ಅಹಮದಾಬಾದ್: ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಅವರನ್ನು ಅಹಮದಾಬಾದ್‌ನ ಕೆಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿರ್ಜಲೀಕರಣ ಮತ್ತು ಹೀಟ್ ಸ್ಟ್ರೋಕ್‌ನಿಂದ ಅವರು ಬುಧವಾರ ಅಹಮದಾಬಾದ್‌ನ ಕೆಡಿ ಆಸ್ಪತ್ರೆಗೆ ದಾಖಲಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಾಥಮಿಕ ಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಅವರನ್ನು ಬಿಡುಗಡೆ ಮಾಡಲಾಯಿತು ಎಂಬ ಮಾಹಿತಿ ಕೂಡ ಇದ್ದು, ಅಭಿಮಾನಿಗಳು ನಿಟ್ಟಿಸಿರು ಬಿಟ್ಟಿದ್ದಾರೆ. ಡಿಹೈಡ್ರೇಷನ್ ಮತ್ತು ಹೀಟ್ ಸ್ಟ್ರೋಕ್ ಕಾರಣದಿಂದ ಶಾರುಖ್ ಅವರು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿರುವುದಾಗಿ ಅಹಮದಾಬಾದ್ (ಗ್ರಾಮೀಣ) ಸೂಪರಿಂಟೆಂಡೆಂಟ್ ಮಾಹಿತಿ ನೀಡಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಸಹ ಮಾಲಿಕರೂ ಆದ ಚಿತ್ರನಟಿ ಜೂಹಿ ಚಾವ್ಲಾ ಮತ್ತು ಪತಿ ಜಯ್ ಮೆಹ್ತಾ ಆಸ್ಪತ್ರೆಗೆ ಭೇಟಿ ನೀಡಿ, ಶಾರುಖ್ ಖಾನ್ ಅವರ ಆರೋಗ್ಯ ವಿಚಾರಿಸಿದರು.
ಶಾರುಖ್ ಖಾನ್ ಅವರು ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನ ಆತಿಥ್ಯ ವಹಿಸಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯ ವೀಕ್ಷಿಸಲು ತೆರಳಿದ್ದರು. ಅವರೊಂದಿಗೆ ಅವರ ಪುತ್ರಿ ಸುಹಾನಾ ಖಾನ್, ಕಿರಿಯ ಮಗ ಅಬ್ರಾಮ್ ಮತ್ತು ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ಆಗಮಿಸಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್ ಸಹ-ಮಾಲೀಕರಾದ ಜೂಹಿ ಚಾವ್ಲಾ ಮತ್ತು ಜಯ್ ಮೆಹ್ತಾ ಮತ್ತು ಸುಹಾನಾ ಅವರ ಆಪ್ತರಾದ ಅನನ್ಯ ಪಾಂಡೆ, ಶನಯಾ ಕಪೂರ್, ನವ್ಯಾ ನಂದಾ ಮತ್ತು ಅಗಸ್ತ್ಯ ನಂದಾ ಕೂಡ ಕ್ರೀಡಾಂಗಣದಲ್ಲಿ ಹಾಜರಿದ್ದರು.
ಈ ವೇಳೆ ಪಂದ್ಯದ ಉದ್ದಕ್ಕೂ ತಮ್ಮ ಮಾಲೀಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಹುರಿದುಂಬಿಸಿದ್ದರು. ಸನ್‌ರೈಸರ್ಸ್ ಹೈದರಾಬಾದ್ ತಂಡದ ಎದುರು ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಶಾರುಖ್ ಖಾನ್ ಅವರನ್ನು ಸುಹಾನಾ ಮತ್ತು ಅಬ್ರಾಮ್ ಶುಭಹಾರೈಸಿದ್ದರು. ಬೆಳಗ್ಗೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು.