''ಕೆವಿಎನ್'' ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ. ಸದ್ಯ ರಾಕಿಂಗ್ ಸ್ಟಾರ್ ಯಶ್ ನಿರ್ಮಾಣದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ನಿರ್ಮಾಣ ಮಾಡುತ್ತಿರುವ ''ಕೆವಿಎನ್'' ತನ್ನ ಮೊದಲ ತಮಿಳು ಸಿನಿಮಾವನ್ನು ಘೋಷಿಸಿದೆ. ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ನಟನೆಯ ಚಿತ್ರವನ್ನು ''ಕೆವಿಎನ್'' ಸಂಸ್ಥೆ ನಿರ್ಮಾಣ ಮಾಡಲಿದೆ.
ಈ ಬಗ್ಗೆ ಅಧಿಕೃತ ಪೋಸ್ಟ್ ಶೇರ್ ಮಾಡಿರುವ ಕೆವಿಎನ್ ಸಂಸ್ಥೆ, ''ದಳಪತಿ ವಿಜಯ್ ಅವರ 69ನೇ ಚಿತ್ರದ ಅನೌನ್ಸ್ಮೆಂಟ್ ನಾಳೆ ಸಂಜೆ 5 ಗಂಟೆಗೆ ಆಗಲಿದೆ'' ಎಂದು ಬರೆದುಕೊಂಡಿದೆ. ಶೀರ್ಷಿಕೆ ಅನೌನ್ಸ್ ಆಗುವ ಸಾಧ್ಯತೆ ಇದೆ. ನಾವೆಲ್ಲರೂ ನಿಮ್ಮ ಸಿನಿಮಾಗಳೊಂದಿಗೆ ಬೆಳೆದಿದ್ದೇವೆ. ಪ್ರತೀ ಹೆಜ್ಜೆಯಲ್ಲೂ ನೀವು ನಮ್ಮ ಜೀವನದ ಭಾಗವಾಗಿದ್ದೀರಿ. 30 ವರ್ಷಗಳಿಗೂ ಹೆಚ್ಚು ಕಾಲ ನಮ್ಮನ್ನು ರಂಜಿಸಿದ್ದಕ್ಕಾಗಿ ಧನ್ಯವಾದಗಳು ದಳಪತಿ'' ಎಂದು ಬರೆದುಕೊಂಡಿದ್ದಾರೆ.
ಇದು ಸೌತ್ ಸೂಪರ್ ಸ್ಟಾರ್ ವಿಜಯ್ ಅವರ 69ನೇ ಚಿತ್ರವಾಗಿದೆ. ಇಂದು ಪ್ರೊಡಕ್ಷನ್ ಹೌಸ್ ಶೇರ್ ಮಾಡಿರುವ ವಿಡಿಯೋ ನಟನ ಜೀವಮಾನದ ಒಂದು ನೋಟ ಒದಗಿಸಿದೆ. ವಿಡಿಯೋ ನಡುವೆ 'ವಿಜಯ್ ಫೈನಲ್ ಫಿಲ್ಮ್' ಎಂದು ಉಲ್ಲೇಖಿಸಲಾಗಿದೆ.
ವೆಂಕಟ್ ಕೆ ನಾರಾಯಣ್ ಮತ್ತು ನಿಶಾ ವೆಂಕಟ್ ಕೋನಂಕಿ ಸ್ಥಾಪನೆಯ ''ಕೆವಿಎನ್'' ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲೊಂದು. 2021ರ ನವೆಂಬರ್ 26ರಂದು 'ಸಖತ್' ಸಿನಿಮಾ ನಿರ್ಮಾಣ ಮೂಲಕ ಪಯಣ ಆರಂಭಿಸಿದೆ. ನಂತರ ಬೈಟು ಸಿನಿಮಾ 2022ರ ಫೆಬ್ರವರಿ 18ರಂದು ತೆರೆಗಪ್ಪಳಿಸಿತು. ಆನಂತರ ಹಲವು ಸಿನಿಮಾಗಳನ್ನು ನಿರ್ಮಾಣ, ವಿತರಣೆ, ಪ್ರಸ್ತುತಪಡಿಸಿ ಗಮನ ಸೆಳೆದಿದೆ. ಸದ್ಯ ಯಶ್ ಅಭಿನಯದ ಟಾಕ್ಸಿಕ್ ಸಲುವಾಗಿ ಸುದ್ದಿಯಲ್ಲಿದೆ.
