ಬೆಂಗಳೂರು: ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಮಲಯಾಳಂ ಸಿನಿಮಾ ನಿರ್ದೇಶಕ ರಂಜಿತ್ ವಿರುದ್ಧ ನಡೆಯುತ್ತಿದ್ದ ತನಿಖೆಗೆ ಹೈಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ. ತನ್ನ ವಿರುದ್ಧದ ತನಿಖೆಗೆ ತಡೆ ನೀಡಬೇಕೆಂದು ಕೋರಿ ರಂಜಿತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ನಡೆಸಿದರು.
ಅಸ್ವಾಭಾವಿಕ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬುದಾಗಿ ಅರ್ಜಿದಾರರ (ರಂಜಿತ್) ವಿರುದ್ಧ ದೂರು ನೀಡಿರುವವರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ತಾಜ್ ಹೋಟೆಲ್‌ನಲ್ಲಿ 2012ರಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಆದರೆ, ಈ ಹೋಟೆಲ್ 2016ರಿಂದ ಕೆಲಸ ಪ್ರಾರಂಭಿಸಿದೆ. ಈ ಅಂಶ ಸಾರ್ವಜನಿಕವಾಗಿ ಗೊತ್ತಿರುವ ವಿಷಯ ಎಂದು ಪೀಠ ಹೇಳಿತು.
ಅಲ್ಲದೇ, ಘಟನೆ 2012ರಲ್ಲಿ ನಡೆದಿದೆ ಎಂಬುದಾಗಿ ದೂರಿನಲ್ಲಿ ವಿವರಿಸಿದ್ದಾರೆ. ಇದು ನಡೆದು 12 ವರ್ಷಗಳು ಕಳೆದಿವೆ. 2024ರಲ್ಲಿ ದೂರು ದಾಖಲಿಸಿದ್ದು, ದೂರು ನೀಡಲು ಸಂತ್ರಸ್ತರು ಹನ್ನೆರಡು ವರ್ಷ ತೆಗೆದುಕೊಂಡಿದ್ದಾರೆ. ಅದಕ್ಕೆ ಸೂಕ್ತ ಕಾರಣಗಳನ್ನು ವಿವರಿಸಿಲ್ಲ. ಇದೊಂದು ಅಂಶವೇ ಇದನ್ನು ಸುಳ್ಳು ಆರೋಪ ಎಂಬುದನ್ನು ಸಾಬೀತುಪಡಿಸುತ್ತದೆ. ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿದರೆ ಅರ್ಜಿದಾರರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸುಳ್ಳೆಂಬುದು ಗೊತ್ತಾಗುತ್ತದೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಐಪಿಸಿ 377(ಅಸ್ವಾಭಾವಿಕ ಲೈಂಗಿಕ ಕ್ರಿಯೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66ಇ ಅಡಿಯಲ್ಲಿ ದಾಖಲಿಸಿರುವ ಪ್ರಕರಣದ ತನಿಖೆಗೆ ತಡೆ ನೀಡಲಾಗುತ್ತಿದೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.
ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಜನವರಿ 17ಕ್ಕೆ ನಿಗದಿಪಡಿಸಿದೆ.
ಇದನ್ನೂ ಓದಿ: ಬಾಲಿವುಡ್ ದಂತಕಥೆ ರಾಜ್ ಕಪೂರ್ ಜನ್ಮ ಶತಮಾನೋತ್ಸವ: ಪ್ರಧಾನಿ ಮೋದಿಗೆ ಕಪೂರ್ ಕುಟುಂಬದಿಂದ ಆಹ್ವಾನ