ. ಇದು ನೋಯುತ್ತಿರುವ ಗಂಟಲಿಗೆ ಕಾರಣವಾಗುವ ಸೋಂಕನ್ನು ಕಡಿಮೆ ಮಾಡುತ್ತದೆ. ಕಾಚಿನ ಪುಡಿಯು ಗಂಟಲಿನಲ್ಲಿ ಹೆಚ್ಚುವರಿ ಲೋಳೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಲವಂಗ ಪುಡಿ: ಲವಂಗದಲ್ಲಿರುವ ಯುಜೆನಾಲ್ ಎಂಬ ಸಂಯುಕ್ತವು ಪ್ರಬಲವಾದ ಆ್ಯಂಟಿಬ್ಯಾಕ್ಟೀರಿಯಾ ಗುಣಗಳನ್ನು ಹೊಂದಿದೆ. ಇದು ಗಂಟಲಿನಲ್ಲಿ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ ಹಾಗೂ ಸೋಂಕನ್ನು ಕಡಿಮೆ ಮಾಡುತ್ತದೆ. ಇದು ಗಂಟಲಿನಲ್ಲಿ ಊತ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಕಾಳುಮೆಣಸು: ಇದರಲ್ಲಿರುವ ಪೈಪರಿನ್ ಸಂಯುಕ್ತವು ಶಕ್ತಿಯುತವಾದ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಗಂಟಲಿನ ಊತ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣವು ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ ಹಾಗೂ ಸೋಂಕುಗಳನ್ನು ಕಡಿಮೆ ಮಾಡುತ್ತದೆ ಎಂದು ಆಯುರ್ವೇದ ತಜ್ಞರು ಸಲಹೆ ನೀಡುತ್ತಾರೆ.
ಇದನ್ನೂ ಓದಿ: ಅಜೀರ್ಣಕ್ಕೆ ಆಯುರ್ವೇದದ ಮನೆ ಮದ್ದು; ಇದನ್ನು 1 ಚಮಚ ಸೇವಿಸಿ ಸಾಕು, ಸಮಸ್ಯೆಯಿಂದ ಮುಕ್ತಿ!