ಕಳೆದ ಸಾಲಿನಲ್ಲಿ ಸರಣಿ ಹಿಟ್ ಸಿನಿಮಾಗಳನ್ನು ಕೊಟ್ಟ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರೀಗ ಮಗಳು ಸುಹಾನಾ ಖಾನ್ ಜೊತೆ ಬಹುನಿರೀಕ್ಷಿತ ಪ್ರಾಜೆಕ್ಟ್ ಒಂದಕ್ಕೆ ಸಜ್ಜಾಗಿದ್ದಾರೆ. ಇತ್ತೀಚೆಗೆ, ನಟ ನ್ಯೂಯಾರ್ಕ್‌ನಲ್ಲಿ ಮಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಮುಂಬರುವ ಆ್ಯಕ್ಷನ್-ಥ್ರಿಲ್ಲರ್ ಚಿತ್ರ 'ಕಿಂಗ್'ನ ಪ್ರೀ-ಪ್ರೊಡಕ್ಷನ್ ಕೆಲಸ ಸಾಗಿದ್ದು, ತಂದೆ-ಮಗಳ ಜೋಡಿ ಪ್ರಸ್ತುತ ವಿರಾಮ ತೆಗೆದುಕೊಂಡಿರುವಂತೆ ತೋರುತ್ತಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಎಸ್ಆರ್ಕೆ ಅಭಿಮಾನಿಯೋರ್ವರು ಶಾರುಖ್ ಮತ್ತು ಸುಹಾನಾ ಅವರ ಶಾಪಿಂಗ್ನ ಒಂದೆರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋವೊಂದರಲ್ಲಿ ಜವಾನ್ ನಟ, ಅಂಗಡಿಯಲ್ಲಿ ಹೊಸ ಶೂಗಳನ್ನು ಖರೀದಿಸಲು ಮುಂದಾಗಿರುವಂತೆ ತೋರಿಸಿದೆ. ಇನ್ನೊಂದರಲ್ಲಿ ಅಭಿಮಾನಿಗಳಿಗೆ ಆಟೋಗ್ರಾಫ್ ಹಾಕುತ್ತಿದ್ದಾರೆ. ಸುಹಾನಾ ತಂದೆಯೊಂದಿಗೆ ಗುಣಮಟ್ಟದ ಸಮಯ ಕಳೆಯುತ್ತಿರುವುದನ್ನು ಈ ಫೋಟೋಗಳಲ್ಲಿ ಕಾಣಬಹುದು. ನಟಿ ಫ್ಲೋರಲ್ ಡ್ರೆಸ್ ಧರಿಸಿದ್ದರೆ, ಎಸ್ಆರ್ಕೆ ಗ್ರೇ ಜೀನ್ಸ್, ಬ್ಲ್ಯಾಕ್ ಟೀ-ಶರ್ಟ್ ಮತ್ತು ಬ್ಲ್ಯಾಕ್ ಕ್ಯಾಪ್ ಧರಿಸಿ ಕ್ಯಾಶುವಲ್ ಲುಕ್ನಲ್ಲಿ ಕಾಣಿಸಿಕೊಂಡರು.
ಸುಜೋಯ್ ಘೋಷ್ ನಿರ್ದೇಶನವಿರುವ 'ಕಿಂಗ್' ಆ್ಯಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಆಗಿದ್ದು, ಶಾರುಖ್ ಖಾನ್ ದರೋಡೆಕೋರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಡಾನ್ ಫ್ರ್ಯಾಂಚೈಸ್‌ನಿಂದ ಹೊರ ಬಂದಿದ್ದರೂ, ನಟ ಬಾಜಿಗರ್, ಜೋಶ್ ಮತ್ತು ರಯೀಸ್‌ನ ತಮ್ಮ ಐಕಾನಿಕ್ ಪಾತ್ರಗಳ ಅಂಶಗಳನ್ನು ಪುನರಾವರ್ತಿಸಲಿದ್ದಾರೆ ಎಂಬ ವದಂತಿಗಳಿವೆ.
ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಮಾರ್ಫ್ಲಿಕ್ಸ್ ಪಿಕ್ಚರ್ಸ್ ಸಹ-ನಿರ್ಮಾಣದಲ್ಲಿ 'ಕಿಂಗ್' ಮೂಡಿಬರಲಿದೆ. ಅದ್ಭುತ ಸಿನಿಮೀಯ ಅನುಭವ ನೀಡುವ ಭರವಸೆಯಲ್ಲಿ ಚಿತ್ರತಂಡವಿದ್ದು, ಸಿನಿಪ್ರಿಯರ ನಿರಿಕ್ಷೆ ಕೂಡ ಬಹಳ ದೊಡ್ಡದಿದೆ. ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ತಾಪ್ಸೀ ಪನ್ನು ಅವರನ್ನೊಳಗೊಂಡ ಸೂಪರ್ ಹಿಟ್ 'ಬದ್ಲಾ' ಸಿನಿಮಾ ನಂತರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಜೊತೆ ಸುಜೋಯ್ ಘೋಷ್ ಎರಡನೇ ಬಾರಿ ಕೈ ಜೋಡಿಸಿದ್ದಾರೆ.
ಇದನ್ನೂ ಓದಿ: ನಾಳೆ ಚಿಯಾನ್ ವಿಕ್ರಮ್ ಅಭಿನಯದ 'ತಂಗಲಾನ್' ಟ್ರೇಲರ್ ರಿಲೀಸ್ - Thangalaan Trailer
ಭಾರತೀಯ ಸಿನಿ ಕ್ಷೇತ್ರದಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಶಾರುಖ್ ಖಾನ್ ದೇಶ ಮಾತ್ರವಲ್ಲದೇ ವಿದೇಶದಲ್ಲೂ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ನಟನ ಸಾಧನೆಗಳನ್ನು ಗುರುತಿಸಿ, ಪ್ರತಿಷ್ಠಿತ 77ನೇ ಲೊಕಾರ್ನೋ ಚಲನಚಿತ್ರೋತ್ಸವದಲ್ಲಿ ಪಾರ್ಡೊ ಅಲ್ಲಾ ಕ್ಯಾರಿಯರಾ ಅಸ್ಕೋನಾ-ಲೊಕಾರ್ನೋ ಪ್ರಶಸ್ತಿ (Pardo alla Carriera Ascona-Locarno award) ನೀಡಲು ತಯಾರಿ ನಡೆಯುತ್ತಿದೆ. ಆಗಸ್ಟ್ 10ರ ಶನಿವಾರ ಸಂಜೆ ಪಿಯಾಝಾ ಗ್ರಾಂಡೆಯಲ್ಲಿ ನಡೆಯಲಿರುವ ಲೊಕಾರ್ನೋ ಚಲನಚಿತ್ರೋತ್ಸವದಲ್ಲಿ ಈ ಪ್ರಶಸ್ತಿ ಪಡೆಯಲಿದ್ದಾರೆ. ಹೀಗೆ ಸಾಧನೆಗಳ ಪಯಣ ಮುಂದುವರಿಸಿರುವ ನಟನ ಮುಂದಿನ ಚಿತ್ರಗಳ ಅಧಿಕೃತ ಮಾಹಿತಿಯನ್ನು ಅಭಿಮಾನಿಗಳು ನಿರೀಕ್ಷಿಸಿದ್ದಾರೆ.