ಬಹು ನಿರೀಕ್ಷಿತ ಕಲ್ಕಿ 2898 ಎಡಿ ಅಂತಿಮವಾಗಿ ಬಿಗ್ ಸ್ಕ್ರೀನ್ಗೆ ಎಂಟ್ರಿ ಕೊಟ್ಟಿದ್ದು, ಅಭಿಮಾನಿಗಳ ಉತ್ಸಾಹ ದ್ವಿಗುಣಗೊಳಿಸಿದೆ. ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿರುವ ಚಿತ್ರ ಯಾವಾಗ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡಲಿದೆ ಎಂದು ಅಭಿಮಾನಿಗಳು ಉತ್ಸಾಹದಿಂದ ಕಾಯುತ್ತಿದ್ದಾರೆ. ಆನ್‌ಲೈನ್ ಪ್ರೀಮಿಯರ್‌ನ ನಿಖರ ದಿನಾಂಕ ಬಹಿರಂಗಗೊಳ್ಳದಿದ್ದರೂ, ಎರಡು ಪ್ರಮುಖ ಸ್ಟ್ರೀಮಿಂಗ್ ಸೇವೆಗಳು ಚಿತ್ರದ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿವೆ ಎಂದು ವರದಿಯಾಗಿದೆ.
ಬರೋಬ್ಬರಿ 600 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ ಚಿತ್ರವು ಈಗಾಗಲೇ ತನ್ನ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳ ಮಾರಾಟದ ಮೂಲಕ, ಹಾಕಿರುವ ಬಂಡವಾಳದಲ್ಲಿ ಹೆಚ್ಚಿನ ಭಾಗವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ. ವರದಿಗಳ ಪ್ರಕಾರ, ನೆಟ್‌ಫ್ಲಿಕ್ಸ್ ಚಿತ್ರದ ಹಿಂದಿ ಆವೃತ್ತಿಯ ಹಕ್ಕುಗಳನ್ನು 175 ಕೋಟಿ ರೂಪಾಯಿಗೆ ಪಡೆದುಕೊಂಡಿದೆ. ಪ್ರೈಮ್ ವಿಡಿಯೋ ದಕ್ಷಿಣದ ಭಾಷೆಗಳ ಹಕ್ಕುಗಳನ್ನು ಸುಮಾರು 200 ಕೋಟಿ ರೂಪಾಯಿಗಳಿಗೆ ಖರೀದಿಸಿದೆ.
ವೈಜಯಂತಿ ಮೂವೀಸ್ ಬ್ಯಾನರ್ ಅಡಿ ಸಿ ಅಸ್ವನಿ ದತ್ ನಿರ್ಮಾಣದ ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ. ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಮತ್ತು ದೀಪಿಕಾ ಪಡುಕೋಣೆ ಜೊತೆಗೆ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಜೊತೆಗೆ ದಿಶಾ ಪಟಾನಿ ಮತ್ತು ಬ್ರಹ್ಮಾನಂದಂ ಕೂಡ ಮುಖ್ಯ ಪಾತ್ರಗಳಲ್ಲಿದ್ದಾರೆ.
ಆರಂಭಿಕ ಅಂದಾಜುಗಳ ಪ್ರಕಾರ, ಈ ಚಿತ್ರ ಪ್ರಪಂಚದಾದ್ಯಂತ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ. ದೇಶೀಯವಾಗಿ 140 ಕೋಟಿ ರೂಪಾಯಿ ಮತ್ತು ವಿದೇಶದಲ್ಲಿ 60 ಕೋಟಿ ರೂಪಾಯಿ ಸಂಗ್ರಹವಾಗೋ ಸಾಧ್ಯತೆಗಳಿವೆ.