ಬೆಂಗಳೂರು: ಬನಶಂಕರಿ 2ನೇ ಹಂತದ ಸುಚಿತ್ರಾ ಫಿಲ್ಮ್ ಸೊಸೈಟಿಯ ಬಳಿ ಇರುವ ನಿರೂಪಕಿ ಅಪರ್ಣಾ ಮನೆಯಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಚಿತ್ರರಂಗದ ಗಣ್ಯರು, ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ.
ಹಿರಿಯ ನಟ ರಮೇಶ್ ಭಟ್ ಮಾತನಾಡಿ, ಅವರ ಕುಟುಂಬಕ್ಕೆ ನಾನು ಆಪ್ತ. ಪರಿಶುದ್ಧ ಮನಸ್ಸನ್ನು ಕಳೆದುಕೊಂಡಿದ್ದೇವೆ. ಅವರ ನಿರೂಪಣೆ ದೊಡ್ಡ ಮೆರುಗು ಅಂತಲೇ ಹೇಳಬಹುದು. ನಿಜವಾದ ಕನ್ನಡ ಸೇವೆ ಮಾಡಿದ್ದು ಅಪರ್ಣಾ ಎಂದು ತಿಳಿಸಿದರು.
ನಟಿ-ನಿರೂಪಕಿ ಶ್ವೇತಾ ಚೆಂಗಪ್ಪ ಮಾತನಾಡಿ, ಅಪರ್ಣಾ ಎಂದಕೂಡಲೇ ಮೊದಲು ನೆನಪಾಗೋದು ಅವರ ಪರಿಶುದ್ಧ ನಗು. ಅಪ್ಪು ನಗುವಷ್ಟೇ ನನ್ನ ಕಣ್ಣ ಮುಂದಿರೋದು. ಕೊನೆಯದಾಗಿ ಭೇಟಿ ಆಗಿ ಬಹಳ ಸಮಯವಾಯಿತು. ಕೋವಿಡ್ ನಂತರದ ದಿನಗಳಲ್ಲಿ, ನನ್ನ ಮಗುವನ್ನು ನೋಡಿಕೊಂಡು ಹೋಗಲು ಬಂದಿದ್ದರು. ಬೆಂಗಳೂರಿನಲ್ಲೇ ಇದ್ದರೂ ಭೇಟಿಯಾಗಲು ಆಗಿರಲಿಲ್ಲ. ಇನ್ನೂ, ಅನಾರೋಗ್ಯದ ಬಗ್ಗೆ ಬೇರೆ ಕಡೆಯಿಂದ ವಿಷಯಗಳು ಬರುತ್ತಿತ್ತು. ಆದ್ರೆ ಕೇಳೋದು ಸರಿ ಅಲ್ಲ ಎಂದು ಈ ಬಗ್ಗೆ ಮಾತನಾಡಿರಲಿಲ್ಲ. ಅವರನ್ನು ಕುಗ್ಗಿಸಬಾರದೆಂದು ಈ ಬಗ್ಗೆ ನಾನು ಅವರಲ್ಲಿ ಕೇಳಿರಲಿಲ್ಲ. ಆದ್ರೆ ಕಳೆದ ಒಂದೆರಡು ತಿಂಗಳ ಅವಧಿಯಲ್ಲಿ ನಮ್ಮ ಸರ್ಕಲ್ನಲ್ಲಿ ಅವರೇ ದೃಢಪಡಿಸಿದರು. ಇಂತಹ ಸರಳ ವ್ಯಕ್ತಿಗೆ ಯಾಕೆ ಆ ಭಗವಂತ ಹೀಗೆ ಮಾಡಿದ ಎಂದು ನನ್ನನ್ನು ಕಾಡುತ್ತಿತ್ತು ಎಂದು ಹೇಳಿ ಭಾವುಕರಾದರು.
ನಟ ವಿನಯ್ ರಾಜ್ಕುಮಾರ್ ಮಾತನಾಡಿ, ಎರಡು ತಿಂಗಳ ಹಿಂದೆ ಗ್ರಾಮಾಯಣ ಶೂಟಿಂಗ್ ಮಾಡಿದ್ದೆವು. ಅವರ ಜೊತೆ ನಟಿಸುವ ಅವಕಾಶ ಸಿಕ್ತು. ಆದ್ರಿಂದು ಅವರಿಲ್ಲ. ಬಹಳ ಬೇಸರವಾಗ್ತಿದೆ ಎಂದು ತಿಳಿಸಿದರು.
ಗ್ರಾಮಾಯಣ ಚಿತ್ರದ ನಿರ್ದೇಶಕ ಚಂದ್ರು ಮಾತನಾಡಿ, ಗ್ರಾಮಾಯಣ ಸ್ಕ್ರಿಪ್ಟ್ ಕೇಳಿ ಇಷ್ಟಪಟ್ಟು ಮಾಡಿದ್ರು. ಕೊನೆ ದಿನಗಳಲ್ಲಿ ನಮ್ಮೊಂದಿಗೆ ಇದ್ದರು. ಆದ್ರೀಗ ಹೇಗೆ ರಿಯಾಕ್ಟ್ ಮಾಡಬೇಕೆಂದು ಗೊತ್ತಾಗ್ತಿಲ್ಲ ಎಂದು ತಿಳಿಸಿದರು.
ನಟ ರಮೇಶ್ ಅರವಿಂದ್ ಮಾತನಾಡಿ, ಅಪರ್ಣಾ ನಿರೂಪಣೆ ಮಾಡುವಾಗ ಆಶ್ಚರ್ಯ ಆಗುತ್ತಿತ್ತು. ನಿರೂಪಣೆ ಬಗ್ಗೆ ಅವರದಲ್ಲಿದ್ದ ಆತ್ಮವಿಶ್ವಾಸ ಬಹಳ. ಅಪರ್ಣಾ ಕನ್ನಡದ ಆಸ್ತಿ ಎಂದು ತಿಳಿಸಿದರು.
ಇದನ್ನೂ ಓದಿ: 'ಕನ್ನಡ ಅಂದ್ರೆ ಅಪರ್ಣಾ, ಅಪರ್ಣಾ ಅಂದ್ರೆ ಕನ್ನಡ': ಚಿತ್ರರಂಗದ ಗಣ್ಯರಿಂದ ಅಂತಿಮ ದರ್ಶನ - Aparna
ಎಸ್.ನಾರಾಯಣ್ ಮಾತನಾಡಿ, ದೇವರು ಒಳ್ಳೆಯವರನ್ನು ಬಹಳ ದಿನ ಭೂಮಿ ಮೇಲೆ ಬಿಡಲ್ಲ. ಅಪರೂಪದ ಹೆಣ್ಣು ಆಕೆ. ನಾನು ಅವರನ್ನು ಸದಾ ಟೀಚರ್ ಎಂದು ಕರೆಯುತ್ತಿದ್ದೆ. ಎಸ್ಪಿಬಿ ಅವರೇ ಅಪರ್ಣಾ ಬಳಿ ಟ್ಯೂಷನ್ಗೆ ಹೋಗಬೇಕು ಅಂತಿದ್ರು. ಚಿಕ್ಕ ವಯಸ್ಸು. ಬಹಳ ಬೇಗ ಹೋಗಿಬಿಟ್ಟರು. ಅವರೊಟ್ಟಿಗೆ ಕೆಲಸ ಮಾಡಿದ್ದೇನೆ. ಇದೀಗ ಅವರ ಅಗಲಿಕೆ ಬಹಳ ಬೇಸರ ತಂದಿದೆ ಎಂದು ತಿಳಿಸಿದರು.
ಇದನ್ನೂ ಓದಿ: 'ಈಗ ಬಂದಾಳೆಂದು, ಮರಳಿ ಜೀವ ತಂದಾಳೆಂದು ಕಾದಿರುವೆ': ಪತಿ ನಾಗರಾಜ್ ಹೃದಯಸ್ಪರ್ಶಿ ಬರಹ - Aparna Husband Nagaraj Post
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿ, ಯಾವುದೇ ಸಮಾರಂಭ ಆಗಲಿ ನಿರೂಪಣೆ ಬಹಳ ಅತ್ಯುತ್ತಮವಾಗಿರುತ್ತಿತ್ತು. ಕನ್ನಡದ ಅಪರ್ಣಾ. ಕಲೆ, ಸಾಹಿತ್ಯ, ಮಾತು ಎಲ್ಲದರಲ್ಲೂ ಅದ್ಭುತ. ಪತ್ರಕರ್ತರ ಕುಟುಂಬದಿಂದ ಬಂದವರು. ಆದ್ರಿಂದು ಅವರು ನಮ್ಮನ್ನು ಅಗಲಿದ್ದು, ಕನ್ನಡಕ್ಕೆ ದೊಡ್ಡ ನಷ್ಟ ಎಂದು ತಿಳಿಸಿದರು.