ಹೈದರಾಬಾದ್: ಹೈದರಾಬಾದ್‌ನಲ್ಲಿರುವ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ(ಎಐಜಿ)ಯ ವೈದ್ಯರು ದೊಡ್ಡ ಯಶಸ್ಸನ್ನು ಸಾಧಿಸಿದ್ದಾರೆ. ಇತ್ತೀಚೆಗಷ್ಟೇ ಆಸ್ಪತ್ರೆಗೆ ಬಂದಿದ್ದ ರೋಗಿಯೊಬ್ಬರ ಮೆದುಳಿನ ಗೆಡ್ಡೆಯನ್ನು ವೈದ್ಯರು ಅತ್ಯಂತ ವಿನೂತನ ವಿಧಾನದಿಂದ ಯಶಸ್ವಿಯಾಗಿ ಕಣ್ಣಿನ ರೆಪ್ಪೆಯ ಮೂಲಕ ಮೆದುಳಿನಲ್ಲಿದ್ದ ಟ್ಯೂಮರ್ ಅನ್ನು ತೆಗೆದುಹಾಕಿದ್ದಾರೆ. ಕಳೆದ ಆರು ತಿಂಗಳಿಂದ ಅಸ್ಪಷ್ಟ ದೃಷ್ಟಿ ಹಾಗೂ ಬಲಗಣ್ಣಿನ ನೋವಿನಿಂದ ಬಳಲುತ್ತಿದ್ದ 54 ವರ್ಷದ ಮಹಿಳೆಯೊಬ್ಬರಿಗೆ ಈ ಕ್ಲಿಷ್ಟಕರ ಹಾಗೂ ಅಪರೂಪದ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಮೂಲಕ ವೈದ್ಯರು ರೋಗಿಗೆ ಮರುಜನ್ಮ ನೀಡಿದ್ದಾರೆ.
ಸ್ಪಿನೋ ಆರ್ಬಿಟಲ್ ಕಾವರ್ನಸ್ ಮೆನಿಂಜಿಯೋಮಾ: ಮಹಿಳೆಯು ಆರಂಭಿಕ ಹಂತದಲ್ಲಿ AIG ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ, ಅವರಿಗೆ ಬ್ರೈನ್ ಟ್ಯೂಮರ್ ಇರುವುದು ತಿಳಿದಿದೆ. AIG ಆಸ್ಪತ್ರೆಯ ಹಿರಿಯ ಸಲಹೆಗಾರ ನರಶಸ್ತ್ರಚಿಕಿತ್ಸಕ ಡಾ.ಅಭಿರಚಂದ್ರ ಗಬ್ಬಿತಾ, ನರಶಸ್ತ್ರಚಿಕಿತ್ಸೆಯ ನಿರ್ದೇಶಕ ಡಾ.ಸುಭೋದ್ರಾಜು ಮತ್ತು ನೇತ್ರಶಾಸ್ತ್ರಜ್ಞರ ತಂಡವು ಸಂಪೂರ್ಣ ಪರೀಕ್ಷೆಯನ್ನು ನಡೆಸಿತು. ವಿವರವಾದ ಪರೀಕ್ಷೆಯ ನಂತರ, ವೈದ್ಯರು ಇದು ಸ್ಪಿನೋ ಆರ್ಬಿಟಲ್ ಕಾವರ್ನಸ್ ಮೆನಿಂಜಿಯೋಮಾ (ಎಸ್ಒಎಂ) ಎಂದು ದೃಢಪಡಿಸಿದರು.
