ತುಕಾಲಿ ಸಂತೋಷ್. ಈ ಹೆಸರು ಕೇಳಿದರೆ ಸಾಕು ಮೊಗದಲ್ಲಿ ನಗು ಮೂಡುತ್ತದೆ. ಬಿಗ್ ಬಾಸ್ ಸೀಸನ್ 10ರ ಅಂತಿಮ ಹಂತಕ್ಕೆ ಇನ್ನೊಂದೇ ಹೆಜ್ಜೆ ಬಾಕಿ ಇರುವಾಗ ಸಂತೋಷವಾಗಿಯೇ ಮನೆಯಿಂದ ಹೊರಬಂದಿದ್ದಾರೆ. ಮನೆಯಲ್ಲಿ ಇದ್ದಷ್ಟೂ ದಿನ ಎಲ್ಲರನ್ನೂ ನಗಿಸುತ್ತಿದ್ದ ಇವರು, ನಗುವಿನೊಂದಿಗೆ ಬಿಗ್ ಬಾಸ್ ಪಯಣ ಮುಗಿಸಿದರು. ಈ ಸಂದರ್ಭದಲ್ಲಿ ಸಹ ಸ್ಪರ್ಧಿಗಳಿಗೆ ಶುಭ ಕೋರಿದ್ದಾರೆ.
'ಸಂತೋಷ'ದ ಪಯಣ: ಶನಿವಾರದ ಸಂಚಿಕೆಯಲ್ಲಿ ಮನೆಯಿಂದ ಎಲಿಮಿನೇಟ್ ಆಗಿರುವ ಸಂತೋಷ್ ಪಯಣ ಕಲರ್‌ಫುಲ್ ಆಗಿತ್ತು. "ಈ ಸಲ ಎಂಟರ್‌ಟೈನ್ಮೆಂಟ್ ಕಡಿಮೆ ಇದೆ" ಎಂಬ ಕೆಲವರ ಗೊಣಗಾಟಕ್ಕೆ ಉತ್ತರವಾಗಿ ಸಂತೋಷ್ ಮನೆಯೊಳಗಿದ್ದರು. ಅಗ್ರೆಶನ್‌ನಲ್ಲಿ ಆಡಲಾಗದ, ಸ್ಪೋರ್ಟ್ಸ್ ಹಿನ್ನೆಲೆಯೂ ಇಲ್ಲದ ಇವರು ಮನೆಯೊಳಗೆ ವಾರದಿಂದ ವಾರಕ್ಕೆ ತಮ್ಮ ಜಾಗವನ್ನು ವಿಸ್ತರಿಸುತ್ತಾ ಬಂದರು. ಬಿಗ್ ಮನೆಯಲ್ಲಿ ಜನ ಕಡಿಮೆಯಾಗುತ್ತಾ ಬಂದಷ್ಟೂ ಸಂತೋಷ್ ಪ್ರಭಾವ ಹೆಚ್ಚುತ್ತಲೇ ಹೋಯಿತು. ಎಲ್ಲರೊಳಗೆ ಒಂದಾಗುತ್ತಾ, ಎಲ್ಲರಿಗೂ 'ಪಿನ್' ಇಡುತ್ತಾ ತಮ್ಮ ಪಯಣ ಮುಂದುವರಿಸಿಕೊಂಡು ಬಂದಿರುವ ಸಂತೋಷ್ ಅವರ ಬಿಗ್ ಬಾಸ್ ಬದುಕಿನ ಕೆಲವು ಕುತೂಹಲದ ಘಟನೆಗಳು ಇಲ್ಲಿವೆ.
