ಹೈದರಾಬಾದ್: 600 ಕೋಟಿಗಳ ಅದ್ದೂರಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ, ನಟ ಪ್ರಭಾಸ್ ನಟನೆಯ ಕಲ್ಕಿ 2898 AD ಸೂಪರ್ ಬ್ಲಾಕ್‌ಬಸ್ಟರ್ ಆಗಿ ಜಗತ್ತಿನಾದ್ಯಂತ ಅಬ್ಬರಿಸಿದೆ. ಗಲ್ಲಾಪೆಟ್ಟಿಗೆಯನ್ನೇ ದಿಗ್ಭ್ರಮೆಗೊಳಿಸುವ ಕಲೆಕ್ಷನ್‌ಗಳನ್ನು ಸಂಗ್ರಹಿಸಿದೆ. ಪ್ರೀತಿಯಿಂದ ರೆಬೆಲ್ ಸ್ಟಾರ್ ಎಂದೆ ಕರೆಯಲ್ಪಡುವ ಪ್ರಭಾಸ್ ಅವರು ತಮ್ಮ ಜಾಗತಿಕ ಅಭಿಮಾನಿಗಳ ಪ್ರೋತ್ಸಾಹಕ್ಕೆ ಆಳವಾದ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಹಿನ್ನೆಲೆ ವಿಡಿಯೋ ಮಾಡಿರುವ ಪ್ರಭಾಸ್ ತಮ್ಮ ಯಶಸ್ಸಿಗೆ ಅಭಿಮಾನಿಗಳು ಮತ್ತು ಕಲ್ಕಿ 2898 ರ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
"ನಾವು ನಿರ್ಮಾಪಕರಿಗೆ ಧನ್ಯವಾದ ಹೇಳಬೇಕು ಎಂದು ನಾನು ಭಾವಿಸುತ್ತೇನೆ. ಸಿನಿಮಾಗಾಗಿ ಮಾಡಿದ್ದ ಖರ್ಚು ನೋಡಿ ನಾವೆಲ್ಲರೂ ಚಿಂತಿತರಾಗಿದ್ದೆವು. ಮತ್ತು ನಿರ್ಮಾಪಕರಿಗೆ ಕೇಳುತ್ತಿದ್ದೆ, ನೀವು ತುಂಬಾ ಖರ್ಚು ಮಾಡುತ್ತಿದ್ದೀರಿ ಎಂದು. ಆಗ ಅವರು ಇಲ್ಲ, ದೊಡ್ಡ ಹಿಟ್‌ಗಳನ್ನು ಕೊಡುತ್ತಿದ್ದೇವೆ. ಚಿಂತೆ ಬೇಡ ಎಂದಿದ್ದರು. ಈ ಮೂಲಕ ಭಾರತೀಯ ಚಿತ್ರರಂಗದ ದಿಗ್ಗಜರಾದ ಅಮಿತಾಭ್ ಬಚ್ಚನ್ ಮತ್ತು ಕಮಲ್ ಸರ್ ಜೊತೆ ಕೆಲಸ ಮಾಡಲು ಅವಕಾಶ ನೀಡಿದ ನಿರ್ಮಾಪಕರಿಗೆ ಮತ್ತು ನಾಗ್ ಅಶ್ವಿನ್ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಾವೆಲ್ಲರೂ ನಿಮ್ಮನ್ನು ನೋಡುತ್ತಾ ಬೆಳೆದಿದ್ದೇವೆ ಮತ್ತು ನಿಮ್ಮಿಂದ ಸಾಕಷ್ಟು ಕಲಿತಿದ್ದೇವೆ" ಎಂದು ಪ್ರಭಾಸ್ ಹೇಳಿದ್ದಾರೆ.
