ನವದೆಹಲಿ: ಅಮೆರಿಕದಲ್ಲಿ ವೇಗವಾಗಿ ಹರಡುತ್ತಿರುವ ಹೊಸ ಕೋವಿಡ್ 19 ರೂಪಾಂತರಿ 'ಎಫ್ಎಲ್ಐಆರ್ಟಿ' (FLiRT- ಫ್ಲರ್ಟ್) ಪ್ರಕರಣ ಇದೀಗ ಮಹಾರಾಷ್ಟ್ರದಲ್ಲೂ ಪತ್ತೆಯಾಗಿದೆ. ಆದರೆ, ಈ ಸೋಂಕಿನ ಬಗ್ಗೆ ತಕ್ಷಣಕ್ಕೆ ಹೆಚ್ಚು ಆತಂಕಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಫ್ಲರ್ಟ್ ಎಂದು ಕರೆಯಲ್ಪಡುತ್ತಿರುವ ಈ ಸೋಂಕು ಕೆಪಿ.1.1 ಮತ್ತು ಕೆಪಿ.2 ತಳಿಗಳ ರೂಪಾಂತರ ಒಳಗೊಂಡಿದೆ. ಈ ತಳಿಗಳ ರೂಪಾಂತರಗಳ ತಾಂತ್ರಿಕ ಹೆಸರುಗಳ ಆಧಾರದ ಮೇಲೆ ಅವುಗಳನ್ನು ಹೆಸರಿಸಲಾಗಿದೆ. ಒಂದು ರೂಪಾಂತರ ಎಫ್ ಮತ್ತು ಎಲ್ ಅಕ್ಷರ ಒಳಗೊಂಡಿದ್ದರೆ, ಮತ್ತೊಂದು ರೂಪಾಂತರ ಆರ್ ಮತ್ತು ಟಿ ಅಕ್ಷರ ಹೊಂದಿದೆ.
ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಸಂಗ್ರಹಿಸಲಾದ ಜಿನೋಮ್ ಸೀಕ್ವೆನ್ಸಿಂಗ್ನಲ್ಲಿ ಕೆಪಿ.2ನ 91 ಪ್ರಕರಣಗಳು ಮಹಾರಾಷ್ಟ್ರದಲ್ಲಿ ಕಂಡುಬಂದಿವೆ. ಇದರಲ್ಲಿ ಪುಣೆಯಲ್ಲಿ 51, ಥಾಣೆ 20, ಅಮರಾವತಿ 7, ಔರಂಗಬಾದ್ 7, ಸೋಲಪುರ್ 2, ಅಹಮದ್ನಗರ 1, ನಾಸಿಕ್ 1, ಲಾತೂರ್ 1 ಮತ್ತು ಸಾಂಗ್ಲಿಯಲ್ಲಿ 1 ಪ್ರಕರಣ ಪತ್ತೆಯಾಗಿದೆ. ಆದರೆ, ಯಾವುದೇ ಪ್ರಕರಣದಲ್ಲೂ ಆಸ್ಪತ್ರೆಗೆ ದಾಖಲಾಗುವ ಅಥವಾ ತೀವ್ರತರದ ಕಾಯಿಲೆ ವರದಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಆತಂಕ ಬೇಕಿಲ್ಲ ಎಂದು ಸೋಂಕು ರೋಗ ತಜ್ಞ ಡಾ.ಈಶ್ವರ್ ಗಿಲಡಾ ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ, ಪಾಸಿಟಿವ್ ದರ ಕೂಡ ಕೇವಲ ಶೇ.1ರಷ್ಟಿದೆ. ಸದ್ಯ ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮುಖ ತಳಿ ಕೆಪಿ.2 ಆಗಿದೆ. ಆದಾಗ್ಯೂ ಈ ತಳಿ ಸೋಂಕಿತರ ಆಸ್ಪತ್ರೆ ದಾಖಲೀಕರಣ ಅಥವಾ ತೀವ್ರತರದ ಪ್ರಕರಣಗಳು ವರದಿಯಾಗಿಲ್ಲ ಎಂದು ಪ್ರಮುಖ ಆಂಗ್ಲ ಮಾಧ್ಯಮ ವರದಿ ಮಾಡಿದೆ.