ಮಾತಿನಲ್ಲೇ ಮನೆ ಕಟ್ಟುವ ಮಲ್ಲ: ತುಕಾಲಿ ಸಂತೋಷ್ ಅವರು ಮೈಕಟ್ಟಿನಲ್ಲಂತೂ 'ಮಲ್ಲ'ನಲ್ಲ. ಆದರೆ ಮಾತಿಗೆ ನಿಂತರೆ ಮಲ್ಲರ ಮಲ್ಲ. ನೋಡನೋಡುತ್ತಿದ್ದ ಹಾಗೇ ಮಾತಲ್ಲೇ ಮಹಡಿ ಮೇಲೆ ಮಹಡಿ ಕಟ್ಟಿ ಅದರ ಮೇಲಿಂದ ಕಾಗೆ ಹಾರಿಸುವ ಅವರ ಪ್ರತಿಭೆ ಆರಂಭದ ಕೆಲ ದಿನಗಳಲ್ಲಿಯೇ ಮನೆಮಂದಿಗೆಲ್ಲಾ ಪರಿಚಯವಾಗಿತ್ತು. ನನ್ನ ತಾಯಿ ಗರ್ಭಿಣಿಯಾಗಿದ್ದಾಗ, ನಿನ್ನ ಹೊಟ್ಟೆಯಲ್ಲಿ ಮಹಾತ್ಮ ಹುಟ್ಟುತ್ತಾನೆಂದು ಹೇಳಿದ್ರಂತೆ ದೊಡ್ಡವರೊಬ್ಬರು. ನಾನು ಹುಟ್ಟುವಾಗ ಗುಡುಗು ಸಿಡಿಲು ಎಲ್ಲಾ ಇತ್ತು. ಮಳೆ ಬರುತ್ತಿತ್ತು. ಆಗ ನಾನು ಹುಟ್ಟಿದೆ ಎಂದು ತಮ್ಮ ಜನ್ಮವೃತ್ತಾಂತವನ್ನು ಹೇಳುತ್ತಾ ಹೋದ ಹಾಗೆ ಮನೆಯವರೆಲ್ಲರೂ ಬೆಕ್ಕಸ ಬೆರಗಾಗಿ ನೋಡುತ್ತಿದ್ದರು. ಅವರು ಕಾಗೆ ಹಾರಿಸುತ್ತಿದ್ದಾರೆ ಎಂದು ಗೊತ್ತಿದ್ದೂ ಅವರ ಮಾತುಗಳನ್ನು ಕೇಳಿಸಿಕೊಳ್ಳಲು ಬಿಗ್ ಬಾಸ್ ಮನೆಯ ಸದಸ್ಯರು ಕಾದು ಕುಳಿತದ್ದಂತೂ ಸುಳ್ಳಲ್ಲ.
ಆದರೆ ಆರಂಭಿಕ ಹಂತದಲ್ಲಿ ತುಕಾಲಿ ಅವರು ಮನೆ ಸದಸ್ಯರನ್ನು ನಗಿಸಲು ಅನುಸರಿದ ದಾರಿ ಟೀಕೆಗೂ ಒಳಗಾಗಿತ್ತು. ಅವರು ಪ್ರತಾಪ್ ಬಗ್ಗೆ ಆಡಿದ ಮಾತುಗಳು, ಮನೆಯ ಉಳಿದ ಸದಸ್ಯರ ಬಗ್ಗೆ ಆಡಿದ ಮಾತುಗಳ ಬಗ್ಗೆ ಕಿಚ್ಚ ಸುದೀಪ್ ವಾರಾಂತ್ಯದ ಎಪಿಸೋಡ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಭಾಗ್ಯಶ್ರೀ ಮತ್ತು ಸಿರಿ ಅವರನ್ನು ಮಿಮಿಕ್ ಮಾಡಿದ್ದಕ್ಕಾಗಿ ಸುದೀಪ್ ವಾರವಿಡೀ ತುಕಾಲಿ ಅವರ ಸೊಂಟಕ್ಕೆ ಹಗ್ಗ ಕಟ್ಟಿ ಅದರ ಎರಡೂ ಬದಿಗಳಲ್ಲಿ ಸಿರಿ ಮತ್ತು ಭಾಗ್ಯಶ್ರೀ ಇರುವ ಶಿಕ್ಷೆ ಕೊಟ್ಟಿದ್ದರು. ಇಂಥ ಶಿಕ್ಷೆಯನ್ನು ತುಕಾಲಿ ಕಾಮಿಡಿ ಸೃಷ್ಟಿಗೆ ಬಳಸಿಕೊಂಡರು ಅನ್ನುವುದು ಬೇರೆ ಮಾತು.