ಭಾರತೀಯ ಸಿನಿಮಾರಂಗದಲ್ಲೀಗ ಪ್ಯಾನ್ ಇಂಡಿಯಾ ಸಿನಿಮಾಗಳ ಭರಾಟೆ ಜೋರಾಗಿದೆ. ನಟ, ನಿರ್ಮಾಪಕರು, ನಿರ್ದೇಶಕರು ಹಾಗೂ ತಂತ್ರಜ್ಞನರು ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡಲು ಬಹಳ ಉತ್ಸುಕರಾಗುತ್ತಿದ್ದಾರೆ. ಈಗಾಗಲೇ ಹೊಂಬಾಳೆ ಸಂಸ್ಥೆ ಕನ್ನಡ ಅಲ್ಲದೇ ತೆಲುಗು, ಮಲೆಯಾಳಂ ಭಾಷೆಯಲ್ಲಿ ಸಿನಿಮಾಗಳನ್ನು ನಿರ್ಮಿಸಿದೆ. ತಮಿಳಿನಲ್ಲಿ ಎರಡು ಸಿನಿಮಾಗಳನ್ನು ಘೋಷಿಸಿದೆ. ಈಗ ಅದೇ ಹಾದಿಯಲ್ಲಿ ಕನ್ನಡ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ 'ಕೆವಿಎನ್' ಇದೆ. ಜೂನಿಯರ್ ಎನ್ಟಿಆರ್ ನಟನೆಯ ದೇವರ, ಸೂರ್ಯ, ಕಂಗುವ ಚಿತ್ರವನ್ನು ಕರ್ನಾಟಕದಲ್ಲಿ ವಿತರಣೆ ಮಾಡುವ ಜವಾಬ್ದಾರಿ ಹೊತ್ತಿದೆ. ಜೊತೆಗೆ ಮತ್ತೊಂದು ಸಾಹಸಕ್ಕೆ ಕೆವಿಎನ್ ಸಂಸ್ಥೆ ಮುಂದಾಗಿದೆ.
ತಮಿಳು ಸಿನಿಮಾ ಇಂಡಸ್ಟ್ರಿಯ ಹೆಸರಾಂತ ನಟ ವಿಜಯ್ ಅವರ 69ನೇ ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದೆ. ಕೆವಿನ್ ಸಂಸ್ಥೆಯ ಮಾರ್ಕೆಟಿಂಗ್ ಹೆಡ್ ಆಗಿರುವ ಸುಪ್ರೀತ್ ಮಾತನಾಡಿ, ನಮ್ಮ ಕೆವಿಎನ್ ಸಂಸ್ಥೆಯಿಂದ ಬಹುಕೋಟಿ ವೆಚ್ಚದಲ್ಲಿ ವಿಜಯ್ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕೆವಿಎನ್ ಸಂಸ್ಥೆಯ ನಿರ್ಮಾಪಕರಾಗಿರೋ ವೆಂಕಟ್ ನಾರಾಯಣ್ ಅವರು ದಳಪತಿಯ ಕೊನೆ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ತಮಿಳು ರಾಜಕೀಯ ರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ ವಿಜಯ್ ಇತ್ತೀಚೆಗಷ್ಟೇ ಗೋಟ್ ಮೂಲಕ ಪ್ರೇಕ್ಷಕರ ಎದುರು ಬಂದಿದ್ದರು. ವೆಂಕಟ್ ಪ್ರಭು ಆ್ಯಕ್ಷನ್ ಕಟ್ನಲ್ಲಿ ತಯಾರಾಗಿದ್ದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ್ರೂ, ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿತ್ತು. ಹೆಚ್ಚುಕಮ್ಮಿ ಅಂದ್ರೂ ದಳಪತಿ ಸಿನಿಮಾಗಳು 300 ಕೋಟಿಗೂ ಕಡಿಮೆ ಕಲೆಕ್ಷನ್ ಮಾಡೋದೇ ಇಲ್ಲ ಎಂಬ ಮಾತಿದೆ. ಅದಕ್ಕೆ ಕಾರಣ ಅವರ ಜನಪ್ರಿಯತೆ. ಚಿತ್ರರಂಗದಲ್ಲಿ ದಾಖಲೆ ಬರೆದು ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸಿರುವ ವಿಜಯ್ ಕೊನೆ ಸಿನಿಮಾವನ್ನು ಅಷ್ಟೇ ಅದ್ಧೂರಿಯಾಗಿ ನಿರ್ಮಾಣ ಮಾಡಲು ಕೆವಿಎನ್ ಸಂಸ್ಥೆ ಸಜ್ಜಾಗಿದೆ.
