ಬೆಂಗಳೂರು: ಬಹು ನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ನ (ಡಬ್ಲ್ಯುಪಿಎಲ್) ಎರಡನೇ ಆವೃತ್ತಿಗೆ ಚಾಲನೆ ಸಿಕ್ಕಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರದಂದು ಡಬ್ಲ್ಯುಪಿಎಲ್ 2024ರ ಉದ್ಘಾಟನಾ ಸಮಾರಂಭ ನಡೆದಿದ್ದು, ಇದೊಂದು ಸ್ಟಾರ್ ಸ್ಟಡ್ ಈವೆಂಟ್ ಆಗಿತ್ತು.
ಇಂಡಿಯನ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರು ಅದ್ಧೂರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪವರ್ - ಪ್ಯಾಕ್ಡ್ ಪರ್ಫಾಮೆನ್ಸ್ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಜೊತೆಗೆ, "ನಾರಿ-ಶಕ್ತಿ" ಕುರಿತು ಸುದೀರ್ಘವಾಗಿ ಮಾತನಾಡಿದರು.
"ಮಹಿಳಾ ಪ್ರೀಮಿಯರ್ ಲೀಗ್ 2024ಕ್ಕೆ ಸುಸ್ವಾಗತ. ನಮ್ಮ ದೇಶವು ಶತಮಾನಗಳಿಂದಲೂ ನಾರಿ ಶಕ್ತಿಯನ್ನು ಅವಲಂಬಿಸಿದೆ. ಅದು ಭಾರತ ಮಾತೆ ಆಗಿರಲಿ ಅಥವಾ ಭೂಮಿ ತಾಯಿ, ಶಕ್ತಿ ಮಾ, ದೇವಿ ಮಾ ಅಥವಾ ನಮ್ಮ ಮನೆಯಲ್ಲಿರುವ ಪ್ರೀತಿಯ ತಾಯಿಯೇ ಆಗಿರಲಿ, ನಾವು ಅವರನ್ನು ಅವಲಂಬಿಸಿದ್ದೇವೆ. ಮಹಿಳೆಯರು ಸಿಇಒ ಆಗಿ ಕಂಪನಿಗಳನ್ನು ನಡೆಸುತ್ತಿದ್ದಾರೆ. ಮನೆಗಳನ್ನು ನಡೆಸುತ್ತಿದ್ದಾರೆ ಮತ್ತು ಮಕ್ಕಳನ್ನು ಪೋಷಿಸುತ್ತಿದ್ದಾರೆ. ಒಟ್ಟಾರೆ ಮಹಿಳೆಯರು ಆಳ್ವಿಕೆ ನಡೆಸುತ್ತಿದ್ದಾರೆ'' ಎಂದು ನಟ ಶಾರುಖ್ ಖಾನ್ ಹೇಳಿದ್ದಾರೆ
ಸವಾಲುಗಳನ್ನು ದಿಟ್ಟತನದಿಂದ ಎದುರಿಸುವ ಮಹಿಳೆಯರನ್ನು ಎಸ್‌ಆರ್‌ಕೆ ಇದೇ ವೇಳೆ ಶ್ಲಾಘಿಸಿದರು. ಜೊತೆಗೆ ಡಬ್ಲ್ಯೂಪಿಎಲ್ ತಂಡಗಳಿಗೆ ಶುಭ ಹಾರೈಸಿದರು. ಮಾತು ಮುಂದುವರಿಸಿ "ದೇಶ ಮಹಿಳಾ ಶಕ್ತಿಯ ಮೇಲೆ ಆಧಾರಿತವಾಗಿದೆ. ಯಾರೂ ಮಹಿಳೆಯರನ್ನು ತಡೆಯಲು ಸಾಧ್ಯವಿಲ್ಲ. ಅವರು