"ಅನ್ಯರನ್ನು ನೋಯಿಸಿ ಮತ್ಯಾರನ್ನೋ ನಗಿಸುವುದು ಹಾಸ್ಯನಟನ ಘನತೆಗೆ ತಕ್ಕುದಲ್ಲ" ಎಂಬ ಕಿಚ್ಚನ ಮಾತುಗಳನ್ನು ತುಕಾಲಿ ಗಂಭೀರವಾಗಿಯೇ ತೆಗೆದುಕೊಂಡರು. ಆದರೆ ಮನೆಯ ಸದಸ್ಯರು ಮಾತ್ರ "ಅವರು ಉಳಿದವರನ್ನು ನೋಯಿಸಿ ಹಾಸ್ಯ ಮಾಡುತ್ತಾರೆ" ಎಂದು ಆರೋಪಿಸುವುದನ್ನೂ ನಿಲ್ಲಿಸಲಿಲ್ಲ. ಇದರಿಂದ ತುಕಾಲಿ ಅವರು ಕೆಲಕಾಲ ಕುಗ್ಗಿ, ಮಾತನಾಡಲು ಹಿಂಜರಿಯುವಂತಾಯಿತು.
ಕ್ಯಾಪ್ಟನ್ ಕನಸು: ಮನೆಯ ಕ್ಯಾಪ್ಟನ್ ಆಗಬೇಕು ಎಂಬುದು ಈ ಸೀಸನ್ನಿನುದ್ದಕ್ಕೂ ತುಕಾಲಿ ಸಂತೋಷ್ ಕಂಡ ಕನಸು. ಮೊದಲ ವಾರ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸ್ನೇಹಿತ್ ಮತ್ತು ನಮ್ರತಾ ಅವರ ಜೊತೆಯಲ್ಲಿ ತುಕಾಲಿಯವರು ಕೂಡ ರೇಸ್‌ನಲ್ಲಿ ಇದ್ದರು. ತಿರುಗುವ ಚಕ್ರದ ಮೇಲೆ ಅತಿಹೆಚ್ಚು ಕಾಲ ನಿಲ್ಲುವ ಟಾಸ್ಕ್‌ನಲ್ಲಿ ಬರಿಗಾಲಿನಲ್ಲಿ ನಿಂತಿದ್ದ ತುಕಾಲಿಯವರು ಎಲ್ಲರಿಗಿಂತ ಮೊದಲೇ ಕೆಳಗಿಳಿದರು. ಮೊದಲ ವಾರದ ಸೋಲು ಕೊನೆಯ ಹಂತದವರೆಗೂ ಕಾಡಿತು. ಹಲವು ಬಾರಿ ಅವರು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಭಾಗವಹಿಸಿ ಚೆನ್ನಾಗಿ ಆಡಿ ಗೆಲುವಿನ ಹೊಸ್ತಿಲವರೆಗೂ ಹೋಗಿ ಬಂದಿದ್ದಾರೆ. ಆದರೆ ಗೆದ್ದು ಕ್ಯಾಪ್ಟನ್ ಆಗುವ ಕನಸು ಮಾತ್ರ ನನಸಾಗಿಲ್ಲ. ನಾಲ್ಕನೇ ವಾರದಲ್ಲಿ ಹಳ್ಳಿ ಮನೆ ಟಾಸ್ಕ್‌ನ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಅಂತಿಮ ಹಂತದವರೆಗೂ ಬಂದಿದ್ದರು. ಆಗ ಅವರು ಸಿರಿ ಮತ್ತು ವಿನಯ್ ಇಬ್ಬರಲ್ಲಿ ಒಬ್ಬರನ್ನು ಆರಿಸಿಕೊಳ್ಳಬೇಕಾಗಿತ್ತು. ಸಿರಿ ಅವರನ್ನು ಹೊರಗಿಟ್ಟು ವಿನಯ್ ಅವರನ್ನು ಆಯ್ದುಕೊಂಡರು. ವಿನಯ್ ವಿರುದ್ಧ ಸೋತರು. ಕೊನೆಗೂ ಸಂತೋಷ್ ಕ್ಯಾಪ್ಟನ್ ಆಗಲೇ ಇಲ್ಲ. ಆದರೆ ಅವರು ತಮ್ಮ ಆಸೆ ಬಿಡಲಿಲ್ಲ. ಕಳೆದ ವಾರ ನಡುರಾತ್ರಿ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ರೂಮ್ ಹೊಕ್ಕು ಬೆಡ್ ಮೇಲೆ ಎರಡು ನಿಮಿಷ ಮಲಗಿ ಖುಷಿಪಟ್ಟಿದ್ದರು.
