ಹೈದರಾಬಾದ್(ತೆಲಂಗಾಣ): ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನ ಹೊರಭಾಗದಲ್ಲಿ ಕಾಲ್ತುಳಿತ ಸಂಭವಿಸಿ ಮಹಿಳೆ ಸಾವನ್ನಪ್ಪಿದ ಪ್ರಕರಣದಲ್ಲಿ ಇಂದು ಬಂಧನಕ್ಕೊಳಪಟ್ಟ ನಟ ಅಲ್ಲು ಅರ್ಜುನ್ ಅವರಿಗೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.
'ಪುಷ್ಪ' ಪಾತ್ರಕ್ಕೆ ಹೆಸರುವಾಸಿಯಾಗಿರುವ ತೆಲುಗು ನಟ ಅಲ್ಲು ಅರ್ಜುನ್ ಅವರನ್ನು ಇದಕ್ಕೂ ಮುನ್ನ ನಾಂಪಲ್ಲಿ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಹೀಗಾಗಿ, ಪೊಲೀಸರು ನಟನನ್ನು ಚಂಚಲ್‌ಗುಡ ಜೈಲಿಗೆ ರವಾನಿಸಲು ಸಿದ್ಧತೆ ನಡೆಸುತ್ತಿದ್ದರು.
ನಾಂಪಲ್ಲಿ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತಾದರೂ, ಹೈಕೋರ್ಟ್ನಿಂದ ಮಧ್ಯಂತರ ಜಾಮೀನು ಮಂಜೂರಾಗಿದೆ. ಪತ್ರಕರ್ತ ಅರ್ನಬ್ ಗೋಸ್ವಾಮಿ ಪ್ರಕರಣದಲ್ಲಿ ಬಾಂಬೆ ಕೋರ್ಟ್ ನೀಡಿದ ತೀರ್ಪಿನ ಆಧಾರದ ಮೇಲೆ ಹೈಕೋರ್ಟ್ ಈ ಆದೇಶ ಹೊರಡಿಸಿದೆ.
ಪ್ರಕರಣವೇನು?: ಡಿಸೆಂಬರ್ 4ರಂದು 'ಪುಷ್ಪ: ದಿ ರೂಲ್' ಸಿನಿಮಾದ ಪ್ರೀ ರಿಲೀಸ್ ಈವೆಂಟ್ನಲ್ಲಿ ನಡೆದ ಕಾಲ್ತುಳಿತದಲ್ಲಿ 35 ವರ್ಷದ ರೇವತಿ ಸಾವನ್ನಪ್ಪಿದ್ದರು. ಇವರ ಪುತ್ರ ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಥಿಯೇಟರ್‌ಗೆ ನಟ ಅಲ್ಲು ಅರ್ಜುನ್ ಅನಿರೀಕ್ಷಿತ ಭೇಟಿ, ಅಸಮರ್ಪಕ ಜನಸಂದಣಿ ನಿಯಂತ್ರಣ ಕ್ರಮಗಳು ಕಾಲ್ತುಳಿತಕ್ಕೆ ಕಾರಣವಾಯಿತು ಎಂಬುದು ಆರೋಪ.
ಅಲ್ಲು ಅರ್ಜುನ್ ಅವರನ್ನು ಇಂದು ಬೆಳಗ್ಗೆ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಅವರ ನಿವಾಸದಿಂದ ಪೊಲೀಸರು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಂಡರು. ಇದಕ್ಕೂ ಮುನ್ನ ನಟನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105 ಮತ್ತು 118 (1)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಇದನ್ನೂ ಓದಿ: ನಟ ಅಲ್ಲು ಅರ್ಜುನ್ ಅರೆಸ್ಟ್!
ಹೈಕೋರ್ಟ್‌ನಲ್ಲಿ ಅಲ್ಲು ಅರ್ಜುನ್ ಪರ ವಕೀಲರು, ನಟನ ವಿರುದ್ಧದ ಆರೋಪಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಟ ಪೊಲೀಸ್ ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದ್ದಾರೆ. ಆದ್ರೆ ಅವರ ಬಂಧನವು ಪ್ರಾಥಮಿಕವಾಗಿ ಸೆನ್ಸಟೈಸೇಶನ್ ಉದ್ದೇಶದಿಂದ ನಡೆದಿದೆ ಎಂದು ಒತ್ತಿ ಹೇಳಿದರು. ರಯೀಸ್ ಸಿನಿಮಾ ಪ್ರಚಾರದ ಸಮಯದಲ್ಲಿ ಕಾಲ್ತುಳಿತ ಸಂಭವಿಸಿದ ನಂತರ ಕಾನೂನು ಹೋರಾಟ ಎದುರಿಸಿದ ಬಾಲಿವುಡ್ ನಟ ಶಾರುಖ್ ಖಾನ್‌ಗೆ ಸಂಬಂಧಿಸಿದ ಪ್ರಕರಣವನ್ನೂ ವಕೀಲರು ಇಲ್ಲಿ ಉಲ್ಲೇಖಿಸಿದರು.
ಇದನ್ನೂ ಓದಿ: ನಟ ಅಲ್ಲು ಅರ್ಜುನ್‌ಗೆ 14 ದಿನಗಳ ನ್ಯಾಯಾಂಗ ಬಂಧನ; ಚಂಚಲ್‌ಗುಡ ಜೈಲಿಗೆ ರವಾನೆ