ಸಿನಿಮಾ ಜನಜೀವನದ ಅವಿಭಾಜ್ಯ ಅಂಗ. ನಮ್ಮೆಲ್ಲರ ಬದುಕಿನ ಮಹತ್ವದ ಮಾಧ್ಯಮ ಎಂದೂ ಹೇಳಬಹುದು. ಸಿನಿಮಾ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡುತ್ತದೆ. ಈ ಮೂಲಕ ಪ್ರೇಕ್ಷಕ ಪ್ರಭುವಿನ ಎದೆಯಾಳದಲ್ಲಿ ಕಲಾವಿದರು ಕೂಡಾ ಆಶ್ರಯ ಪಡೆಯುತ್ತಾರೆ.
ಅದರಂತೆ, ಸ್ಯಾಂಡಲ್ವುಡ್ನ ನೆಚ್ಚಿನ ಸೂಪರ್‌ಸ್ಟಾರ್ಸ್ ಮುಖ್ಯಭೂಮಿಕೆಯ ಮುಂದಿನ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನೀರೀಕ್ಷೆಗಳಿರುತ್ತವೆ. ಆದ್ರೆ, 2024ರಲ್ಲಿ ಕೆಲವು ಸೂಪರ್ ಸ್ಟಾರ್ಗಳ ಒಂದೇ ಒಂದು ಸಿನಿಮಾ ಕೂಡಾ ಬೆಳ್ಳಿತೆರೆಗೆ ಬರಲೇ ಇಲ್ಲ. ಇದು ಸಿನಿಪ್ರಿಯರಲ್ಲಿ ಬೇಸರ, ಅಸಮಾಧಾನ ಮೂಡಿಸಿದೆ. ಆದರೆ, ಮುಂದಿನ ದಿನಗಳಲ್ಲಿ ತಮ್ಮ ನೆಚ್ಚಿನ ನಟರು ದೊಡ್ಡದೇನೋ ಕೊಡಲು ಸಜ್ಜಾಗುತ್ತಿದ್ದಾರೆ ಎಂಬುದನ್ನೂ ಅವರು ಅರಿತುಕೊಳ್ಳಬೇಕು.
ರಾಕಿಂಗ್ ಸ್ಟಾರ್ ಯಶ್: ಈ ಪ್ರತಿಭೆಯ ಬಗ್ಗೆ ವಿಶೇಷ ಪರಿಚಯ ಬೇಕೆನಿಸದು. ದೇಶದ ಮೂಲೆಮೂಲೆಗಳಲ್ಲೂ ಅಭಿಮಾನಿ ಬಳಗ ಹೊಂದಿರುವ ಸ್ವಯಂನಿರ್ಮಿತ ನಟ ಇವರು. ಮಾಡಿದ್ದು 18 ಚಿತ್ರಗಳಾದ್ರೂ ಜನಪ್ರಿಯತೆ ಅದರ ಸಾವಿರ ಪಟ್ಟು ಹೆಚ್ಚು. ಯಶ್ 19 ಅಥವಾ 'ಟಾಕ್ಸಿಕ್' ಎಂಬ ಬಿಗ್ ಪ್ರಾಜೆಕ್ಟ್ ನಿರ್ಮಾಣ ಹಂತದಲ್ಲಿದೆ. 2025ರ ಏಪ್ರಿಲ್ನಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡದ್ದು.