ನಗುವಿನ ಜೊತೆ ಆಕ್ರೋಶ: ಸಂತೋಷ್ ಅವರ ಬಿಗ್ ಬಾಸ್ ಜರ್ನಿಯಲ್ಲಿ ನಗುವಿನ ಸಿಕ್ವೇಲ್‌ಗಳು ಸಾಕಷ್ಟಿವೆ. ಸದಾ ಎಲ್ಲರನ್ನೂ ನಗಿಸುತ್ತಾ ಇರುತ್ತೇನೆ ಎಂದು ಹೇಳುವ ಇವರು ಕೆಲ ಸಂದರ್ಭ ತಾಳ್ಮೆಗೆಟ್ಟಿದ್ದೂ ಇದೆ. ಆರಂಭಿಕ ವಾರದಲ್ಲಿ ತಮ್ಮ ಮೆಚ್ಚಿನ ಸ್ಪರ್ಧಿಯನ್ನು ನಾಮಿನೇಷನ್‌ನಿಂದ ಕಾಪಾಡುವ ಟಾಸ್ಕ್‌ನಲ್ಲಿ ಇಶಾನಿ ಜೊತೆಗೆ ಮಾತಿಗೆ ಮಾತು ಬೆಳೆದು ಅದು ದೊಡ್ಡ ಜಗಳವಾಗಿಬಿಟ್ಟಿತ್ತು. ಹಾಗೇ ಸಂಗೀತಾ ಜೊತೆಗೂ ಅವರಿಗೆ ಹಲವು ಬಾರಿ ಮಾತಿನ ಚಕಮಕಿ ನಡೆದಿದೆ. ಕಳೆದ ವಾರವಷ್ಟೇ ಟಾಸ್ಕ್ ವೋಟಿಂಗ್ ಸಂದರ್ಭದಲ್ಲಿ ವಿನಯ್ ಜೊತೆಗೆ ಜೋರಾಗಿಯೇ ಚರ್ಚೆ ನಡೆಸಿದ್ದರು. ಆದರೆ ಈ ಜಗಳದ ಕಿಡಿ ನಂದಿದ ನಂತರ ಅವರು ಮತ್ತೆ ಆ ಸ್ಪರ್ಧಿಯ ಜೊತೆ ಕೈ ಜೊಡಿಸುತ್ತಾರೆ. ಅದು ಅವರ ಸ್ವಭಾವ.