ಅದ್ಭುತ ರೀತಿಯಲ್ಲಿ ನಡೆದ ಶಸ್ತ್ರಚಿಕಿತ್ಸೆ: ತಲೆಬುರುಡೆಯನ್ನು ಕತ್ತರಿಸಿ ಅಥವಾ ತೆರೆದು ಮೆದುಳಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿದರೆ, ಇದು ಕೆಲವೊಮ್ಮೆ ಅಪಾಯಕಾರಿಯಾಗುತ್ತದೆ. ವೈದ್ಯರ ತಂಡವು, ಮಹಿಳೆಯ ತಲೆಬುರುಡೆಗೆ ಯುವುದೇ ಹಾನಿ ಮಾಡದೇ ಸಂಕೀರ್ಣವಾದ ಮೆದುಳಿನ ಗೆಡ್ಡೆಯನ್ನು ತೆಗೆದುಹಾಕುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಎಂಡೋಸ್ಕೋಪಿಕ್ ಲ್ಯಾಟರಲ್ ಟ್ರಾನ್ಸ್‌ಆರ್ಬಿಟಲ್ ವಿಧಾನದ ಮೂಲಕ ಎಐಜಿ ವೈದ್ಯರ ತಂಡವು ಶಸ್ತ್ರಚಿಕಿತ್ಸೆ ನಡೆಸಿದೆ.
ಈ ವಿಧಾನವು ಉತ್ತಮವಾಗಿದ್ದು, ಮತ್ತು ಕಡಿಮೆ ಅಪಾಯಕಾರಿ ಆಗಿರುವುದರಿಂದಲೇ ಇದನ್ನು ಆಯ್ಕೆ ಮಾಡಿದೆ. ಈ ವಿಧಾನದ ಮೂಲಕ ಕಣ್ಣಿನ ರೆಪ್ಪೆಯ ಮೂಲಕ ಮೆದುಳಿನಲ್ಲಿದ್ದ ಗೆಡ್ಡೆಯನ್ನು ಯಶಸ್ವಿಯಾಗಿ ತೆಗೆದುಹಾಕಿದ್ದಾರೆ. ಇದರಿಂದ ತಲೆಬುರುಡೆಗೆ ಯಾವುದೇ ಹಾನಿಯಾಗುವುದಿಲ್ಲ ಅಥವಾ ಮೆದುಳಿನ ಮೇಲೆ ನೇರ ಒತ್ತಡ ಉಂಟಾಗುವುದಿಲ್ಲ. ಈ ವಿಧಾನವು ಮೆದುಳಿನ ಮೇಲಿನ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.
ಕೇವಲ ಎರಡು ದಿನಗಳ ಬಳಿಕ ಮಹಿಳೆ ಡಿಸ್ಚಾರ್ಜ್: ಮೆದುಳಿನ ಚೇತರಿಕೆ ಸುರಕ್ಷಿತ ಮತ್ತು ವೇಗವಾಗಿರುತ್ತದೆ. ಶಸ್ತ್ರಚಿತ್ಸೆಯ ಕಾರ್ಯವಿಧಾನವು ಕಡಿಮೆ ಅಪಾಯಕಾರಿ ಆಗಿರುವುದರಿಂದ ಶಸ್ತ್ರಚಿಕಿತ್ಸೆಯ ನಂತರ ರೋಗಿಯನ್ನು ಕೇವಲ ಎರಡು ದಿನಗಳ ಬಳಿಕ ಡಿಸ್ಚಾರ್ಜ್ ಮಾಡಲಾಯಿತು. ಈ ಯಶಸ್ವಿ ಶಸ್ತ್ರಚಿಕಿತ್ಸೆಯು ನರಶಸ್ತ್ರಚಿಕಿತ್ಸೆಯಲ್ಲಿನ ಪ್ರಗತಿಯಾಗಿದೆ. ಮತ್ತು ಸಂಕೀರ್ಣ ಮೆದುಳಿನ ಶಸ್ತ್ರಚಿಕಿತ್ಸೆಯ ಕಡಿಮೆ ಅಪಾಯಕಾರಿ ತಂತ್ರಗಳ ಬಳಕೆ ಕುರಿತು ಎತ್ತಿ ತೋರಿಸುತ್ತದೆ.