ನವದೆಹಲಿ: ಕೇರಳದ ತ್ರಿಶೂರ್‌ನಲ್ಲಿ ಆಫ್ರಿಕನ್ ಹಂದಿ ಜ್ವರ (ಎಎಸ್ಎಫ್) ಉಲ್ಬಣಿಸಿದ್ದು 310 ಹಂದಿಗಳನ್ನು ಕೊಲ್ಲಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ತ್ರಿಶೂರ್ನ ಮಡಕ್ಕತರನ್ ಪಂಚಾಯತ್ ವ್ಯಾಪ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ತಕ್ಷಣವೇ ರಾಜ್ಯ ಪಶು ಸಂಗೋಪನಾ ಇಲಾಖೆ ಕಾರ್ಯಾಚರಣೆಗೆ ಮುಂದಾಗಿದೆ.
ಜುಲೈ 5ರಂದು ಸೋಂಕು ಕಾಣಿಸಿಕೊಂಡಿದ್ದು, ಸುತ್ತಲಿನ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಹಂದಿಗಳನ್ನು ಕೊಲ್ಲಲು ವಿಶೇಷ ತಂಡವನ್ನು ನಿಯೋಜಿಸಲಾಗಿತ್ತು ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
2020ರ ಮೇ ತಿಂಗಳಲ್ಲಿ ಮೊದಲ ಬಾರಿಗೆ ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಹಂದಿ ಜ್ವರದ ಸೋಂಕು ಕಾಣಿಸಿಕೊಂಡಿತ್ತು. ಅಲ್ಲಿಂದ 24 ರಾಜ್ಯಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶದಲ್ಲೂ ಹರಡಿದ್ದು, ಇಲ್ಲಿಯವರೆಗೆ ಸೋಂಕಿನ ವಿರುದ್ಧ ದೇಶ ಹೋರಾಡುತ್ತಲೇ ಇದೆ.
ಕ್ರಿಯಾ ಯೋಜನೆಯ ಪ್ರಕಾರ, ಸೋಂಕು ಕಾಣಿಸಿಕೊಂಡ 10 ಕಿ.ಮೀ ವ್ಯಾಪ್ತಿಯಲ್ಲಿ ಕಣ್ಗಾವಲು ಕೇಂದ್ರ ತೆರೆಯಲಾಗುವುದು. ಹಂದಿ ಜ್ವರ ಜೋನೋಟಿಕ್ ಸೋಂಕು ಅಲ್ಲ. ಇದು ಮನುಷ್ಯರಿಗೆ ಹರಡಲು ಸಾಧ್ಯವಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
ಎಎಸ್ಎಫ್ಗೆ ಯಾವುದೇ ಲಸಿಕೆ ಇಲ್ಲದ ಕಾರಣ ಪ್ರಾಣಿಗಳಲ್ಲಿ ಈ ರೋಗವನ್ನು ನಿರ್ವಹಣೆ ಮಾಡುವುದು ದೊಡ್ಡ ಸವಾಲು. ರಾಷ್ಟ್ರೀಯ ಕ್ರಿಯಾ ಯೋಜನೆ 2020ರಲ್ಲಿ ರೂಪಿಸಲಾಗಿದ್ದ ನಿಯಂತ್ರಣ ತಂತ್ರಗಳು ಮತ್ತು ಪ್ರತಿಕ್ರಿಯೆ ಪ್ರೊಟೋಕಾಲ್ ಕುರಿತು ವಿವರಣೆ ನೀಡುತ್ತದೆ. ದೇಶದಲ್ಲಿ ಇಂದಿಗೂ ಕೂಡ ಈ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದೀಗ ಕೇರಳದಲ್ಲಿ ಹೊಸದಾಗಿ ಉಲ್ಬಣಗೊಂಡಿದೆ.
ಎಲ್ಲಾ ಪ್ರಾಣಿಗಳ ಕಾಯಿಲೆಗಳು ಮಾನವರ ಆರೋಗ್ಯಕ್ಕೆ ಅಪಾಯ ಉಂಟುಮಾಡುವುದಿಲ್ಲ. ಝೊನೋಟಿಕ್ ಮತ್ತು ಝೂನೋಟಿಕ್ ಅಲ್ಲದ ಕಾಯಿಲೆಗಳ ನಡುವೆ ವ್ಯತ್ಯಾಸ ಪತ್ತೆ ಮಾಡುವುದು ಬಹಳ ಮುಖ್ಯ. ಅನೇಕ ಜಾನುವಾರು ರೋಗಗಳು, ಕಾಲು ಮತ್ತು ಬಾಯಿ ರೋಗ ಅಥವಾ ಲಂಪಿ ಸ್ಕಿನ್ ಡಿಸೀಸ್, ಮನುಷ್ಯರಿಗೆ ಸೋಂಕು ತರುವುದಿಲ್ಲ ಎಂದು ಸಚಿವಾಲಯ ಹೇಳಿದೆ.
ಆಫ್ರಿಕನ್ ಹಂದಿ ಜ್ವರ ಅಸ್ಫರ್ವಿರಿಡೆ ಎಂಬ ವೈರಸ್ ಕುಟುಂಬದಿಂದ ಬರುವ ಸೋಂಕಾಗಿದೆ. ಈ ಸೋಂಕು ಸ್ಥಳೀಯ ಹಂದಿಗಳಲ್ಲಿ ಕಂಡುಬಂದರೆ, ಪ್ರದೇಶದಲ್ಲಿರುವ ಹಂದಿಗಳ ಗುಂಪನ್ನು ಸಾಯಿಸಬೇಕಾಗುತ್ತದೆ. 1907ರಲ್ಲಿ ಮೊದಲ ಬಾರಿಗೆ ಕೀನ್ಯಾದಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಆಫ್ರಿಕಾದ ಕಾಡು ಹಂದಿಯಿಂದ ಬ್ರಿಟಿಷ್ ಕೊಲೊನಿಯಲ್ಲಿದ್ದ ಸ್ಥಳೀಯ ಹಂದಿಗೆ ಸೋಂಕು ತಗುಲಿತ್ತು.(ಪಿಟಿಐ)
ಇದನ್ನೂ ಓದಿ: ಆಹಾರ ಪೊಟ್ಟಣದ ಮೇಲೆ ಸಕ್ಕರೆ, ಉಪ್ಪಿನಂಶದ ಮಾಹಿತಿ ಮುದ್ರಣ ಕಡ್ಡಾಯ