ಸಂತು-ಪಂತು ಫ್ರೆಂಡ್‌ಷಿಪ್: "ಮತ್ಯಾರಲ್ಲೂ ನೋಡದ, ನಿಷ್ಕಳಂಕ ಸ್ನೇಹವನ್ನು ನಿಮ್ಮಿಬ್ಬರಲ್ಲಿ ನೋಡಿದ್ದೇನೆ" ಎಂದು ಕಿಚ್ಚ ಸುದೀಪ್ ವಾರಾಂತ್ಯದ ಎಪಿಸೋಡ್‌ನಲ್ಲಿ ಹೇಳಿದ್ದು ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಬಗ್ಗೆ. ಎಲಿಮಿನೇಷನ್ ಸಂದರ್ಭದಲ್ಲಿ ಇಬ್ಬರಲ್ಲಿ ಒಬ್ಬರು ಹೊರಗೆ ಹೋಗುತ್ತಾರೆ ಎಂಬ ಹಂತದಲ್ಲಿ ಕೂತಿದ್ದಾಗಲೂ ಅವರಿಬ್ಬರೂ ಒಬ್ಬರಿಗೊಬ್ಬರು ಬೆಂಬಲವಾಗಿಯೇ ಮಾತನಾಡಿದ್ದರು. ಸಂತು-ಪಂತು ಖ್ಯಾತಿಯ ಈ ಇಬ್ಬರೂ ಆಡಿದ ಮಾತುಗಳಿಗೆ, ಆಡಿದ ಆಟಗಳಿಗೆ ಲೆಕ್ಕವೇ ಇಲ್ಲ. ಎಷ್ಟೇ ಮಾತುಗಳು ಕೇಳಿಬಂದರೂ ಅವರ ಸ್ನೇಹದಲ್ಲಿ ಬಿರುಕು ಬರಲೇ ಇಲ್ಲ. ಹಾಗೆಂದು ಭಿನ್ನಾಭಿಪ್ರಾಯಗಳಿಲ್ಲ ಎಂದಲ್ಲ. ಒಬ್ಬರಿಗೊಬ್ಬರು ಮಾತುಗಳಲ್ಲಿ ತಿವಿದುಕೊಂಡಿದ್ದೂ ಇದೆ. ಮುನಿಸಿಕೊಂಡಿದ್ದೂ ಇದೆ. ಆದರೆ ಮರುಕ್ಷಣದಲ್ಲಿಯೇ ಅದು ಸರಿಹೋಗಿ ಬೀನ್ ಬ್ಯಾಗ್ ಮೇಲೆ ಕುಳಿತು ಹರಟೆ ಹೊಡೆದಿದ್ದಾರೆ. ಈ ಬೀನ್ ಬ್ಯಾಗ್ ಸ್ಟೋರಿ ಮನೆಯೊಳಗೂ ಹೊರಗೂ ಸಾಕಷ್ಟು ಸದ್ದು ಮಾಡಿತ್ತು. ತುಕಾಲಿಯವರ ತಂತ್ರಗಾರಿಕೆ ರೂಪುಗೊಳ್ಳುತ್ತಿದ್ದದ್ದೇ ಈ ಬೀನ್ ಬ್ಯಾಗ್ ಮೇಲೆ.
ಸ್ಕೂಲ್ ಟಾಸ್ಕ್‌ನಲ್ಲಿ ಮೋಡಿ: ತುಕಾಲಿ ಸಂತೋಷ್ ಅವರ ರಂಜನೀಯ ಪ್ರತಿಭೆ ಹೊರಗೆ ಬಂದಿದ್ದು ಸ್ಕೂಲ್ ಟಾಸ್ಕ್‌ನಲ್ಲಿ. ಉಳಿದವರು ತಮ್ಮ ಎದುರಾಳಿಗಳನ್ನು ತಿವಿಯಲು, ದೂರಲು ಈ ಅವಕಾಶವನ್ನು ಬಳಸಿಕೊಂಡರೆ, ತುಕಾಲಿ ಸಂತೋಷ್ ಮಾತ್ರ ಬಾಲ್ಯಾವಸ್ಥೆಗೆ ಹೋಗಿ ಬಂದಂತಿದ್ದರು. 