'ಟಾಕ್ಸಿಕ್' ಕಳೆದ ಡಿಸೆಂಬರ್ನಲ್ಲೇ ಅಧಿಕೃತವಾಗಿ ಘೋಷಣೆಯಾಗಿತ್ತು. ಆದರೆ, 2023ರಲ್ಲೂ ಯಶ್ ಅವರ ಯಾವುದೇ ಸಿನಿಮಾ ತೆರೆಮೇಲೆ ಅಬ್ಬರಿಸಲಿಲ್ಲ. ಈ ಬಗ್ಗೆ ಅಭಿಮಾನಿಗಳಲ್ಲಿ ನೋವಿದೆ. 'ಕೆಜಿಎಫ್ ಚಾಪ್ಟರ್ 2' ಎಂಬ ಅದ್ಭುತ ಚಿತ್ರ 2022ರ ಏಪ್ರಿಲ್ 14ರಂದು ತೆರೆಗಪ್ಪಳಿಸಿ ಅಭೂತಪೂರ್ವ ಯಶಸ್ಸು ಕಂಡಿತ್ತು. ಅದಕ್ಕೂ ಮುನ್ನ ಬಂದ 'ಕೆಜಿಎಫ್ 1' 2018ರ ಡಿಸೆಂಬರ್ 21ರಂದು ಚಿತ್ರಮಂದಿರ ಪ್ರವೇಶಿಸಿ ಹಿಟ್ ಆಗಿತ್ತು. ಕಳೆದ 8 ವರ್ಷಗಳಲ್ಲಿ ಯಶ್ ಅಭಿನಯದಿಂದ ಮೂಡಿಬಂದಿದ್ದು ಕೇವಲ 2 ಸಿನಿಮಾ!. ಆದರೆ ಅವರು ಅಭಿಮಾನಿಗಳಿಂದ ಗಳಿಸಿದ ಪ್ರೀತಿ, ವಿಶ್ವಾಸ, ಹೆಸರು, ಜನಪ್ರಿಯತೆಯನ್ನು ಲೆಕ್ಕ ಹಾಕಿ ಹೇಳಲು ಸಾಧ್ಯವಾಗದು. ತಮ್ಮ ಕೆಜಿಎಫ್ ಎಂಬ ಸರಣಿ ಸಿನಿಮಾಗಳು ತಂದುಕೊಟ್ಟ ಯಶಸ್ಸನ್ನು ಆಧರಿಸಿ ಮುಂದಿನ ಪ್ರಾಜೆಕ್ಟ್ ದೊಡ್ಡ ಮಟ್ಟದಲ್ಲೇ ನಿರ್ಮಾಣಗೊಳ್ಳುತ್ತಿದೆ. ಈ ಬಹುನಿರೀಕ್ಷಿತ ಚಿತ್ರ 2025ರ ಏಪ್ರಿಲ್ 10ರಂದು ಅದ್ಧೂರಿಯಾಗಿ ತೆರೆಗಪ್ಪಳಿಸಲಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್: ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟ ದರ್ಶನ್ ಮುಖ್ಯಭೂಮಿಕೆಯ 'ಕಾಟೇರ' ಸಿನಿಮಾ 2023ರ ಡಿಸೆಂಬರ್ 29ರಂದು ಚಿತ್ರಮಂದಿರಗಳನ್ನು ಪ್ರವೇಶಿಸಿ ಭರ್ಜರಿ ಪ್ರದರ್ಶನ ಕಂಡಿತ್ತು. ಸಿನಿಮಾ ಯಶ ಕಂಡ ಹಿನ್ನೆಲೆಯಲ್ಲಿ ಚಿತ್ರತಂಡ ಸಕ್ಸಸ್ ಪಾರ್ಟಿಯನ್ನೂ ಆಯೋಜಿಸಿತ್ತು. ಈ ವರ್ಷದ ಕ್ರಿಸ್ಮಸ್ನಲ್ಲಿ 'ಡೆವಿಲ್' ಬಿಡುಗಡೆಗೊಳಿಸಲು ಚಿತ್ರತಂಡ ಯೋಜಿಸಿತ್ತು. ಆದ್ರೆ ನಡೆದಿದ್ದೇ ಬೇರೆ.
ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ಸಿಲುಕಿರುವ ಕಾರಣ 'ಡೆವಿಲ್' ಚಿತ್ರೀಕರಣ ಪೂರ್ಣಗೊಂಡಿಲ್ಲ. ಮುಂದಿನ ಬಿಡುಗಡೆ ದಿನಾಂಕ ಚಿತ್ರತಂಡದಿಂದ ಇನ್ನಷ್ಟೇ ಘೋಷಣೆಯಾಗಬೇಕಿದೆ. ಈ ವರ್ಷ ಸಿನಿಮಾ ಬರಲಿಲ್ಲವೆಂಬ ಬೇಸರದಲ್ಲಿ ಅಪಾರ ಸಂಖ್ಯೆಯ 'ಡಿ ಬಾಸ್' ಅಭಿಮಾನಿಗಳಿದ್ದಾರೆ. ದರ್ಶನ್ ಹಾಗೂ ಪ್ರಕಾಶ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ 'ಡೆವಿಲ್' ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಗಳವೆ.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ: ಕನ್ನಡ ಚಿತ್ರರಂಗಕ್ಕೆ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ತಂದುಕೊಟ್ಟ ಸಿನಿಮಾ 'ಕಾಂತಾರ'. ಬ್ಲಾಕ್ಬಸ್ಟರ್ ಚಿತ್ರದ ಸಾರಥಿ ರಿಷಬ್ ಶೆಟ್ಟಿ ತಮ್ಮ ಅಮೋಘ ಅಭಿನಯ ಮತ್ತು ಕಥೆ ರವಾನಿಸಿದ ರೀತಿಯಿಂದಾಗಿ ಡಿವೈನ್ ಸ್ಟಾರ್ ಎಂದೇ ಜನಪ್ರಿಯರಾದರು. ಒಂದೊಳ್ಳೆ ಕಥೆ ಕಲಾವಿದರ ಜನಪ್ರಿಯತೆಯನ್ನು ನೂರ್ಮಡಿ ಹೆಚ್ಚಿಸುತ್ತದೆ ಎಂಬುದಕ್ಕೆ ಕಾಂತಾರ ಜ್ವಲಂತ ಸಾಕ್ಷಿ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ಈ ಚಿತ್ರ 2022ರ ಸೆಪ್ಟೆಂಬರ್ 30ರಂದು ತೆರೆಕಂಡು ಅಭೂತಪೂರ್ವ ಯಶಸ್ಸು ಕಂಡಿತ್ತು. ಪ್ಯಾನ್ ಇಂಡಿಯಾ ಸಿನಿಮಾಗಳು ಟ್ರೆಂಡ್ನಲ್ಲಿರುವ ಸಂದರ್ಭದಲ್ಲಿ ಕನ್ನಡದಲ್ಲಿ ಮೂಡಿಬಂದ ಈ ಚಿತ್ರ ತನ್ನ ಯಶಸ್ಸಿನಿಂದಾಗಿ ಕೆಲವೇ ದಿನಗಳಲ್ಲಿ ಬಹುಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಿತ್ತು. ಸಿನಿಪ್ರಿಯರು, ಕನ್ನಡಿಗರು ಮಾತ್ರವಲ್ಲ, ದೇಶಾದ್ಯಂತದ ಸಿನಿಪ್ರಿಯರು ಮತ್ತು ಚಿತ್ರರಂಗದ ಗಣ್ಯಾತಿಗಣ್ಯರು 'ಕಾಂತಾರ'ವೆಂಬ ಸಿನಿಮಾಗೆ ಪ್ರಶಂಸೆಯ ಮಳೆಗೈದರು.
2023ರಲ್ಲಿ ಅಭಿಮಾನಿಗಳು ಶೆಟ್ರ ಹೊಸ ಸಿನಿಮಾ ನಿರೀಕ್ಷಿಸಿದ್ದರು. ಆದ್ರೆ, ಕಾಂತಾರದ ಯಶಸ್ಸು ಜವಾಬ್ದಾರಿ ಹೆಚ್ಚಿಸಿದ ಕಾರಣ ಮುಂದಿನ ಸಿನಿಮಾ ಮತ್ತಷ್ಟು ಶ್ರೇಷ್ಠವಾಗಿರಬೇಕು ಎಂದುಕೊಂಡ್ರು ಶೆಟ್ರು. ಹಾಗಾಗಿ, 'ಕಾಂತಾರ ಚಾಪ್ಟರ್ 1'ರ ಕೆಲಸ ಭರದಿಂದ ಸಾಗುತ್ತಿದೆ. ಬಹುನಿರೀಕ್ಷಿತ ಸಿನಿಮಾ ವಿಶ್ವದಾದ್ಯಂತ 2025ರ ಅಕ್ಟೋಬರ್ 2ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ. ಈ ಸಾಲಿನಲ್ಲಿ ಶೆಟ್ರ ಸಿನಿಮಾ ಬಿಡುಗಡೆ ಆಗದಿರುವ ಬಗ್ಗೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ರಿಷಬ್ ಮತ್ತು ಹೊಂಬಾಳೆ ಫಿಲ್ಮ್ಸ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಕಾಂತಾರ ಪ್ರೀಕ್ವೆಲ್ ಮುಂದಿನ ವರ್ಷ ಅಭಿಮಾನಿಗಳಿಗೆ ಅದ್ಭುತ ಸಿನಿ ಅನುಭವ ನೀಡುವ ಎಲ್ಲಾ ಸುಳಿವು ಸಿಕ್ಕಿದೆ.
ರಕ್ಷಿತ್ ಶೆಟ್ಟಿ: ಸ್ಯಾಂಡಲ್ವುಡ್ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈಗಾಗಲೇ ಹಲವು ಯಶಸ್ವಿ ಸಿನಿಮಾಗಳನ್ನು ಮನರಂಜನಾ ಕ್ಷೇತ್ರಕ್ಕೆ ಕೊಟ್ಟವರು. ಕಳೆದ ವರ್ಷದ ಕೊನೆಯಲ್ಲಿ ತೆರೆಕಂಡ 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ' ಮತ್ತು ಸೈಡ್ ಬಿ ಸಿನಿಮಾಗಳು ಸೂಪರ್ ಹಿಟ್ ಆದವು. ಹೇಮಂತ್ ಎಂ.ರಾವ್ ನಿರ್ದೇಶನದ ಈ ಎರಡು ಸಿನಿಮಾಗಳು ಕೆಲವೇ ದಿನಗಳ ಅಂತರದಲ್ಲಿ ತೆರೆಕಂಡು ಪ್ರೇಕ್ಷಕರ ಮನಸ್ಸು ಗೆದ್ದವು. ಮನು ಪ್ರಿಯಾಳ ಅದ್ಭುತ ಪ್ರೇಮಕಥೆ ಸಿನಿಪ್ರಿಯರನ್ನು ಮೋಡಿ ಮಾಡಿತು. ಬಾಕ್ಸ್ ಆಫೀಸ್ನಲ್ಲೂ ಕಮಾಲ್ ಮಾಡಿತು.
ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳು ಬಂತಾದರೂ ಈ ವರ್ಷ ರಕ್ಷಿತ್ ನಟನೆಯ ಯಾವ ಸಿನಿಮಾ ಕೂಡಾ ಬಿಡುಗಡೆಯಾಗಿಲ್ಲ. ಈ ಬೇಸರ ಅಭಿಮಾನಿಗಳಲ್ಲಿದೆ. ಆದ್ರೆ ರಕ್ಷಿತ್ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರ ಯಶಸ್ವಿಯಾಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವ 'ರಿಚರ್ಡ್ ಆಂಟನಿ' ಚಿತ್ರ ಬರುವ ವರ್ಷ ತೆರೆಕಾಣುವ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾಗೆ ಶೆಟ್ರು ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂದು ಈ ಹಿಂದೆಯೇ ಹೊಂಬಾಳೆ ಫಿಲ್ಮ್ಸ್ ಘೋಷಿಸಿತ್ತು.
ಇದನ್ನೂ ಓದಿ: 'ದೇಹಕ್ಕೆ ಆರೋಗ್ಯ ಇದ್ದಾಗ ಪ್ರೀತಿ, ಅನಾರೋಗ್ಯಗೊಂಡಾಗ ಕೋಪ; ಇದು ದೇಶಕ್ಕೂ ಅನ್ವಯ': ಉಪೇಂದ್ರ
ಕಿಚ್ಚ, ಉಪ್ಪಿ: ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ಅವರ ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆಯ ಹೊಸ್ತಿಲಲ್ಲಿದೆ. ಆದ್ರೆ ಅವರ ಕೊನೆ ಸಿನಿಮಾಗಳು ತೆರೆಕಂಡು ಹಲವು ತಿಂಗಳುಗಳೇ ಕಳೆದಿವೆ. ಉಪೇಂದ್ರ ಸಾರಥ್ಯದ 'ಯು ಐ' ಡಿಸೆಂಬರ್ 20ರಂದು ಮತ್ತು ಸುದೀಪ್ ಮುಖ್ಯಭೂಮಿಕೆಯ 'ಮ್ಯಾಕ್ಸ್' ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿವೆ.
ಇದನ್ನೂ ಓದಿ: ಪೌರಾಣಿಕ ಚಿತ್ರಗಳೆಡೆ ಚಿತ್ರರಂಗದ ಗಮನ: ರಿಷಬ್ ಶೆಟ್ಟಿ 'ಜೈ ಹನುಮಾನ್' ಮೇಲಿದೆ ಬೆಟ್ಟದಷ್ಟು ನಿರೀಕ್ಷೆಗಳು
ಉಪೇಂದ್ರ ಅವರ ಕೊನೆ 'ಕಬ್ಜ' 2023ರ ಮಾರ್ಚ್ 17ರಂದು ಬಿಡುಗಡೆಯಾಗಿತ್ತು. ಸುದೀಪ್ ಅವರ ಕೊನೆ ಸಿನಿಮಾ 'ಕಬ್ಜ' ಸಿನಿಮಾ ಕಳೆದ ವರ್ಷಾರಂಭ ಮತ್ತು 2022ರಲ್ಲಿ 'ವಿಕ್ರಾಂತ್ ರೋಣ' ಮತ್ತು 'ರವಿ ಬೋಪಣ್ಣ' ಬಿಡುಗಡೆ ಆಗಿತ್ತು. ಎರಡೂ ಅತಿಥಿ ಪಾತ್ರಗಳಾದರೆ, ಮುಖ್ಯಭೂಮಿಕೆಯ 'ವಿಕ್ರಾಂತ್ ರೋಣ' ಬಂದು ಸುಮಾರು ಎರಡು ವರ್ಷಗಳಾಗಿವೆ. 2024ರ ಸಂಪೂರ್ಣ ವರ್ಷ ಸಿನಿಮಾ ಕೊಡದಿದ್ದರೂ, ಕೊನೆಯಲ್ಲಿ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಲು ಸಜ್ಜಾಗಿದ್ದಾರೆ.