ನವದೆಹಲಿ : ವಿಶ್ವಾದ್ಯಂತ ಪ್ರತಿ ವರ್ಷ ಸುಮಾರು 2,36,000 ಜನ ನೀರಲ್ಲಿ ಮುಳುಗಿ ಸಾವಿಗೀಡಾಗುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕಿ ಸೈಮಾ ವಾಝೆದ್ ಗುರುವಾರ ಹೇಳಿದ್ದಾರೆ. ಅಂದರೆ ದಿನಕ್ಕೆ 350 ಅಥವಾ ಪ್ರತಿ ಗಂಟೆಗೆ 26 ಜನ ನೀರಲ್ಲಿ ಮುಳುಗಿ ಸಾಯುತ್ತಿದ್ದಾರೆ.
ವಿಶ್ವಾದ್ಯಂತ ಗಾಯ-ಸಂಬಂಧಿತ ಸಾವು ಮತ್ತು ಅಂಗವೈಕಲ್ಯಕ್ಕೆ ಪ್ರಮುಖ ಕಾರಣಗಳ ಬಗ್ಗೆ ಜಾಗೃತಿ ಮೂಡಿಸಲು ಜುಲೈ 25 ರಂದು ವಿಶ್ವ ಮುಳುಗುವಿಕೆ ತಡೆಗಟ್ಟುವ ದಿನವಾಗಿ ಆಚರಿಸಲಾಗುತ್ತದೆ. 'ಯಾರು ಬೇಕಾದರೂ ಮುಳುಗುವ ಸಾಧ್ಯತೆಯಿದೆ, ಆದರೆ ಯಾರೂ ಮುಳುಗಬಾರದು' ಎಂಬುದು ಈ ವರ್ಷದ ಥೀಮ್ ಆಗಿದೆ.
"2019 ರಲ್ಲಿ, ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಮುಳುಗಿ 70,034 ಜನರು ಸಾವನ್ನಪ್ಪಿದ್ದಾರೆ. ಇದು ವಿಶ್ವಾದ್ಯಂತ ಮುಳುಗಿ ಸತ್ತವರ ಎರಡನೇ ಅತ್ಯಧಿಕವಾಗಿದೆ" ಎಂದು ಪ್ರಾದೇಶಿಕ ನಿರ್ದೇಶಕರು ಹೇಳಿದರು.
"ಮುಳುಗುವುದು ಹಠಾತ್ ಆಗಿ ಸಂಭವಿಸುತ್ತದೆ ಮತ್ತು ಇದು ಒಂದು ರೀತಿಯ ಮೌನ ಕೊಲೆಗಾರನಾಗಿದೆ. ಮುಳುಗುವಿಕೆಯು ಆಗಾಗ ಜನರನ್ನು ಬಲಿ ಪಡೆಯುತ್ತಲೇ ಇರುತ್ತದೆ. ಯಾರೋ ಮುಳುಗುತ್ತಿದ್ದಾರೆ ಎಂಬುದು ತಿಳಿಯುವಷ್ಟರಲ್ಲಿ ತಡವಾಗಿರುತ್ತದೆ ಹಾಗೂ ಸಾವು ಸಂಭವಿಸುತ್ತದೆ. ಮುಳುಗುವವರನ್ನು ಕೆಲ ಸೆಕೆಂಡುಗಳಲ್ಲಿ ರಕ್ಷಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮುಳುಗುವಿಕೆ ತಡೆಯುವುದೇ ಇದಕ್ಕಿರುವ ಪರಿಹಾರ" ಎಂದು ಅವರು ಹೇಳಿದರು.
ಮೇಲ್ವಿಚಾರಣೆಯ ಕೊರತೆ, ಅಪಾಯಕಾರಿ ಜಲಮೂಲಗಳಿಗೆ ಇಳಿಯುವುದು, ಸಾಕಷ್ಟು ಜಾಗೃತಿ ಇಲ್ಲದ ಕಾರಣಗಳಿಂದ ಮತ್ತು ಬಡತನದಿಂದಾಗಿ ಬಹುತೇಕ ಮುಳುಗುವಿಕೆಯ ಘಟನೆಗಳು ನಮ್ಮ ಮನೆಗಳ ಹತ್ತಿರವೇ ನಡೆಯುತ್ತಿರುತ್ತವೆ ಎಂದು ವಾಜೆದ್ ತಿಳಿಸಿದರು. ಈ ಸಮಸ್ಯೆಯ ಪರಿಹಾರಕ್ಕಾಗಿ ರೂಪಿಸಲಾಗಿರುವ ಮಾರ್ಗಸೂಚಿಗಳನ್ನು ಪಾಲಿಸುವುದು ಅಗತ್ಯವಾಗಿದೆ. ಮುಳುಗುವಿಕೆಯ ಪ್ರಕರಣಗಳನ್ನು ತಡೆಗಟ್ಟಲು ವಿಶ್ವ ಆರೋಗ್ಯ ಸಂಸ್ಥೆ ಕೂಡ ಪುರಾವೆ ಆಧಾರಿತ, ಕಡಿಮೆ ವೆಚ್ಚದ ಮತ್ತು ನಿರ್ವಹಿಸಬಹುದಾದ ತಂತ್ರಗಳನ್ನು ರೂಪಿಸಿದೆ. ಇವನ್ನು ವಿಭಿನ್ನ ಸಂದರ್ಭಗಳಿಗೆ ಅನುಗುಣವಾಗಿ ರೂಪಿಸಲಾಗಿದೆ ಎಂದು ಅವರು ಹೇಳಿದರು.
"ಮುಳುಗುವಿಕೆಯನ್ನು ತಡೆಗಟ್ಟುವಲ್ಲಿ ನಮ್ಮೆಲ್ಲರ ಪಾತ್ರ ಮುಖ್ಯವಾಗಿದೆ. ಜಾಗೃತಿ ಮೂಡಿಸುವ ಮೂಲಕ, ಜ್ಞಾನವನ್ನು ಪ್ರಚಾರ ಮಾಡುವ ಮೂಲಕ, ಸ್ಥಳೀಯ ಅಥವಾ ರಾಷ್ಟ್ರೀಯ ಸರ್ಕಾರಗಳೊಂದಿಗೆ ಮುಳುಗುವಿಕೆ ತಡೆಗಟ್ಟುವ ಯೋಜನೆಗಳು ಮತ್ತು ನೀತಿಗಳಲ್ಲಿ ಸಹಕರಿಸುವ ಮೂಲಕ, ಸಂಬಂಧಿತ ಸಂಸ್ಥೆಗಳೊಂದಿಗೆ ಸ್ವಯಂಸೇವಕರಾಗಿ ಅಥವಾ ನೀರಿನ ಸುತ್ತಲೂ ವೈಯಕ್ತಿಕ ಮತ್ತು ಕುಟುಂಬ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ಮುಳುಗುವಿಕೆಯ ಸಾವುಗಳನ್ನು ತಡೆಗಟ್ಟಲು ಕೊಡುಗೆ ನೀಡಬಹುದು" ಎಂದು ಅವರು ನುಡಿದರು.
ಇದನ್ನೂ ಓದಿ : ಶಿರಡಿ ಸಾಯಿಬಾಬಾ ಮಂದಿರಕ್ಕೆ ₹6.25 ಕೋಟಿ ದೇಣಿಗೆ ನೀಡಿದ ಭಕ್ತ! - shirdi sai babas donation