ಅಭಿಮಾನಿಗಳಿಗೆ ಭೈರವನ ಸ್ಪೆಷಲ್ ಥ್ಯಾಂಕ್ಸ್: " ನನ್ನ ಅಭಿಮಾನಿಗಳು, ನನಗೆ ಇಷ್ಟು ದೊಡ್ಡ ಹಿಟ್ ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು. ಧನ್ಯವಾದಗಳು, ಧನ್ಯವಾದಗಳು, ಧನ್ಯವಾದಗಳು, ಧನ್ಯವಾದಗಳು, ತುಂಬಾ ಧನ್ಯವಾದಗಳು. ನೀವು ಇಲ್ಲದೇ ನಾನು ಶೂನ್ಯ. ನಾಗ್ ಅಶ್ವಿನ್ ಅವರಿಗೆ ಧನ್ಯವಾದಗಳು, ಅವರು ನಿಜವಾಗಿಯೂ 5 ವರ್ಷಗಳ ಕಾಲ ಇಷ್ಟು ದೊಡ್ಡ ಚಿತ್ರವನ್ನು ನಿರ್ಮಿಸಲು ಶ್ರಮಿಸಿದ್ದಾರೆ" ಎಂದು ನಟ ಪ್ರಭಾಸ್ ಸಾರ್ಥಕ ಭಾವನೆಯಿಂದ ಕೃತಜ್ಞತೆ ಸಲ್ಲಿಸಿದ್ದಾರೆ.
ದೀಪಿಕಾ ಪಡುಕೋಣೆಯನ್ನು "ಮೋಸ್ಟ್ ಗಾರ್ಜಿಯಸ್ ವುಮನ್" ಎಂದು ಬಣ್ಣಿಸುತ್ತಾ ಪ್ರಭಾಸ್ ಮುಂಬರುವ ಭಾಗ 2 ಬಗ್ಗೆ ಹೇಳುತ್ತಾ ತನ್ನ ಸಹ ನಟ-ನಟಿಯರನ್ನು ಹೊಗಳಿದ್ದಾರೆ. ಕೊನೆಗೆ ನನ್ನ ಅಭಿಮಾನಿಗಳಿಗೆ ಧನ್ಯವಾದಗಳು. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ" ಎಂದು ಅಭಿಮಾನಿಗಳಿಗೆ ಮನಃಪೂರ್ವಕ ಸಂದೇಶದೊಂದಿಗೆ ವಿಡಿಯೋ ಮುಕ್ತಾಯಗೊಳಿಸಿದ್ದಾರೆ.
ಇನ್ನು ಸಿನಿಮಾವು ವೈಜಯಂತಿ ಮೂವೀಸ್‌ನ ಗೌರವಾನ್ವಿತ ಬ್ಯಾನರ್ ಅಡಿ ನಿರ್ಮಿಸಲಾಗಿದೆ. ಮಹಾಭಾರತದಿಂದ ಸ್ಫೂರ್ತಿ ಪಡೆದ ಕಲ್ಕಿ 2898 AD ಒಂದು ಡಿಸ್ಟೋಪಿಯನ್ ಭವಿಷ್ಯದಲ್ಲಿ ತೆರೆದುಕೊಳ್ಳುತ್ತದೆ ಮತ್ತು ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮತ್ತು ಪ್ರಭಾಸ್ ನಟಿಸಿರುವ ಬಲವಾದ ಪಾತ್ರಗಳ ನಡುವೆ ಕಥೆ ಸುತ್ತುತ್ತದೆ.
ಅದ್ಭುತ ಕಥಾಹಂದರ ಮತ್ತು ಭರ್ಜರಿ ಪ್ರದರ್ಶನಗಳೊಂದಿಗೆ, ಕಲ್ಕಿ 2898 AD ಭಾರತದಲ್ಲಿ 550 ಕೋಟಿ ರೂಪಾಯಿಗಳನ್ನು ಗಳಿಸಿದೆ. ಜೂನ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗಿನಿಂದ ಚಿತ್ರವು ವಿಶ್ವದಾದ್ಯಂತ 1000 ಕೋಟಿ ರೂಪಾಯಿಗಳ ಗಡಿ ದಾಟಿದೆ.
ಇದನ್ನೂ ಓದಿ: ₹1,000 ಕೋಟಿಯತ್ತ 'ಕಲ್ಕಿ': ಅಧಿಕೃತ ಘೋಷಣೆ ನಿರೀಕ್ಷೆ - Kalki Collection