'ಹೊಡಿತೀನಿ' ಎಂದು ಅವರು ಆಡುತ್ತಿದ್ದ ರೀತಿ ಹಲವು ವಾರಗಳ ಕಾಲ ಆಗಾಗ ಮನೆಯೊಳಗೆ ಪ್ರತಿಧ್ವನಿಸುತ್ತಲೇ ಇತ್ತು. ಅಲ್ಲದೇ ಬೃಂದಾವನ ಧಾರಾವಾಹಿ ತಂಡ ಮನೆಯೊಳಗೆ ಬಂದಾಗ ತುಕಾಲಿ ಸಂತೋಷ್, ವರ್ತೂರು ಸಂತೋಷ್, ಭಾಗ್ಯ, ತನಿಷಾ ಸೇರಿಕೊಂಡು ಮಾಡಿದ್ದ ಕಾಮಿಡಿ ಸ್ಕಿಟ್ ಕೂಡ ಎಲ್ಲರನ್ನೂ ನಕ್ಕುನಲಿಸಿತ್ತು. ಇದೇ ವಾರ ಅವರು ತೆಗೆದುಕೊಂಡ ಇಂಗ್ಲಿಷ್ ಕ್ಲಾಸ್ ಅಂತೂ ಮನೆಯ ಉಳಿದ ಸದಸ್ಯರಿಗೆ ಇಂಗ್ಲಿಷ್ ಕಲಿಸುವ ಬದಲು ಬರುವ ಇಂಗ್ಲಿಷ್ ಅನ್ನೂ ಮರೆಸುವಂತೆ ಮಾಡಿತ್ತು. ವಾರಾಂತ್ಯದಲ್ಲಿಯೂ ಕಿಚ್ಚ ಸುದೀಪ್ ಅವರು ತುಕಾಲಿ ಬಾಯಲ್ಲಿ ಇಂಗ್ಲಿಷ್ ಕೇಳಲು ಇಷ್ಟಪಡುತ್ತಿದ್ದರು.
ತಂತ್ರದಲ್ಲಿ ಚಾಣಕ್ಯ: ಬರೀ ನಗಿಸುವುದನ್ನೇ ಅವಲಂಬಿಸಿದ್ದರೆ ಸಂತೋಷ್ ಇಷ್ಟು ದಿನಗಳ ಕಾಲ ಮನೆಯೊಳಗೆ ಇರಲು ಸಾಧ್ಯವೇ ಇರಲಿಲ್ಲವೇನೋ. ವ್ಯಕ್ತಿತ್ವ ಅಷ್ಟಕ್ಕೇ ಸೀಮಿತವಾಗಿರಲಿಲ್ಲ. ಅವರೊಳಗೊಬ್ಬ ತಂತ್ರಗಾರನೂ ಇದ್ದ. ಗಾಸಿಪ್ ಮಾಡುತ್ತೇನೆ ಎಂದು ಹೇಳಿಕೊಂಡೇ ಅವರು ಆಡಿದ ಗಾಳಿಸುದ್ದಿಗಳು ಮನೆಯೊಳಗೆ ಬೆಂಕಿ ಹಚ್ಚಿದ್ದೂ ಇದೆ. ಅದರಲ್ಲಿಯೂ ಕಳೆದ ಕೆಲ ವಾರಗಳಿಂದ ಅವರು ವರ್ತೂರು ಸಂತೋಷ್ ಅವರೊಂದಿಗೆ ಸೇರಿ ಮಾಡಿದ ತಂತ್ರಗಾರಿಕೆಗೆ ಉಳಿದ ಸದಸ್ಯರೆಲ್ಲ ಬೆಕ್ಕಸ ಬೆರಗಾಗುವಂತೆ ಮಾಡಿತ್ತು. ಇತ್ತೀಚೆಗೆ ಕೂಡ ಫಿನಾಲೆಯಲ್ಲಿ ನಿಮ್ಮ ಜೊತೆ ಇರಬೇಕಾದ ಇನ್ನೊಂದು ಕೈ ಯಾರದ್ದು ಎಂಬ ಪ್ರಶ್ನೆಗೆ ತುಕಾಲಿಯವರು, ಸಂಗೀತಾ ಎಂದಿದ್ದರು. ಆದರೆ ಮುಂದಿನ ವಾರವೇ ಅವರು ಸಂಗೀತಾ ವಿರುದ್ಧ ಕಾರ್ತಿಕ್ ಅವರಿಗೆ ಸಪೋರ್ಟ್ ಮಾಡಿ ಎಂದು ಬಿಟ್ಟರು. ಹೀಗೆ ಕಾಲಕ್ಕೆ ತಕ್ಕ ಹಾಗೆ ತಮ್ಮ ತಂತ್ರಗಾರಿಕೆ ಬದಲಿಸುತ್ತಾ, ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ವಾತಾವರಣ ರೂಪಿಸಿಕೊಳ್ಳುವ ಜಾಣತನವೇ ಅವರನ್ನು ಇಲ್ಲಿಯವರೆಗೆ ತಂದಿದೆ.