ಕೆವಿಎನ್ ಸಂಸ್ಥೆ ದಕ್ಷಿಣ ಭಾರತದ ಜನಪ್ರಿಯ ವಿತರಣಾ ಹಾಗೂ ನಿರ್ಮಾಣ ಸಂಸ್ಥೆ. ಆರ್ಆರ್ಆರ್, ಸೀತಾರಾಮಂ, ಅನಿಮಲ್, ವಿಕ್ರಾಂತ್ ರೋಣ, 777 ಚಾರ್ಲಿ, ಸಪ್ತಸಾಗರದಾಚೆ ಎಲ್ಲೋ ಹೀಗೆ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಸಂಸ್ಥೆ ಈಗ ಬಹುಕೋಟಿ ವೆಚ್ಚದ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದೆ.
ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರಿರುವ ವಿಜಯ್ 69ನೇ ಸಿನಿಮಾಗೂ ಖಜಾನೆ ತೆರೆದಿಡಲು ಸಜ್ಜಾಗಿದೆ. ಈ ಮೂಲಕ ಕೆವಿಎನ್ ಸಂಸ್ಥೆ ತಮಿಳು ಸಿನಿಮಾರಂಗ ಪ್ರವೇಶಿಸಿದೆ. ವಲಿಮೈ, ತುನಿವು, ಚಿತ್ರಗಳ ಸಾರಥಿ ವಿನೋದ್ ಈ ಸಿನಿಮಾದ ಸೂತ್ರಧಾರ. ಹೇಳಿ ಕೇಳಿ ಇದು ದಳಪತಿ ಕೊನೆ ಸಿನಿಮಾ. ಹೀಗಿದ್ಮೇಲೆ ನಿರೀಕ್ಷೆಗಳು ಜಗದಗಲವೇ ಇರುತ್ತದೆ. ಅದಕ್ಕೆ ತಕ್ಕಂತೆ ಕಥೆ ಹೆಣೆಯಲಾಗಿದ್ದು, ವಿಜಯ್ ರಾಜಕೀಯ ಜೀವನಕ್ಕೆ ಹತ್ತಿರುವ ಕಥೆಯನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತಿದೆ.