ಎಲ್ಲ ಅಡೆತಡೆಗಳನ್ನು ಮುರಿದು ಮುನ್ನುಗ್ಗಲಿದ್ದಾರೆ. ಪ್ರತೀ ಕ್ಷೇತ್ರದಲ್ಲೂ ಅದ್ಭುತ ಸಾಧನೆ ಮಾಡುತ್ತಿದ್ದರೆ, ಕ್ರೀಡೆಯಲ್ಲಿ ಏಕೆ ಮಾಡಬಾರದು?. ಮುಂದಿನ 30 ದಿನಗಳು ಕೇವಲ ಮಹಿಳೆಯರು ಮತ್ತು ಅವರ ಶಕ್ತಿ ವಿಚಾರ ಮಾತ್ರ ಸದ್ದು ಮಾಡೋದಿಲ್ಲ, ಅಥವಾ ಇದು ಕ್ರಿಕೆಟ್ ಮತ್ತು ಕ್ರೀಡೆಯ ಒಳಿತಿನ ಬಗ್ಗೆ ಮಾತ್ರ ಹೇಳೋದಿಲ್ಲ, ಇದು ತಮಗಾಗಿ ಒಂದು ಸ್ಥಾನ ಗಿಟ್ಟಿಸಿಕೊಳ್ಳಲು ಮಹಿಳೆಯರ ಪ್ರಯತ್ನ, ಬೆಳವಣಿಗೆಯ ಬಗ್ಗೆಯೂ ತಿಳಿಸಲಿದೆ. ಕ್ವೀನ್‌ಡಮ್‌ನಲ್ಲಿ ರಾಣಿಯರ ಉದಯ'' ಎಂದರು.
ಇದನ್ನೂ ಓದಿ: 250 ಕೆಜಿ ತೂಕದ ಚಾಲೋಲೇಟ್ನಲ್ಲಿ ದರ್ಶನ್ ಪ್ರತಿಮೆ: ಫಿದಾ ಆದ ಚಾಲೆಂಜಿಂಗ್ ಸ್ಟಾರ್
'ಡಾನ್' ನಟ ಕಂಪ್ಲೀಟ್ ಬ್ಲ್ಯಾಕ್ ವೇರ್ನಲ್ಲಿ ಕಾಣಿಸಿಕೊಂಡರು. ಬ್ಲ್ಯಾಕ್ ಡೀಪ್-ನೆಕ್ ಶರ್ಟ್‌ನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದರು. 58ರ ಹರೆಯದಲ್ಲೂ ಎಸ್‌ಆರ್‌ಕೆ ಎನರ್ಜಿ ನೋಡಿದ ಯುವಕರು, ನಟನನ್ನು ಕೊಂಡಾಡಿದರು. ಕ್ರಿಕೆಟ್ ಉದ್ಘಾಟನಾ ಸಮಾರಂಭದಿಂದ ಎಸ್‌ಆರ್‌ಕೆ ಅವರ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಶಾರುಖ್ ಮಾತ್ರವಲ್ಲದೇ ಕಾರ್ತಿಕ್ ಆರ್ಯನ್, ಶಾಹಿದ್ ಕಪೂರ್, ವರುಣ್ ಧವನ್, ಟೈಗರ್ ಶ್ರಾಫ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಸಹ ಉದ್ಘಾಟನಾ ಸಮಾರಂಭದಲ್ಲಿ ಪರ್ಫಾಮ್ ಮಾಡಿದ್ದಾರೆ. ಈ ಮಹಿಳಾ ಕ್ರಿಕೆಟ್ ಪಂದ್ಯಾವಳಿಯು ಮಾರ್ಚ್ 17ರವರೆಗೆ ಬೆಂಗಳೂರು ಮತ್ತು ದೆಹಲಿಯಲ್ಲಿ ನಡೆಯಲಿದೆ.
ಇದನ್ನೂ ಓದಿ: 12th Fail ನಟನ ಬಗ್ಗೆ ನಿಮಗೆಷ್ಟು ಗೊತ್ತು? ತಾಯಿ ಸಿಖ್, ತಂದೆ ಕ್ರಿಶ್ಚಿಯನ್, ಸಹೋದರ ಮುಸ್ಲಿಂ, ಪತ್ನಿ ಹಿಂದೂ!!