ಸವಾಲಿಗೆ ಸವಾಲ್: ಆರಂಭಿಕ ದಿನಗಳಲ್ಲಿ ವಿನಯ್ ಅವರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ತುಕಾಲಿಯವರು ಹಳ್ಳಿ ಟಾಸ್ಕ್‌ನಲ್ಲಿ ಅವರ ತಂಡವನ್ನೇ ಸಪೋರ್ಟ್ ಮಾಡಿ ಸಂಗೀತಾ ತಂಡ ಸೋಲುವಂತೆ ಮಾಡಿದ್ದರು. ನಂತರದ ದಿನಗಳಲ್ಲಿ ವಿನಯ್ ತಂಡದಿಂದ ಒಬ್ಬೊಬ್ಬರಾಗಿ ಎಲಿಮಿನೇಟ್ ಆಗಿ ಮನೆಯಿಂದ ಹೊರಬೀಳತೊಡಗಿದರು. ಆಗ ತುಕಾಲಿಯವರ ತಂಡದಿಂದ ಹೊರಬಿದ್ದು, ಸಂಗೀತಾ ಅವರಿಗೆ ಹತ್ತಿರವಾದರು. ಆದರೆ ಎಂಟನೇ ವಾರದಲ್ಲಿ ಸಂಗೀತಾ, ವಿನಯ್ ತಂಡವನ್ನು ಸೇರಿಕೊಂಡಾಗ ತುಕಾಲಿ ಅವರಿಗೆ ಎದುರಾಳಿಯಾದರು. ನಿಮ್ಮ ತಂಡದಿಂದ ಕಾರ್ತಿಕ್ ಮತ್ತು ತುಕಾಲಿಯವರ ತಲೆ ಬೋಳಿಸಿಕೊಳ್ಳಬೇಕು ಎಂದು ಸಂಗೀತಾ ಸವಾಲು ಹಾಕಿದಾಗ ಕೊಂಚವೂ ಯೋಚಿಸದೇ ತಲೆ ಬೋಳಿಸಿಕೊಂಡು ತಮ್ಮ ಬದ್ಧತೆ ಮೆರೆದರು.
