ತಮ್ಮ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದಾಗಿ ಆರೋಪಿಸಿ ಎಐಎಡಿಎಂಕೆ ಪಕ್ಷದ ಮಾಜಿ ನಾಯಕ ಎ.ವಿ ರಾಜು ವಿರುದ್ಧ ನಟಿ ತ್ರಿಶಾ ಕೃಷ್ಣನ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇಂದು (ಗುರುವಾರ, ಫೆಬ್ರವರಿ 22) ನಟಿ ತ್ರಿಶಾ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ತಮ್ಮ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಇತ್ತೀಚೆಗೆ, ಗಮನ ಸೆಳೆಯೋ ನಿಟ್ಟಿನಲ್ಲಿ ಇತಿ-ಮಿತಿ ಮೀರಿ ಮಾತನಾಡುವ ವ್ಯಕ್ತಿಗಳ ಬಗ್ಗೆ ನಟಿ ತ್ರಿಶಾ ತಮ್ಮ ಅಸಮಾಧಾನ ಹೊರಹಾಕಿದ್ದರು. ಜೊತೆಗೆ ತಮ್ಮ ಕಾನೂನು ತಂಡ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದರು.
ಈ ಹಿಂದೆ, ತ್ರಿಶಾ ಸಾಮಾಜಿಕ ಮಾಧ್ಯಮದಲ್ಲಿ ಎ.ವಿ ರಾಜು ಅವರನ್ನು ಟೀಕಿಸಿ ಪೋಸ್ಟ್ ಶೇರ್ ಮಾಡಿದ್ದರು. ಅಟೆಂಕ್ಷನ್ಗಾಗಿ ಇಂತಹ ಕೃತ್ಯದಲ್ಲಿ ತೊಡಗಿರುವುದಾಗಿ ಆರೋಪಿಸಿ ತಮ್ಮ ಅಸಮಾಧಾನ ಹೊರಹಾಕಿದ್ದರು. ತಮ್ಮ ಲೀಗಲ್ ಟೀಮ್ ಈ ವಿಷಯದ ವಿರುದ್ಧ ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳುತ್ತದೆ. ಮುಂದಿನ ಯಾವುದೇ ಕ್ರಮವು ಕಾನೂನು ಇಲಾಖೆಯಿಂದ ನೇರವಾಗಿ ಬರುತ್ತದೆ ಎಂದು ಉಲ್ಲೇಖಿಸಿದ್ದರು.
ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ನಟಿ ತ್ರಿಶಾ ಕೃಷ್ಣನ್ ಬಗ್ಗೆ ರಾಜು ಅವರು ಕಾಮೆಂಟ್ ಮಾಡಿದ್ದು, ಅವುಗಳು ಬಹಳ ಅನುಚಿತವಾಗಿವೆ ಎಂದು ಬಹುತೇಕ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜು ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶರವೇಗದಲ್ಲಿ ವೈರಲ್ ಆಗಿವೆ. ಪಕ್ಷದ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಫೆಬ್ರವರಿ 17 ರಂದು ಎ.ವಿ ರಾಜು ಅವರನ್ನು ಎಐಎಡಿಎಂಕೆಯಿಂದ ವಜಾಗೊಳಿಸಲಾಗಿದೆ.
ಇದನ್ನೂ ಓದಿ: ಯುವ ಪ್ರತಿಭೆಗಳ 'ಪುರುಷೋತ್ತಮನ ಪ್ರಸಂಗ' ಚಿತ್ರದ ಟ್ರೇಲರ್ ಮೆಚ್ಚಿದ ಸ್ಯಾಂಡಲ್ವುಡ್ ಅಧ್ಯಕ್ಷ
2023ರ ನವೆಂಬರ್‌ನಲ್ಲಿ 'ಲಿಯೋ' ಚಿತ್ರದ ಸಹ-ನಟ ಮನ್ಸೂರ್ ಅಲಿ ಖಾನ್ ಕೂಡ ಇದೇ ರೀತಿಯ ಪ್ರಕರಣವೊಂದರಲ್ಲಿ ಸಿಲುಕಿದ್ದರು. ತ್ರಿಶಾ ಅವರೊಂದಿಗೆ 'ಬೆಡ್‌ರೂಮ್ ಸೀನ್' ಸಿಗಲಿಲ್ಲ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಮನ್ಸೂರ್ ಅಲಿ ಖಾನ್ ನುಡಿಗೆ ಸಾಕಷ್ಟು ಟೀಕೆ ವ್ಯಕ್ತವಾಯಿತು. ಕೆಲ ದಿನಗಳ ನಂತರ ಮನ್ಸೂರ್, ತ್ರಿಶಾ ಅವರ ಬಳಿ ಕ್ಷಮೆಯಾಚಿಸಿದ್ದರು.
ಇದನ್ನೂ ಓದಿ: ಇಟಲಿ 'ಮಿಲನ್ ಫ್ಯಾಶನ್ ವೀಕ್'ನ ಮೆರುಗು ಹೆಚ್ಚಿಸಿದ ಕನ್ನಡತಿ ರಶ್ಮಿಕಾ ಮಂದಣ್ಣ
ತ್ರಿಶಾ ಇತ್ತೀಚೆಗೆ ದಳಪತಿ ವಿಜಯ್ ಅವರ ಲಿಯೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನದ ಲಿಯೋ ಅಕ್ಟೋಬರ್ 19ರಂದು ತೆರೆಕಂಡಿತ್ತು. ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶ ಕಂಡಿದೆ. ನಟಿಯ ಮುಂಬರುವ ಪ್ರಾಜೆಕ್ಟ್ 'ವಿದಾ ಮುಯಾರ್ಚಿ'. ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟಿಯರ ಪೈಕಿ ತ್ರಿಶಾ ಕೃಷ್ಣನ್ ಕೂಡಾ ಓರ್ವರಾಗಿದ್ದು, ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.