ಬೆಂಗಳೂರು: ಕನ್ನಡದ ಖ್ಯಾತ ನಟ ನೀನಾಸಂ ಸತೀಶ್ ಅಭಿನಯದ 'ಅಶೋಕ ಬ್ಲೇಡ್' ಚಿತ್ರದ ನಿರ್ದೇಶಕ ವಿನೋದ್ ದೋಂಡಾಲೆ ಇಂದು ಬೆಳಗ್ಗೆ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುತಿ ನಗರದಲ್ಲಿ ಘಟನೆ ನಡೆದಿದೆ.
ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನೀನಾಸಂ ಸತೀಶ್ ಅವರ ಅಶೋಕ್ ಬ್ಲೇಡ್ ಚಿತ್ರದ ನಿರ್ದೇಶಕನಾಗಿರುವ ವಿನೋದ್, ಕೊನೆಯ ಹಂತದ ಚಿತ್ರೀಕರಣ ಮಾತ್ರ ಬಾಕಿ ಉಳಿಸಿಕೊಂಡಿದ್ದರು. ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಕರಿಮಣಿ, ಮೌನರಾಗ ಸೇರಿದಂತೆ ಕೆಲ ಪ್ರಮುಖ ಧಾರಾವಾಹಿಯ ನಿರ್ದೇಶಕರಾಗಿದ್ದರು. ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ನಾಗರಭಾವಿಯಲ್ಲಿ ನೆಲೆಸಿದ್ದರು. ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪಿ.ಶೇಷಾದ್ರಿ ಹಾಗೂ ಟಿ.ಎನ್ ಸೀತಾರಾಮ್ ಗರಡಿಯಲ್ಲಿ ವಿನೋದ್ ಪಳಗಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಸತೀಶ್ ನಿನಾಸಂ, ನಿರ್ದೇಶಕ ವಿನೋದ್ ಜೊತೆ ನಿನ್ನೆಯಷ್ಟೇ ಸಿನಿಮಾದ ಲಾಸ್ಟ್ ಶೆಡ್ಯೂಲ್ ಬಗ್ಗೆ ಮಾತುಕತೆ ನಡೆಸಿದ್ದೆ. ಚೆನ್ನಾಗಿಯೇ ಇದ್ದರು. ದಿಢೀರ್ ಎಂದು ಈ ನಿರ್ಧಾರ ಏಕೆ ತೆಗೆದುಕೊಂಡರು ಎಂಬುದು ನಿಜಕ್ಕೂ ನಮಗೆಲ್ಲರಿಗೂ ಆಘಾತ ತಂದಿದೆ. 15 ದಿನಗಳ ನಂತರ ಕೊನೆಯ ಹಂತದ ಶೂಟಿಂಗ್ ನಡೆಸುವುದಕ್ಕೆ ಓಕೆ ಅಂದಿದ್ದರು ಎಂದು ಸ್ಮರಿಸಿದರು. ಆತ್ಮಹತ್ಯೆಗೆ ಸಾಲ ಶೂಲವೇ ಕಾರಣ ಎನ್ನಲಾಗುತ್ತಿದ್ದು, ಪೊಲೀಸ್ ತನಿಖೆ ಬಳಿಕ ಸ್ಪಷ್ಟ ಮಾಹಿತಿ ಸಿಗಲಿದೆ.
ಇದನ್ನೂ ಓದಿ: Video: ಜೈನ ಸಮುದಾಯದ ಕುರಿತು ವಿವಾದಾತ್ಮಕ ಹೇಳಿಕೆ ಆರೋಪ: ಕ್ಷಮೆಯಾಚಿಸಿದ ನಾದಬ್ರಹ್ಮ ಹಂಸಲೇಖ - Hamsalekha Apology
ನಿರ್ದೇಶಕರ ನಿಧನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಲಾಗುತ್ತಿದೆ. ನಿರ್ದೇಶಕ ಪಿ. ಶೇಷಾದ್ರಿ ಪೋಸ್ಟ್ ಒಂದನ್ನು ಶೇರ್ ಮಾಡಿ, ಬೇಸರ ವ್ಯಕ್ತಪಡಿಸಿದ್ದಾರೆ. ''ನೀನು ಹೀಗೆ ಮಾಡಬಾರದಿತ್ತು ವಿನೋದ. ಒಂದು ಮಾತಾದರೂ ಹೇಳಬಾರದಿತ್ತೇ? ನನ್ನ ನೆನಪು ನಿನಗೆ ಬರಲಿಲ್ಲ ಯಾಕೆ? ಹೆಂಡತಿ ಮಕ್ಕಳ ಮುಖವೂ ಕಣ್ಣ ಮುಂದೆ ಬರಲಿಲ್ಲವೇ?. ತಪ್ಪು ಮಾಡಿಬಿಟ್ಟೆ ನೀನು. ಅಲ್ಲಾದರೂ ನೆಮ್ಮದಿ ಸಿಗಲಿ'' ಎಂದು ಬರೆದುಕೊಂಡಿದ್ದಾರೆ.