ನಗುಬುಗ್ಗೆಯ ಹಿಂದೆ ನೋವಿನ ಒರತೆ: ಸದಾ ನಗುತ್ತಾ, ನಗಿಸುತ್ತಾ ಇರುವ ತುಕಾಲಿ ಸಂತೋಷ್ ಅವರು ಮನೆಮಂದಿಯನ್ನೆಲ್ಲ ಭಾವುಕತೆಯಲ್ಲಿ ಮುಳುಗಿಸಿದ್ದೂ ಇದೆ. ಬಿಗ್ ಬಾಸ್ ಮನೆಯ ಸದಸ್ಯರ ಕುಟುಂಬದವರು ಮನೆಗೆ ಭೇಟಿ ಕೊಡುವ ವಾರದಲ್ಲಿ ತುಕಾಲಿ ಅವರ ಹೆಂಡತಿ ಕೊಟ್ಟ ಎಂಟ್ರಿ ಮಾತ್ರ ಬಹಳ ವಿಚಿತ್ರವಾಗಿತ್ತು. ಎಲ್ಲರೂ ತಮ್ಮ ಕೈಯಲ್ಲಿ ತಿನಿಸಿನ ಡಬ್ಬ ಹಿಡಿದು ಬಂದರೆ ಅವರು ಬೆತ್ತ ಹಿಡಿದು ಬಂದಿದ್ದರು. ಇತರೆ ಸ್ಪರ್ಧಿಗಳ ಮನೆಯವರು ಬರುವಾಗ, "ಬಿಗ್ ಬಾಸ್ ದಯವಿಟ್ಟು ನನ್ನ ಹೆಂಡತಿಯನ್ನು ಮಾತ್ರ ಇಲ್ಲಿಗೆ ಕರೆಸಬೇಡಿ" ಎಂದು ಬೇಡಿಕೊಳ್ಳುತ್ತಿದ್ದರು. ಈ ವಿಚಾರವನ್ನಿಟ್ಟುಕೊಂಡ ತುಕಾಲಿ ಹೆಂಡತಿ ಪತಿಯನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದರು. ಅವರನ್ನು ನೋಡಿ ಮನೆ ಸದಸ್ಯರೆಲ್ಲ ನಕ್ಕು ನಕ್ಕು ಸುಸ್ತಾಗಿದ್ದರು. ಆದರೆ ತುಕಾಲಿ ಅವರ ಹೆಂಡತಿ, ತುಕಾಲಿ ಅವರ ಒಳ್ಳೆಯ ಗುಣಗಳ ಬಗ್ಗೆ ಹೇಳುತ್ತಾ, ಕಷ್ಟದ ದಿನಗಳನ್ನು ನೆನಪಿಸಿಕೊಂಡಾಗ ಕ್ಷಣಕಾಲದ ಹಿಂದೆ ನಕ್ಕವರ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು.
ಇದನ್ನೂ ಓದಿ: ಬಿಗ್ ಬಾಸ್ 5ನೇ ರನ್ನರ್ ಅಪ್ ತುಕಾಲಿ ಸಂತೋಷ್
ಬಿಗ್ ಬಾಸ್ ಮನೆಯೊಳಗೆ ಉಳಿದ ಎಲ್ಲಾ ಸದಸ್ಯರಿಗಿಂತಲೂ ಬಹಳ ಭಿನ್ನ ವ್ಯಕ್ತಿತ್ವ ಹೊಂದಿರುವ ತುಕಾಲಿ ಸಂತೋಷ್, ತಂತ್ರಗಾರಿಕೆ ಮತ್ತು ಮನರಂಜನೆಯ ವಿಶಿಷ್ಟ ಮಿಶ್ರಣ. ಕ್ಯಾಪ್ಟನ್ ಆಗುವ ಕನಸು ನನಸಾಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದ ಹಾಗೇ ನಡುರಾತ್ರಿ ಕ್ಯಾಪ್ಟನ್ ಕೋಣೆಯ ಒಳಹೊಕ್ಕು, ಹಾಸಿಗೆಯಲ್ಲಿ ಮಲಗಿ ಹೊರಳಾಡಿ, ಆಮೇಲೆ ಕ್ಷಮೆ ಕೇಳುವ ಮುಗ್ಧ ಕೂಡ ಹೌದು. ನಿಮ್ಮ ಆಸೆ ಏನು ಎಂದು ಕೇಳಿದಾಗ ಹುಂಡೆ ಕೋಳಿ ಊಟ ಮಾಡಬೇಕು ಎನ್ನಬಲ್ಲ ಭೋಜನಪ್ರಿಯ. ಹೀಗೆ ಹಲವು ಗುಣಗಳು ಸೇರಿ ರೂಪುಗೊಂಡಿರುವ ತುಕಾಲಿ ಸಂತೋಷ್ ಬಿಗ್ ಬಾಸ್ ಶೋ ಕಳೆ ಹೆಚ್ಚಿಸಿದ ವ್ಯಕ್ತಿತ್ವಗಳಲ್ಲಿ ಒಬ್ಬರು ಎನ್ನಬಹುದು.