ಕೆವಿಎನ್ ತಮಿಳು ಚಿತ್ರರಂಗದ ಮಾಸ್ಟರ್ಗೆ ಬರೋಬ್ಬರಿ 500 ಕೋಟಿ ಬಜೆಟ್ನಲ್ಲಿ ಈ ಸಿನಿಮಾ ಮಾಡುತ್ತಿದೆಯಂತೆ. ಬರೋಬ್ಬರಿ ಆರು ಭಾಷೆಯಲ್ಲಿ ಚಿತ್ರ ನಿರ್ಮಾಣವಾಗಲಿದ್ದು, 2025ಕ್ಕೆ ವಿಜಯ್ - ವಿನೋದ್ - ಕೆವಿಎನ್ ಕಾಂಬೋದ ಸಿನಿಮಾ ತೆರೆಗೆ ಬರುವ ಸಾಧ್ಯತೆಗಳಿವೆ. ವಿಜಯ್ ತಮ್ಮ ಕೊನೆ ಚಿತ್ರದ ಚಿತ್ರೀಕರಣ ಮುಗಿಸುತ್ತಿದ್ದಂತೆ ತಮಿಳುನಾಡಿನಾದ್ಯಂತ ಪಾದಯಾತ್ರೆ ನಡೆಸಲು ತಯಾರಿ ನಡೆಸಿದ್ದಾರೆ. ರಾಜ್ಯದ ಮೂಲೆ ಮೂಲೆ ಸುತ್ತಿ ಪಕ್ಷ ಸಂಘಟಿಸುವ ಕೆಲಸ ಮಾಡಲಿದ್ದಾರೆ ಎಂಬ ಮಾಹಿತಿ ಇದೆ.
ಕರುಣಾನಿಧಿ, ಜಯಲಲಿತಾ ನಿಧನದ ಬಳಿಕ ತಮಿಳುನಾಡಿನಲ್ಲಿ ಪ್ರಬಲ ನಾಯಕನ ಕೊರತೆ ಇದೆ ಎಂಬ ಅಭಿಪ್ರಯಾಯ ಕೆಲವರದ್ದು. ಆ ಸ್ಥಾನವನ್ನು ದಳಪತಿ ವಿಜಯ್ ತುಂಬಲಿದ್ದಾರೆ ಎಂಬ ಲೆಕ್ಕಾಚಾರ ತಮಿಳು ರಾಜಕೀಯರಂಗದ ಪಡಸಾಲೆಗಳಲ್ಲಿ ಹರಿದಾಡ್ತಿದೆ. ತೆರೆಮೇಲೆ ತಾಕತ್ತು ಪ್ರದರ್ಶಿಸಿ ಗೆದ್ದಿರುವ ವಿಜಯ್ ರಾಜಕೀಯದಲ್ಲಿಯೂ ರಾರಾಜಿಸ್ತಾರಾ? ತಮಿಳು ಮಂದಿ ದಳಪತಿಗೆ ಜೈಕಾರ ಹಾಕ್ತಾರಾ? ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ.
'ಟಾಕ್ಸಿಕ್' ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ನಿರ್ಮಾಪಕ ವೆಂಕಟ್ ನಾರಾಯಣ್ ಕೋನಂಕಿ ಬಂಡವಾಳ ಹೂಡುತ್ತಿದ್ದಾರೆ. ಬರೋಬ್ಬರಿ 300 ಕೋಟಿ ರೂ. ಖರ್ಚಿನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ ಎಂದು ವರದಿಯಾಗಿದೆ. ಸ್ಯಾಂಡಲ್ವುಡ್ನ ಬಿಗ್ ಬಜೆಟ್ ಸಿನಿಮಾವನ್ನು ಕನ್ನಡದ ಜನಪ್ರಿಯ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ಪ್ರೇಕ್ಷಕರ ಕುತೂಹಲ ಬೆಟ್ಟದಷ್ಟಿದೆ.
ಕೆವಿಎನ್ ಪ್ರೊಡಕ್ಷನ್ ಅಡಿ ನಿರ್ಮಾಣಗೊಳ್ಳುತ್ತಿರುವ ಮತ್ತೊಂದು ಕನ್ನಡ ಬಹುನಿರೀಕ್ಷಿತ ಸಿನಿಮಾ 'ಕೆಡಿ-ದಿ ಡೆವಿಲ್'. ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 70ರ ದಶಕದ ಕಥೆಯನ್ನು ಈ ಚಿತ್ರ ಹೇಳಲಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ಕರಾವಳಿ ಮೂಲದ ಶಿಲ್ಪಾಶೆಟ್ಟಿ ಸೇರಿದಂತೆ ಗಣ್ಯಾತಿಗಣ್ಯರು ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.