ಓಮಿಕ್ರಾನ್ ವಂಶಾವಳಿಯ ಹೆಚ್ಚು ಹರಡುವ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ರೂಪಾಂತರ ಸೋಂಕು ಇದಾಗಿದೆ. ಫ್ಲರ್ಟ್ ಮೊದಲ ಬಾರಿಗೆ ಜನವರಿಯಲ್ಲಿ ಜಾಗತಿಕವಾಗಿ ಪತ್ತೆಯಾಗಿತ್ತು. ಓಮ್ರಿಕಾನ್ ಮೂಲ ಕೆಪಿ.2 ತಳಿ. ಅಮೆರಿಕದ ರೋಗ ನಿಯಂತ್ರಣ ತಡೆಗಟ್ಟುವಿಕೆ ಕೇಂದ್ರದ ಪ್ರಕಾರ, ಏಪ್ರಿಲ್ ಕೊನೆ ವಾರದಲ್ಲಿ ದೇಶದಲ್ಲಿ ಕೆಪಿ.2 ಅನುಕ್ರಮ ಪ್ರಸರಣದ ಪಾಲು ಶೇ 25ರಷ್ಟು ಇರಲಿದೆ.
ಲಕ್ಷಣಗಳು: ಈ ತಳಿ ಕೂಡ ಈ ಹಿಂದೆ ಕೋವಿಡ್ ತಳಿಗಳು ಹೊಂದಿದ್ದಂತಹ ಮೂಗು ಸೋರುವಿಕೆ, ಗಂಟಲು ಕೆರೆತ, ಸುಸ್ತು, ಜ್ವರ, ತಲೆನೋವು, ಸ್ನಾಯು ನೋವು, ಕೆಲವು ಬಾರಿ ರುಚಿ ಅಥವಾ ವಾಸನೆ ನಷ್ಟದ ಲಕ್ಷಣಗಳನ್ನು ಹೊಂದಿದೆ.
ಕೋವಿಡ್ ಸಂಪೂರ್ಣವಾಗಿ ಸಮಾಜದಿಂದ ಹೋಗಿಲ್ಲ. ಆದರೆ, ಇದು ಹೆಚ್ಚು ಆತಂಕ ಸೃಷ್ಟಿಸುತ್ತಿಲ್ಲ. ಆಸ್ಪತ್ರೆ ದಾಖಲೀಕರಣ ಮತ್ತು ಸಾವಿಗೆ ಕಾರಣವಾಗುತ್ತಿಲ್ಲ. 'ಸೌಮ್ಯ ಸ್ವಭಾವ'ದ ಜ್ವರದಂತೆ ಇದೆ. ಇದನ್ನು ಪ್ರತ್ಯೇಕ ರೋಗ ಎಂದು ಪರಿಗಣಿಸಲಾಗದು. ಇದನ್ನು 'ಕೋವಿ-ಜ್ವರ' ಎಂದು ಕರೆಯಬಹುದಾಗಿದೆ ಎಂದು ಮುಂಬೈನ ಇನ್ಫೆಕ್ಷಸ್ ಡೀಸಿಸ್ ಯುನಿಸೊನ್ ಮೆಡಿಕೇರ್ ಆ್ಯಂಡ್ ರಿಸರ್ಚ್‌ನ ಸಮಲೋಚಕರಾದ ಡಾ.ಗಿಲಡಾ ಮಾಹಿತಿ ನೀಡಿದರು. (ಐಎಎನ್ಎಸ್)
ಇದನ್ನೂ ಓದಿ: ರೋಗ ನಿರೋಧಕ ಶಕ್ತಿ ಮೀರಿಸುವ ಸಾಮರ್ಥ್ಯ ಹೊಂದಿದೆ ಹೊಸ ಕೋವಿಡ್ ರೂಪಾಂತರ