ಚೆನ್ನೈ (ತಮಿಳುನಾಡು): ತಮಿಳು ಚಿತ್ರರಂಗವೀಗ ಜನಪ್ರಿಯ ನಟನನ್ನು ಕಳೆದುಕೊಂಡ ನೋವಿನಲ್ಲಿದೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಬಿಜಿಲಿ ರಮೇಶ್ ಕಳೆದ ರಾತ್ರಿ ನಿಧನರಾದರು. ತಮಿಳು ಸಿನಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ನಟನ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ಚೆನ್ನೈನ ಎಂಜಿಆರ್ ನಗರದಲ್ಲಿ ನಡೆಯಲಿದೆ.
Tamil Actor #BijliRamesh passed away due to illness. RIP pic.twitter.com/fx0ZXuEWey
— Sreedhar Pillai (@sri50) August 27, 2024
ನಟನಿಗೆ 46 ವರ್ಷ ವಯಸ್ಸಾಗಿತ್ತು. ಚೆನ್ನೈನಲ್ಲಿರುವ ಅವರ ನಿವಾಸದಲ್ಲಿಂದು ಸಂಜೆ ಅಂತಿಮ ವಿಧಿ ವಿಧಾನ ನಡೆಯಲಿದೆ. ಭಾರತೀಯ ಚಿತ್ರರಂಗದ ಲೆಜೆಂಡ್ ರಜನಿಕಾಂತ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಬಿಜಿಲಿ ರಮೇಶ್ ಮೊದಲು ಯೂಟ್ಯೂಬ್ ಮೂಲಕ ಜನಪ್ರಿಯತೆ ಸಂಪಾದಿಸಿದ್ದರು. ಯೂಟ್ಯೂಬ್‌ನಲ್ಲಿನ ಅವರ ಆರಂಭಿಕ ಯಶಸ್ಸು ನಂತರದ ದಿನಗಳಲ್ಲಿ ಚಿತ್ರರಂಗ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿತು.
ಬಿಜಿಲಿ ಅವರಿಗೆ ಲಿವರ್ಗೆ ಸಂಬಂಧಿಸಿದ ಚಿಕಿತ್ಸೆ ನೀಡಲಾಗುತ್ತಿತ್ತು. ಇತ್ತೀಚೆಗೆ ನಟನ ಕುಟುಂಬ ಅವರ ಚಿಕಿತ್ಸೆಗಾಗಿ ಸಹನಟರಿಂದ ಆರ್ಥಿಕ ಸಹಾಯವನ್ನು ಕೋರಿತ್ತು. ತಮಿಳು ಸಿನಿಮಾಗಳ ಹಾಸ್ಯಪಾತ್ರ, ಪೋಷಕ ಪಾತ್ರಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ.
Actor #BijliRamesh Passed away , Rest in Peace 💔#RIPBijliRamesh pic.twitter.com/S5sAVcQJyp
— Tharani ᖇᵗк (@iam_Tharani) August 27, 2024
ಯೂಟ್ಯೂಬ್‌ನಲ್ಲಿ ಸ್ಕೆಚ್ ಗ್ರೂಪ್ನ ಪ್ರ್ಯಾಂಕ್ ವಿಡಿಯೋದಲ್ಲಿ ಕಾಣಿಸಿಕೊಂಡ ನಂತರ ಬಿಜಿಲಿ ರಮೇಶ್ ಜನಪ್ರಿಯರಾದರು. 2018ರಲ್ಲಿ ವಿಡಿಯೋ ವೈರಲ್ ಆಗಿ ಖ್ಯಾತಿ ಗಳಿಸಿದ ಬಳಿಕ ಪಾಪರಾಜಿಗಳ ವಿಡಿಯೋಗಳಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದರು. 2018ರಲ್ಲೇ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಮತ್ತು ನಟಿ ನಯನತಾರಾ ಅಭಿನಯದ 'ಕೋಲಮವು ಕೋಕಿಲಾ' ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಹೀಗೆ ಒಂದಿಷ್ಟು ಜನಪ್ರಿಯತೆ ಗಳಿಸಿದ ಇವರು ತಮಿಳು ಚಿತ್ರರಂಗ ಪ್ರವೇಶಿಸಿ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಜಿಲಿ ರಮೇಶ್ ಅವರನ್ನು ಯೂಟ್ಯೂಬ್ ಸೆನ್ಸೇಷನ್‌ನಿಂದ ಸಿನಿಮಾ ತಾರೆಯಾಗಿ ಪರಿವರ್ತಿಸುವಲ್ಲಿ ನೆಲ್ಸನ್ ದಿಲೀಪ್‌ಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಹಾಡಿನಲ್ಲಿ ವಿಶೇಷ ಪಾತ್ರಕ್ಕೆ ಅವಕಾಶ ಮಾಡಿಕೊಟ್ಟರು. ನಂತರ ನಟ್ಪೆ ತುನೈ, ಪೊನ್ಮಗಲ್ ವಂಧಲ್, ಆಡೈ, ಕಾತು ವಾಕುಲಾ ರೆಂಡು ಕಾದಲ್, ಸಿವಪ್ಪು ಮಂಜಲ್ ಪಚೈ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಿನಿಮಾಗಳಲ್ಲದೇ ವಿಜಯ್ ಅವರ ಕಿರುತೆರೆ ರಿಯಾಲಿಟಿ ಶೋ (ಅಡುಗೆ ಕಾರ್ಯಕ್ರಮ) ಕುಕ್ ವಿಥ್ ಕೋಮಲಿಯಲ್ಲಿಯೂ ಕಾಣಿಸಿಕೊಂಡಿದ್ದರು. ಕೆಲ ಕಿರುತೆರೆ ಕಾರ್ಯಕ್ರಮಗಳಲ್ಲಿ ಪಾತ್ರ ವಹಿಸಿದ್ದಾರೆ. ರಮೇಶ್ ಹೆಚ್ಚಾಗಿ ತಮ್ಮನ್ನು ತಲೈವಾ ರಜನಿಕಾಂತ್ ಅವರ ಕಟ್ಟಾ ಅಭಿಮಾನಿ ಎಂದು ಹೇಳಿಕೊಳ್ಳುತ್ತಿದ್ದರು. ಆದರೀಗ ಅವರು ನಮ್ಮೊಂದಿಗಿಲ್ಲ. ಅನಾರೋಗ್ಯದ ಹಿನ್ನೆಲೆ ವಿಶ್ರಾಂತಿ ಪಡೆಯಲು ಹೋದ ನಟ ಕಣ್ತೆರೆಯಲೇ ಇಲ್ಲ.
ರಮೇಶ್ ಬಿಜಿಲಿ ಅವರು ಮದ್ಯವ್ಯಸನಿಯಾಗಿದ್ದರು. ಈ ವಿಚಾರವನ್ನು ಸ್ವತಃ ನಟನೇ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಇದರ ಕೆಟ್ಟ ಪ್ರಭಾವವನ್ನರಿತ ರಮೇಶ್ ಇಂಥ ವ್ಯಸನಗಳಿಂದ ದೂರ ಇರುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಯಕೃತ್ತಿನ ಸಮಸ್ಯೆ ಎದುರಿಸಿದ್ದಾರೆ. ಇದೀಗ ನಟನ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ದುಃಖ ವ್ಯಕ್ತಪಡಿಸಿ, ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.